ಬಾಗಲಕೋಟೆ, ಅ.17: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕೊರತೆ ಉಂಟಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ಕಡಿತಗೊಳಿಸಲಾಗಿದೆ. ಇದರಿಂದ ರೈತರು, ಕಾರ್ಖಾನೆಗಳಿಗೆ ಮಾತ್ರವಲ್ಲದೆ, ನೇಕಾರರ (Weavers) ಜೀವನಕ್ಕೂ ಹೊಡೆತ ನೀಡಿದೆ. ಸಮರ್ಪಕ ವಿದ್ಯುತ್ ನೀಡದ ಹಿನ್ನೆಲೆ ನೇಯ್ಗೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನೊಂದೆಡೆ ವಿದ್ಯುತ್ ಬಿಲ್ ದುಪ್ಪಟ್ಟಾಗಿದ್ದು, ಆರ್ಥಿಕ ಹೊರೆಯೂ ಹೆಚ್ಚಿದೆ ಎಂದು ನೇಕಾರರು ಅಸಮಾಧಾನ ಹೊರಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ನೇಕಾರರು ದಿನಕ್ಕೆ 2 ಸೀರೆ ನೇಯುತ್ತಿದ್ದರು. ಆದರೆ ಇದೀಗ ಉತ್ಪಾದನೆ ಅರ್ಧಕ್ಕೆ ಇಳಿಕೆಯಾಗಿದೆ. ಗುಳೇದಗುಡ್ಡ ಕಣದ ಉತ್ಪಾದನೆಯಲ್ಲೂ ಇಳಿಕೆಯಾಗಿದೆ. ಮೊದಲು 10 ರಿಂದ 15 ಕಣ ತಯಾರಾಗುತ್ತಿದ್ದವು. ಆದರೆ ಈಗ ವಿದ್ಯುತ್ ಕಡಿತದಿಂದಾಗಿ 4 ರಿಂದ 4ಕ್ಕೆ ಇಳಿಕೆಯಾಗಿದೆ ಎಂದು ನೇಕಾರರು ಹೇಳಿಕೊಂಡಿದ್ದಾರೆ.
ಕರೆಂಟ್ ಯಾವಾಗ ಹೋಗುತ್ತೊ ಬರುತ್ತದೋ ಗೊತ್ತಿಲ್ಲ. ಸದ್ಯ ವಿದ್ಯುತ್ ಬಿಲ್ ದುಪ್ಪಟ್ಟಾಗಿ 1 ಸಾವಿರ ಬರುತ್ತಿದ್ದ ಬಿಲ್ 2 ಸಾವಿರ ರೂಪಾಯಿ ಆಗಿದೆ. ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರು 20 ಹೆಚ್ಪಿ ವರೆಗೆ ಉಚಿತ ವಿದ್ಯುತ್ ನಿಡುವ ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆಯಾದ ನಂತರ ವಿದ್ಯುತ್ ಬಿಲ್ ದುಪ್ಪಟ್ಟು ಮಾಡಿದ್ದು, ಆರ್ಥಿಕ ಸಮಸ್ಯೆ ಉಂಟಾಗಿದೆ ಎಂದು ನೇಕಾರರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾಜಿ ಶಾಸಕ ಶ್ರೀಮಂತ ಪಾಟೀಲ್
ಮೊದಲು ಒಂದು ಹೆಚ್ಪಿ ಸಾಮರ್ಥ್ಯದ ಪವರ್ ಲೂಮ್ಗೆ 90 ರೂ. ಮಿನಿಮಮ್ ಚಾರ್ಜ್ ಇತ್ತು. ಇದೀಗ 140 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಉಚಿತವಾಗಿ ಕೊಟ್ಟ ಭಾಗ್ಯಗಳಿಂದಲೇ ನೇಕಾರರಿಗೆ ಈ ತೊಂದರೆ ಆಗಿದೆ. ನಮಗೆ ಉಚಿತ ಕೊಡದೆ ಇದ್ದರೂ ಪರವಾಗಿಲ್ಲ. ಮೊದಲಿನಷ್ಟೇ ಬಿಲ್ ಬಂದರೆ ಸಾಕು. ನೇಕಾರರ ಕಷ್ಟಕ್ಕೆ ಸರಕಾರ ಸ್ಪಂದಿಸಬೇಕು ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಗದಗ ಜಿಲ್ಲೆಯ ನೇಕಾರರು, ನುಡಿದಂತೆ ನಡೆದ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ನೇಕಾರರಿಗೆ ಕೊಟ್ಟ ಭರವಸೆ ಈಡೇರಿಸುವ ಬಗ್ಗೆ ಮರತಂತೆ ಕಾಣುತ್ತಿದೆ. ಭರವಸೆ ಈಡೇರಿಸುವವರೆಗೂ ವಿದ್ಯುತ್ ಬಿಲ್ ಕಟ್ಟಲ್ಲ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ