ಕೆರೆಯಂತಾದ ಹುನಗುಂದ-ಅಮರಾವತಿ ರಸ್ತೆ, ವಾಹನ ಸವಾರರ ಪರದಾಟ; ಎಷ್ಟೇ ಮನವಿ ಮಾಡಿಕೊಂಡರು ಪರಿಹಾರ ಮಾತ್ರ ಶೂನ್ಯ

| Updated By: ಆಯೇಷಾ ಬಾನು

Updated on: Sep 19, 2021 | 11:13 AM

ಅಂಡರ್ ಬೈಪಾಸ್ನಲ್ಲಿ ನಿಂತ ನೀರಲ್ಲಿ ಟಂಟಂ ಚಲಾಯಿಸುವ ಸಾಹಸಕ್ಕೆ‌ ಚಾಲಕನೊಬ್ಬ ಮುಂದಾಗಿದ್ದು ನೀರಲ್ಲೇ ವಾಹನ ಸಿಲುಕಿದ ಪರಿಣಾಮ ಒಂದು ತಾಸಿಗೂ ಹೆಚ್ಚು ಕಾಲ ವಾಹನ ಹೊರತೆಗೆಯಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೆರೆಯಂತಾದ ಹುನಗುಂದ-ಅಮರಾವತಿ ರಸ್ತೆ, ವಾಹನ ಸವಾರರ ಪರದಾಟ; ಎಷ್ಟೇ ಮನವಿ ಮಾಡಿಕೊಂಡರು ಪರಿಹಾರ ಮಾತ್ರ ಶೂನ್ಯ
ಕೆರೆಯಂತಾದ ಹುನಗುಂದ-ಅಮರಾವತಿ ರಸ್ತೆ, ವಾಹನ ಸವಾರರ ಪರದಾಟ
Follow us on

ಬಾಗಲಕೋಟೆ: ಜಿಲ್ಲೆಯ ಹುನಗುಂದ ಪಟ್ಟಣದ ಬಳಿ ಅದೊಂದು ರಸ್ತೆ ಇದೆ, ಅಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಯಾಕೆಂದರೆ ಅದು ರಸ್ತೆ ಆದರೂ ನೋಡಿದ ತಕ್ಷಣ ಅದು ಕೆರೆಯ ರೀತಿ ಕಂಡು ಬರುತ್ತದೆ. ಪ್ರತಿನಿತ್ಯ ಇಲ್ಲಿ ವಾಹನ ಸವಾರರರು ಸಂಚರಿಸಲು ಇನ್ನಿಲ್ಲದ ಹರಸಾಹಸ ಮಾಡಬೇಕು. ನಿಂತ‌ ನೀರಲ್ಲಿ ಜೀವ ಕೈಯಲ್ಲಿ ಹಿಡಿದು ವಾಹನ ಸಂಚಾರ ಮಾಡಬೇಕು.

ಹುನಗುಂದ-ಅಮರಾವತಿ ರಸ್ತೆ ಕೆರೆಯಂತಾಗಿದೆ. ಇದು ಹುನಗುಂದ ಪಟ್ಟಣದಿಂದ ಅಮರಾವತಿ ಮೂಲಕ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 50 ರ ಅಂಡರ್ ಬೈಪಾಸ್ ರಸ್ತೆ ಇದಾಗಿದ್ದು, ಮಳೆ ನೀರು ನಿಂತು ರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ತಗ್ಗು ದಿನ್ನೆಗಳಿದ್ದು, ಸ್ವಲ್ಪ ಮಳೆಯಾದರೆ ಸಾಕು ತಗ್ಗುಗುಂಡಿಗಳಲ್ಲಿ ನೀರು ನಿಂತು ರಸ್ತೆಗಳು ಹಳ್ಳ ಕೆರೆಗಳಾಗಿ ಬದಲಾಗುತ್ತವೆ‌. ಇದರಿಂದ ವಾಹನ ಸವಾರರು ಎಲ್ಲಿ ಏನು ಅನಾಹುತವಿದೆಯೋ ಎಂಬಂತೆ ಭಯದಲ್ಲೇ ವಾಹನ ಓಡಿಸುವ ಪರಿಸ್ಥಿತಿ ಇದೆ. ನೀರು ನಿಲ್ಲುವ ತೆಗ್ಗಿನಲ್ಲಿ ಬೈಕ್, ಟಂಟಂ, ಆಟೋ ಸವಾರರ ಪರದಾಟ ನಿತ್ಯ ನಿರಂತರವಾಗಿದೆ.

ನೀರಲ್ಲೇ ನಿಂತ ಟಂಟಂ ಹೊರ ತೆಗೆಯಲು ಹರಸಾಹಸ
ಅಂಡರ್ ಬೈಪಾಸ್ನಲ್ಲಿ ನಿಂತ ನೀರಲ್ಲಿ ಟಂಟಂ ಚಲಾಯಿಸುವ ಸಾಹಸಕ್ಕೆ‌ ಚಾಲಕನೊಬ್ಬ ಮುಂದಾಗಿದ್ದು ನೀರಲ್ಲೇ ವಾಹನ ಸಿಲುಕಿದ ಪರಿಣಾಮ ಒಂದು ತಾಸಿಗೂ ಹೆಚ್ಚು ಕಾಲ ವಾಹನ ಹೊರತೆಗೆಯಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಮರಾವತಿ ಮಾರ್ಗದಿಂದ ಹುನಗುಂದ ಪಟ್ಟಣಕ್ಕೆ ಗೂಡ್ಸ್ ತುಂಬಿಕೊಂಡು ಬರುತ್ತಿದ್ದ ಟಂಟಂ ವಾಹನ ನೀರಲ್ಲಿ ಸಿಲುಕಿ ಒಂದು ಗಂಟೆ ಚಾಲಕ ಪರದಾಡಬೇಕಾಯಿತು. ನಂತರ ಟಂಟಂ ವಾಹನದಲ್ಲಿನ ವಸ್ತುಗಳನ್ನು ಖಾಲಿ ಮಾಡಿ ಟ್ರ್ಯಾಕ್ಟರ್ ಸಹಾಯದ ಮೂಲಕ ಹಗ್ಗ ಕಟ್ಟಿ ಟಂಟಂ ತಗ್ಗು ಗುಂಡಿಯಿಂದ ಹೊರಗಡೆ ಸಾಗಿಸಲಾಯಿತು. ಈ ಮಧ್ಯೆ ವಾಹನ ಸವಾರರು ತಮ್ಮ ತಮ್ಮ ಗ್ರಾಮಗಳಿಗೆ ಸಂಚರಿಸಲಾಗದೆ ಸ್ಥಳದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿ ನೀರು ತುಂಬಿ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸಬೇಕಾಗಿದೆ. ತಗ್ಗು ಗುಂಡಿಗಳಲ್ಲಿ‌ ನೀರು ನಿಂತು ವಾಹನ ಸವಾರರಿಗೆ ಸಂಚರಿಸಲು ಆಗೋದಿಲ್ಲ. ಸ್ವಲ್ಪ ಮಳೆ ಬಂದರೆ ಸಾಕು ಅಂಡರ್ ಬೈಪಾಸ್ ನೀರು ನಿಂತು ಹುನಗುಂದ ಹಾಗೂ ಅಮರಾವತಿ ಮಾರ್ಗ ಕೆರೆಯಂತಾಗಿ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತ ಆಗುತ್ತದೆ. ಈ ಬಗ್ಗೆ ಹುನಗುಂದ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಕೊಟ್ಟರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೆ ಈ ಬಗ್ಗೆ ಗಮನ ಹರಿಸಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಅಂದು ಹುನಗುಂದ ಪಟ್ಟಣದ ಮಾಂತೇಶ್ ಎಂಬುವವರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆ ಮೇಲಿಂದ ಮೇಲೆ ಹುನಗುಂದ ಅಂಡರ್ ಬೈಪಾಸ್ ನಲ್ಲಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದು, ಇಲ್ಲಿ ನೀರು ನಿಲ್ಲದಂತೆ ಒಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜನರಿಗೆ ಈ ಸಂಕಷ್ಟದಿಂದ ಮುಕ್ತಿ ನೀಡಬೇಕಿದೆ.

ಕೆರೆಯಂತಾದ ಹುನಗುಂದ-ಅಮರಾವತಿ ರಸ್ತೆ, ವಾಹನ ಸವಾರರ ಪರದಾಟ

ಇದನ್ನೂ ಓದಿ: Bengaluru Rain: ಬೆಂಗಳೂರಿನ ಕೆಲವೆಡೆ ವ್ಯಾಪಕ ಮಳೆ; ವಾಹನ ಸವಾರರ ಪರದಾಟ