ರಮೇಶ್ ಜಾರಕಿಹೊಳಿ ಆಯ್ತು ಈಗ ಸತೀಶ್ ಜಾರಕಿಹೊಳಿ ಸರದಿ: ಅನಿಲ್ ಬೆನಕೆ ಹೊಸ ಬಾಂಬ್
ಸರ್ಕಾರಕ್ಕೆ ಭರ್ಜರಿ ಬಹುಮತ ಇದ್ದರೂ ಪಕ್ಷದಲ್ಲಿ ನಾಲ್ಕೈದು ಗುಂಪುಗಳು ಸೃಷ್ಟಿ ಆಗಿ ಬಿಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲೂ ನಾಲ್ಕು ಗುಂಪುಗಳು ಆಗಿವೆ. ಬರುವ ದಿನಗಳಲ್ಲಿ ಎನಾದ್ರೂ ಆದ್ರೇ ಬೆಳಗಾವಿಯಿಂದ ಆಗುತ್ತೆ. ಹಳೆ ಇತಿಹಾಸದಂತೆ ಮುಂದೆಯೂ ಆಗಲಿದೆ ಎಂದು ಅನಿಕ್ ಬೆನಕೆ ಹೇಳಿದ್ದಾರೆ.
ಬೆಳಗಾವಿ, ಅಕ್ಟೋಬರ್ 17: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ವದಂತಿಗಳ ನಡುವೆಯೇ ಬೆಳಗಾವಿಯಲ್ಲಿ ಬಿಜೆಪಿ ಮಾಜಿ ಶಾಸಕ ಅನಿಲ್ ಬೆನಕೆ (Anil Benake) ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬಂಡಾಯ ಸಾಧ್ಯತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲಿ ಬೆಳಗಾವಿ ರಾಜಕಾರಣ ವಿಶೇಷವಾದದ್ದು. ರಾಜಕೀಯದಲ್ಲಿ ಎನಾದ್ರೂ ಭೂಕಂಪ ಆಗಬೇಕು ಅಂದ್ರೆ ಬೆಳಗಾವಿಯಿಂದ ಶುರುವಾಗುತ್ತದೆ. ಹಿಂದಿನ ಬಾರಿ ರಮೇಶ್ ಜಾರಕಿಹೊಳಿ ಇಲ್ಲಿಂದ ಬಂಡಾಯ ಶುರು ಮಾಡಿದ್ದರು. ಆ ನಂತರ ರಾಜಕೀಯದಲ್ಲಿ ದೊಡ್ಡ ಭೂಕಂಪ ಆಯ್ತು ಎಂದು ಹೇಳಿದ್ದಾರೆ.
ಮುಂದೆ ಬರುವ ಕಾಲದಲ್ಲಿ ಎನಾದ್ರೂ ಆಗಬೇಕು ಅಂದ್ರೆ ಬೆಳಗಾವಿ ಹೆಸರಿನಲ್ಲಿ ಇಡೀ ರಾಜ್ಯದಲ್ಲಿ ಸಮಸ್ಯೆ ಆಗೋದು. ನಾಲ್ಕೈದು ದಿನದಿಂದ ಆ ರೀತಿ ಜಿಲ್ಲೆಯಲ್ಲಿ ಚರ್ಚೆ ಆಗುತ್ತಿದೆ. ಕದ್ದು ಮುಚ್ಚಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ನಡೆದಿದೆ. ಅಭಿವೃದ್ಧಿ ಬಿಟ್ಟು ಒಳಗಿಂದಲೇ ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ. ಸರ್ಕಾರದಲ್ಲಿ ಶಾಂತತೆ ಇಲ್ಲಾ, ಒಗ್ಗಟ್ಟಿಲ್ಲ. ಸರ್ಕಾರಕ್ಕೆ ಎನಾದ್ರೂ ತೊಂದರೆ ಆದರೆ ಬೆಳಗಾವಿಯಿಂದಲೇ ಆಗೋದು. ಬೆಳಗಾವಿಯಿಂದಲೇ ರಾಜಕೀಯದಲ್ಲಿ ಭೂಕಂಪ ಆಗೋದು. ಐದು ತಿಂಗಳ ನಂತರ ಸರ್ಕಾರದ ಪರಿಸ್ಥಿತಿ ಗೊತ್ತಾಗುತ್ತಿದೆ ಎಂದು ಬೆನಕೆ ಹೇಳಿದ್ದಾರೆ.
ಸರ್ಕಾರಕ್ಕೆ ಭರ್ಜರಿ ಬಹುಮತ ಇದ್ದರೂ ಪಕ್ಷದಲ್ಲಿ ನಾಲ್ಕೈದು ಗುಂಪುಗಳು ಸೃಷ್ಟಿ ಆಗಿ ಬಿಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲೂ ನಾಲ್ಕು ಗುಂಪುಗಳು ಆಗಿವೆ. ಅಧ್ಯಕ್ಷರ ಗುಂಪು, ಇಬ್ಬರು ಸಚಿವರದ್ದು ಬೇರೆ ಬೇರೆ ಗುಂಪುಗಳಾಗಿವೆ. ಯಾರು ಯಾರು ಮುಖ ನೋಡಲು ಸಾಧ್ಯವಿಲ್ಲದಂತಿದೆ ಪರಿಸ್ಥಿತಿ. ಬರುವ ದಿನಗಳಲ್ಲಿ ಎನಾದ್ರೂ ಆದ್ರೇ ಬೆಳಗಾವಿಯಿಂದ ಆಗುತ್ತೆ. ಹಳೆ ಇತಿಹಾಸದಂತೆ ಮುಂದೆಯೂ ಆಗಲಿದೆ ಎಂದು ಅನಿಕ್ ಬೆನಕೆ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಚಿವರ ಮುಸುಕಿನ ಗುದ್ದಾಟ: ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಜಟಾಪಟಿ
ಸತೀಶ್ ಜಾರಕಿಹೊಳಿ ಅವರು 20 ಶಾಸಕರನ್ನು ಕರೆದುಕೊಂಡು ಮೈಸೂರು ದಸರಾ ಪ್ರವಾಸಕ್ಕೆ ತೆರಳಲು ಯೋಜಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸಿದ್ದರು. ಆ ನಂತರ ಪರಿಸ್ಥಿತಿ ತಿಳಿಯಾಗಿತ್ತು. ಪಕ್ಷದ ವಿರುದ್ಧ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಅನೇಕ ನಾಯಕರೂ ಸ್ಪಷ್ಟನೆ ನೀಡಿ ಬಂಡಾಯವಿಲ್ಲ ಎಂದು ಸಾರಿ ಹೇಳಿದ್ದರು. ಇಷ್ಟಾದರೂ ಸತೀಶ್ ಜಾರಕಿಹೊಳಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದು ನಿಜ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿತ್ತು. ಈ ಮಧ್ಯೆ, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಶೀತಲ ಸಮರ ನಡೆಯುತ್ತಿರುವ ಬಗ್ಗೆಯೂ ವರದಿಯಾಗಿರುವುದು ಗಮನಾರ್ಹ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ