ಹೋಳಿ ಹಬ್ಬದ ನಿಮಿತ್ತ ಹಲಗೆ ಬಾರಿಸುವ ವಿಚಾರವಾಗಿ 2 ಕೋಮಿನ ಮಧ್ಯೆ ಗಲಾಟೆ
ಒಟ್ಟಿನಲ್ಲಿ ಯ:ಕಶ್ಚಿತ್ ಹಲಗೆ ವಿಚಾರಕ್ಕೆ ಶುರುವಾದ ಜಗಳ ಎರಡು ಗುಂಪಿನಿಂದ ಎರಡು ಕೋಮಿಗೆ ತಗುಲುವ ಹಂತಕ್ಕೆ ತಲುಪಿದೆ. ಇನ್ನೂ ಹೋಳಿ ಹಬ್ಬ ಮುಂದೆ ಇದ್ದು ಪ್ರಕರಣ ಬೂದಿ ಮುಚ್ಚಿದ ಕೆಂಡದಂತೆ ಇದೆ.
ಹೋಳಿ ಹಬ್ಬ ಸಮೀಪ ಬರುತ್ತಿದ್ದಂತೆ (Holi festival celebrations) ನಾಡಿನಾದ್ಯಂತ ಹಲಗೆ ಸದ್ದು ಕೇಳಿ ಬರುತ್ತದೆ. ಹಳ್ಳಿ ಹಳ್ಳಿಗಳಲ್ಲಿ ನಗರ ಪಟ್ಟಣಗಳಲ್ಲಿ ಯುವಕರು ಬಾಲಕರು ಎಲ್ಲರೂ ಸೇರಿ ಹಲಗೆ ಬಾರಿಸುವುದು ಸಾಮಾನ್ಯ. ಆದರೆ ಹಲಗೆ ಬಾರಿಸಬೇಡಿ ಎಂಬ ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದು ಮಾರಾಮಾರಿಯಾಗಿದೆ. ಇದು ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನು ರೊಚ್ಚಿಗೇಳುವಂತೆ ಮಾಡಿದೆ. ಹಲಗೆ ಬಾರಿಸುವ ವಿಚಾರಕ್ಕಾಗಿ ಜಗಳ (Fight) ನಡೆದು ಮಾರಾಮಾರಿ ಆದಕಾರಣ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರು ಮತ್ತು ಯುವಕರು. ಹಲಗೆ ಬಾರಿಸಿದ್ದನ್ನು ವಿರೋಧಿಸಿದ್ದಕ್ಕೆ ಪ್ರತ್ಯುತ್ತರವಾಗಿ ಅದೇ ಜಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ಹಲಗೆ ಬಾರಿಸುವ ಮೂಲಕ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹೌದು ಬಾಗಲಕೋಟೆಯ (Bagalkot) ನವನಗರದ ಸೆಕ್ಟರ್ ನಂಬರ್ 48 ರಲ್ಲಿ ಹಲಗೆ ಬಾರಿಸುವ ವಿಚಾರಕ್ಕೆ ತಕರಾರು ಶುರುವಾದ ಕಾರಣ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಮಾರಮಾರಿ ನಡೆದಿದೆ. ಸೋಮವಾರ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಮಹಿಳೆಯರು, 4 ಯುವಕರು ಗಾಯಗೊಂಡು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಸೇರಿದ್ದಾರೆ.
ನವನಗರದ ಸೆಕ್ಟರ್ ನಂಬರ್ 48 ನಿವಾಸಿ ಬಸವರಾಜ ಹಾಗೂ ಹನುಮಂತ ಸೇರಿದಂತೆ ಅವರ ಸ್ನೇಹಿತರು ತಮ್ಮ ಮನೆ ಮುಂದೆ ಹಲಗೆ ಬಾರಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದಂತಹ ಇನ್ನೊಂದು ಗುಂಪಿನ ಜನರು ಇಲ್ಲಿ ಹಲಗೆ ಬಾರಿಸಬೇಡಿ ಎಂದು ಬೆದರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಗಳ ಆರಂಭವಾಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹನುಮಂತ ಅಂಬಿಗೇರ ಬಸವರಾಜ ಅಂಬಿಗೇರ, ಮಾದೇವಿ ಸವಿತಾ ವಾಲಿಕಾರ್ ಎಂಬವರಿಗೆ ಗಾಯಗಳಾಗಿವೆ. ಇನ್ನೊಂದು ಗುಂಪಿನಲ್ಲಿ ಯಮನೂರಿ ಸೋಹೈಲ್ ಸದಾ ರೋಶನ್ ಬಿ ಎಂಬುವರಿಗೆ ಗಾಯವಾಗಿದ್ದು 2 ಗುಂಪಿನ ಒಟ್ಟು ಎಂಟು ಜನರು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿ ಬಸವರಾಜ ಅಂಬಿಗೇರ ಹಲಗೆ ಬಾರಿಸುವ ವಿಚಾರಕ್ಕೆ ಜಗಳ ನಡೆದು ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಕೂಡ ಗಮನಿಸದೆ ಫಕ್ರು ಗೈಬು ಸಾಹಿಲ್, ಆದಿಲ್, ಯಮನೂರಿ, ಸಮೀರ್ ಸೇರಿದಂತೆ ಕೆಲ ಮಹಿಳೆಯರ ಜೊತೆಗೂಡಿ 30 ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಇನ್ನೊಂದು ಗುಂಪಿನಲ್ಲಿ ಗಾಯಗೊಂಡಿರುವ ಅಬ್ದುಲ್ ಹಲಗೆ ಬಾರಿಸುವ ವಿಚಾರಕ್ಕಾಗಿ ಜಗಳ ನಡೆದಿಲ್ಲ. ಮಹಿಳೆಯ ಫೋಟೊ ತೆಗೆದರು ಎಂಬ ಕಾರಣಕ್ಕಾಗಿ ಮಹಿಳೆಯರು ಮೊದಲು ಜಗಳ ಮಾಡುತ್ತಿದ್ದರು. ನಾವು ಬಿಡಿಸಲು ಹೋದಾಗ ನಮ್ಮ ಮೇಲೆಯೂ ಹಲ್ಲೆ ಮಾಡಲಾಗಿದೆ ಅಂತಾರೆ.
ಯಾವಾಗ ಹಲಗೆ ಗಲಾಟೆ ವಿಚಾರ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ತಿಳಿಯಿತೊ, ಇದೇ ವಿಚಾರವನ್ನು ಮುಂದಿಟ್ಕೊಂಡು ಹಿಂದೂ ಸಂಘಟನೆ ಕಾರ್ಯಕರ್ತರು ಹಲಗೆ ವಿಚಾರವಾಗಿ ಗಲಾಟೆ ನಡೆದ ಜಾಗದಲ್ಲಿ ನೂರಾರು ಯುವಕರು ಸೇರಿಕೊಂಡು ಹಲಿಗೆ ಬಾರಿಸಿ, ಪ್ರತ್ಯುತ್ತರವಾಗಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ತಾಸಿಗೂ ಅಧಿಕ ಕಾಲ ಸೆಕ್ಟರ್ ನಂ 48 ರಲ್ಲಿ ಹಲಗೆ ಬಾರಿಸಿ ಮೆರವಣಿಗೆ ಕೂಡ ನಡೆಸಿದರು. ಕೇಸರಿ ಧ್ವಜ ಹಾರಾಡಿಸುವ ಮೂಲಕ ಹಿಂದೂಪರ ಘೋಷಣೆ ಕೂಗಿ ಹಲಗೆ ಬಾರಿಸಿ ಎದುರಾಳಿಗೆ ತಕ್ಕ ಉತ್ತರ ನೀಡಿದರು. ಹೋಳಿ ಹಬ್ಬದಲ್ಲಿ ಹಲಗೆ ಬಾರಿಸೋದು ಹೋಳಿ ಹಬ್ಬದ ಸಂಸ್ಕೃತಿ ಸಂಭ್ರಮ. ಹಿಂದಿನಿಂದಲೂ ಕೂಡ ಇದು ನಡೆದುಕೊಂಡು ಬರುತ್ತಿದೆ. ಇದಕ್ಕೆ ಅಡ್ಡಿಪಡಿಸಿದರೆ ನಾವು ಸಹಿಸುವುದಿಲ್ಲ. ಸದ್ಯದ ಮಟ್ಟಿಗೆ ನಾವು ಶಾಂತ ರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಪೊಲೀಸರು ಕೂಡಲೇ ಹಲ್ಲೆ ಮಾಡಿದವರನ್ನ ಬಂಧಿಸಬೇಕು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ನವನಗರದ 46ನೇ ಸೆಕ್ಟರ್ ನಲ್ಲಿ ಪಾರ್ಟಿ ಸಿಕ್ಸ್ ಗ್ಯಾಂಗ್ ಎಂಬ ಹೆಸರಲ್ಲಿ ಯುವಕರು ಒಂದು ತಂಡ ಕಟ್ಟಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದು, ಅವರನ್ನು ಮಟ್ಟ ಹಾಕಬೇಕೆಂದು ಆಗ್ರಹ ಮಾಡಿದರು.
ಒಟ್ಟಿನಲ್ಲಿ ಯ:ಕಶ್ಚಿತ್ ಹಲಗೆ ವಿಚಾರಕ್ಕೆ ಶುರುವಾದ ಜಗಳ ಎರಡು ಗುಂಪಿನಿಂದ ಎರಡು ಕೋಮಿಗೆ ತಗುಲುವ ಹಂತಕ್ಕೆ ತಲುಪಿದೆ. ಇನ್ನೂ ಹೋಳಿ ಹಬ್ಬ ಮುಂದೆ ಇದ್ದು (March 8, 2023) ಪ್ರಕರಣ ಬೂದಿ ಮುಚ್ಚಿದ ಕೆಂಡದಂತೆ ಇದೆ.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ