Mysuru Dasara 2023: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಿದ ಯದುವೀರ್

Mysuru Dasara 2023: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಿದ ಯದುವೀರ್

ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Oct 15, 2023 | 1:24 PM

ಇಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು. ಮೊದಲಿಗೆ ಸಿಂಹಾಸನದ ಬಳಿ ತೆರಳಿ ಸಿಂಹಾಸನ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿ ಸಿಂಹಾಸನದ ಬಳಿ ಕುಳಿತು ನವಗ್ರಹ ಪೂಜೆ ಮಾಡಿದರು.

ಮೈಸೂರು, ಅ.15: ಮೈಸೂರಿನಲ್ಲಿ ಗತ ವೈಭವ ಕಳೆಗಟ್ಟಿದೆ. ಮೈಸೂರು ದಸರಾಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಅದ್ಧೂರಿ ಚಾಲನೆ ನೀಡಿದ್ದು ದಸರಾ ಸಡಗರ ಶುರುವಾಗಿದೆ. ಶತಮಾನಗಳಿಂದ ನಡೆಯುತ್ತಿರುವ ಖಾಸಗಿ ದರ್ಬಾರ್‌ ಇಂದಿನಿಂದ ಆರಂಭವಾಗಿದ್ದು ಇಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು. ಮೊದಲಿಗೆ ಸಿಂಹಾಸನದ ಬಳಿ ತೆರಳಿ ಸಿಂಹಾಸನ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿ ಸಿಂಹಾಸನದ ಬಳಿ ಕುಳಿತು ನವಗ್ರಹ ಪೂಜೆ ಮಾಡಿದರು.

ಬೆಳಗ್ಗೆ 5ರಿಂದಲೇ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭವಾಗಿವೆ. ಚಂಡಿಕಾಹೋಮ, ಲಲಿತಾ ಸಹಸ್ರನಾಮ ಸಹಿತ ನಾನಾ ಪೂಜೆಗಳು ನೆರವೇರಿದವು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ತ್ರಿಷಿಕಾ ಕುಮಾರಿ ಹಾಗೂ ಸಂಸ್ಥಾನದವರು, ಅರಸು ಮನೆತನಗಳ ಹಿರಿಯರು ಇಡೀ ಚಟುವಟಿಕೆಯಲ್ಲಿ ಭಾಗಿಯಾದರು. ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ನಡೆಯಿತು.ಬೆಳಗ್ಗೆ 07.05 ರಿಂದ 7.45ರ ಶುಭ ಲಗ್ನದಲ್ಲಿ ವಾಣಿವಿಲಾಸ ಅರಮನೆಯಲ್ಲಿ ಕಂಕಣಧಾರಣೆ ನೆರವೇರಿಸಲಾಯಿತು.

ಇನ್ನು ಬೆಳಗ್ಗೆ 9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನವಾದವು. ಬೆಳಗ್ಗೆ 10.15ಕ್ಕೆ ಕಳಸ‌ ಪೂಜೆ, ಸಿಂಹಾಸನ‌ ಪೂಜೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಸಿಂಹಾಸನಾರೂಢರಾದ ಯದುವೀರ್‌ 11.50ರವರೆಗೆ ಖಾಸಗಿ ದರ್ಬಾರ್ ಮುಂದುವರೆಸಿದರು. ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ನಂತರ ವೇದ ಘೋಷಗಳೊಂದಿಗೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನ್ನು ಯದುವೀರ್‌ ನೆರವೇರಿಸಿದರು.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ