ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾಜಿ ಶಾಸಕ ಶ್ರೀಮಂತ ಪಾಟೀಲ್
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಭೀಕರ ಬರದಿಂದ ಅನ್ನದಾತರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ಹಾಗಾಗಿ ಬಿಜೆಪಿ ಮಾಜಿ ಶಾಸಕ ಶ್ರೀಮಂತ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು, ಕೇವಲ ಬರಗಾಲ ಘೋಷಣೆ ಬೇಡ, ದನಕರುಗಳಿಗೆ ಮೇವು, ಕುಡಿಯುವ ನೀರು ಮತ್ತು ರೈತರ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕೋಡಿ, ಅಕ್ಟೋಬರ್ 16: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಬಿಜೆಪಿ ಮಾಜಿ ಶಾಸಕ ಶ್ರೀಮಂತ ಪಾಟೀಲ್ (Shrimant Patil) ನೇತೃತ್ವದಲ್ಲಿ ಪ್ರತಿಭಟನೆ ನೀಡಲಾಯಿತು. ಈ ವೇಳೆ ಮಾಧ್ಯದವರೊಂದಿಗೆ ಮಾತನಾಡಿದ ಅವರು, 7 ಗಂಟೆ ತ್ರಿಫೇಸ್, ರಾತ್ರಿಯಿಡೀ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ಕೇವಲ ಬರಗಾಲ ಘೋಷಣೆ ಬೇಡ, ದನಕರುಗಳಿಗೆ ಮೇವು, ಕುಡಿಯುವ ನೀರು ಮತ್ತು ರೈತರ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ 25-30 ವರ್ಷಗಳಿಂದ ಹಗಲು 7 ಗಂಟೆ ತ್ರಿಫೇಸ್ ಹಾಗೂ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿದ್ದರು. ಆದರೆ ಈಗ 2 ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸ್ಥಗಿತವಾಗಿದೆ. ಒಂದು ಎಕರೆಗೆ 2 ಲಕ್ಷ ರೂ. ಖರ್ಚು ಮಾಡಿ ಬೆಳೆದ ಬೆಳೆ ನಷ್ಟವಾಗಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರದಲ್ಲಿ ಒಂದು ದಿನ ಕೃಷ್ಣಾ ನದಿ ನೀರು ಬಳಕೆ ಮಾಡದ ಬಗ್ಗೆ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನದಿಯಲ್ಲಿ ನೀರು ಕಡಿಮೆ ಇರಬಹುದು, ನೀರು ನಿಲ್ಲಿಸಿ ಬೆಳೆ ಹಾಳು ಮಾಡುವುದು ಒಳ್ಳೆಯದಲ್ಲ. ಮಹಾರಾಷ್ಟ್ರ ಸರ್ಕಾರದವರು ವಿದ್ಯುತ್ ತಯಾರು ಮಾಡಿ ಸಮುದ್ರಕ್ಕೆ ನೀರು ಬಿಡುತ್ತಿದ್ದಾರೆ. ಎಷ್ಟು ವಿದ್ಯುತ್ ತಯಾರಾಗುತ್ತೆ ಅಷ್ಟು ವಿದ್ಯುತ್ ಅಥವಾ ಹಣ ನೀಡಿ. ಆ ನಾಲ್ಕು ಟಿಎಂಸಿ ನೀರು ಖರೀದಿಸಿ ರೈತರ ಬೆಳೆ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ವಿರುದ್ಧ ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ವಾಗ್ದಾಳಿ
ಚಿಕ್ಕೋಡಿಯಲ್ಲಿ ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮಾತನಾಡಿದ್ದು, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇಡೀ ಉತ್ತರ ಕರ್ನಾಟಕ ರೈತರು ಧಿಕ್ಕಾರ ಹಾಕಿದ್ದಾರೆ. ಈ ಭಾಗದಲ್ಲಿ ಕಳೆದ ಐದು ತಿಂಗಳಲ್ಲಿ ಕೇವಲ ಹತ್ತು ದಿನ ಮಳೆಯಾಗಿದೆ. ಇಡೀ ಉತ್ತರ ಕರ್ನಾಟಕವನ್ನು ಬರ ಕಿತ್ತುಕೊಂಡು ತಿನ್ನುತ್ತಿದೆ. ಕಬ್ಬು, ಮೆಕ್ಕೆಜೋಳ, ಸೋಯಾಬಿನ್ ಬೆಳೆಯುವ ರೈತ ಕಂಗಾಲಾಗಿದ್ದಾನೆ. ಕಾಂಗ್ರೆಸ್ ಸರ್ಕಾರಕ್ಕೆ ರೈತರು ಶಾಪ ಹಾಕುತ್ತಿದ್ದಾರೆ.
ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡುವ ವಾಗ್ದಾನ ಕಾಂಗ್ರೆಸ್ ಸರ್ಕಾರ ತಪ್ಪಿದೆ. ರಾಜ್ಯಕ್ಕೆ ಒಟ್ಟಾರೆ 14 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ ಇಂದು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ನಾಲ್ಕು ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಮಳೆಯಾಗಿಲ್ಲ ಡ್ಯಾಂಗಳಲ್ಲಿ ನೀರಿಲ್ಲ ಎಂದು ಗೊತ್ತಿದ್ದರೂ ಸರ್ಕಾರ ಏಕೆ ಮೊದಲೇ ಎಚ್ಚೆತ್ತಿಕೊಳ್ಳಲಿಲ್ಲ. ಸಿಎಂ, ಇಂಧನ ಸಚಿವರಿಗೆ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಎಂಬ ಅರಿವಿಲ್ವಾ? ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ಅವಕಾಶ ಇದ್ದು ಮೊದಲೇ ಏಕೆ ಮಾತನಾಡಲಿಲ್ಲ ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮೂರು ತಿಂಗಳಲ್ಲಿ ನಮಗೆ ಸಂಕಷ್ಟ ತಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇದೆಯಾ? ಸಿಎಂ ವಿರುದ್ಧ ರೈತನ ಆಕ್ರೋಶ
ರಾಜ್ಯ ಸರ್ಕಾರಕ್ಕೆ ಹಣಕಾಸಿನ ಕೊರತೆ ಇದೆ ಎಂದು ಬೇರೆ ರಾಜ್ಯಗಳು ಕರ್ನಾಟಕಕ್ಕೆ ವಿದ್ಯುತ್ ಕೊಡಲು ತಯಾರಿಲ್ಲ. ಹಣಕಾಸಿನ ತೊಂದರೆಯಿದ್ದು ಸರ್ಕಾರ ಅಳಿವಿನ ಅಂಚಿನಲ್ಲಿದೆ. ಇವರಿಗೆ ಕರೆಂಟ್ ಕೊಟ್ಟರೆ ಹಣ ಪಾವತಿ ಆಗಲ್ಲ ಎಂಬ ಭಯ ಅವರಿಗಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಆಗುವವರೆಗೂ ಅದನ್ನ ಕಾಯ್ದುಕೊಳ್ಳಬೇಕಾಗಿದೆ. ಯಾವಾಗ ಬೇಕಾದರೂ ವಿದ್ಯುತ್ ತೆಗೆದು ರೈತರನ್ನು ಕಗ್ಗತ್ತಲಲ್ಲಿ ದೂಡಿದ್ದಾರೆ.
ನದಿ, ಬೋರ್‌ವೆಲ್, ಬಾವಿಗಳಲ್ಲಿ ನೀರಿದೆ. ಆದರೆ ವಿದ್ಯುತ್ ನೀಡಲು ತಯಾರಿಲ್ಲ. ಯಾವ ಮಂತ್ರಿಯೂ ಭೇಟಿ ನೀಡುತ್ತಿಲ್ಲ, ಬರ ಘೋಷಣೆಗೆ ಮೂರು ತಿಂಗಳು ತಗೆದುಕೊಂಡರು. ಬೆಳೆ ಹಸಿರು ಕಂಡರು ಇಳುವರಿ ಇಲ್ಲ. ಐದು ಗಂಟೆ ವಿದ್ಯುತ್ ನೀಡಿದರೆ ಉಪಯೋಗ ಆಗಲ್ಲ. ಕೇಂದ್ರ ಸರ್ಕಾರ ಏನ್ ಮಾಡಬೇಕು ಅಂತಾ ಬಯಸುತ್ತೀರಿ. ಕೇಂದ್ರದ ಮೇಲೆ ಬೊಟ್ಟು ಮಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:58 pm, Mon, 16 October 23