ಮೂರು ತಿಂಗಳಲ್ಲಿ ನಮಗೆ ಸಂಕಷ್ಟ ತಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇದೆಯಾ? ಸಿಎಂ ವಿರುದ್ಧ ರೈತನ ಆಕ್ರೋಶ
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ರೈತ ಸುಧಾಕರ್ ಪೂಜಾರಿ ಅವರು ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮೂರು ತಿಂಗಳಲ್ಲಿ ನಮಗೆ ಸಂಕಷ್ಟ ತಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇದೆಯಾ? ರೈತರಿಗೆ ಒಂದು ತಿಂಗಳು ಸರ್ಕಾರ ಬಿಟ್ಟು ಕೊಡಿ ಹೇಗೆ ನಡೆಸಬೇಕು ನಾವು ತೋರಿಸುತ್ತೇವೆ ಎಂದಿದ್ದಾರೆ.
ಚಿಕ್ಕೋಡಿ, ಅ.15: ರಾಜ್ಯದೆಲ್ಲೆಡೆ ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಇಡೀ ಬೆಳಗಾವಿ ಜಿಲ್ಲೆ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಂತೂ ಹಿಂದೆಂದೂ ಕೇಳರಿಯದ ಬರಗಾಲವಿದ್ದು ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಮಧ್ಯೆ ಲೋಡ್ ಶೆಡ್ಡಿಂಗ್ ಸಮಸ್ಯೆ ರೈತರನ್ನು ಇನ್ನಷ್ಟು ನರಕಕ್ಕೆ ದೂಕಿದೆ. ಹೀಗಾಗಿ ರೈತರ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನಿಂತು ಸಿಎಂ, ಡಿಸಿಎಂ, ಇಂಧನ ಸಚಿವರಿಗೆ ರೈತ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ರೈತ ಸುಧಾಕರ್ ಪೂಜಾರಿ ಅವರು ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೃಷ್ಣಾ ನದಿಯಲ್ಲಿ ನೀರಿದೆ ಆದ್ರೆ ಬಳಸಲು ಆಗುತ್ತಿಲ್ಲ. ಹಲ್ಲಿದ್ರೆ ಕಡಲೆ ಇಲ್ಲ, ಕಡಲೆ ಇದ್ರೆ ಹಲ್ಲಿಲ್ಲದಂತಹ ಪರಿಸ್ಥಿತಿ ಇದೆ. ಮೂರು ತಿಂಗಳಲ್ಲಿ ನಮಗೆ ಸಂಕಷ್ಟ ತಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇದೆಯಾ? ರೈತರಿಗೆ ಒಂದು ತಿಂಗಳು ಸರ್ಕಾರ ಬಿಟ್ಟು ಕೊಡಿ ಹೇಗೆ ನಡೆಸಬೇಕು ನಾವು ತೋರಿಸುತ್ತೇವೆ. ನಾಟಕ ಮಾಡೋದು ಬಿಟ್ಟು ಕೈ ಮುಗೀತಿನಿ ನಮಗೆ 7 ಗಂಟೆ ವಿದ್ಯುತ್ ನೀಡಿ. ನಿಮ್ಮ ಮನೆಗೆ ಬಂದು ನಾವು ಗ್ಯಾರಂಟಿ ಯೋಜನೆ ಕೊಡಿ ಎಂದು ಕೇಳಿಲ್ಲ. ಸಿದ್ದರಾಮಯ್ಯ, ಡಿಕೆಶಿಗೆ ಊಟದ ವೇಳೆ ತರಕಾರಿ ಇಲ್ಲಂದ್ರೆ ನಡೆಯುತ್ತಾ? ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಅಕ್ಕಾ ಎಲ್ಲಿದಿ ಯವ್ವಾ ಎಂದು ರೈತ ಆಕ್ರೋಶ ಹೊರ ಹಾಕಿದ್ದಾರೆ. ನಿಮಗೆ ಕೈ ಮುಗಿದು ಕೇಳ್ತೀನಿ ವಿದ್ಯುತ್ ನೀಡಿ ಎಂದು ರೈತ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ