
ಬಾಗಲಕೋಟೆ, ನವೆಂಬರ್ 14: ರಾಜ್ಯ ಸರ್ಕಾರದ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಮಾಡುವ ಸಾಲದ ಹೊರೆ ಕೊನೆಗೆ ಪ್ರಜೆಗಳ ಮೇಲೂ ಬೀಳುತ್ತದೆ. ಹೀಗಿರುವಾಗ ಸರ್ಕಾರದ ಸಾಲದಲ್ಲಿ ನನ್ನ ಪಾಲಿನ ಹೊಣೆಯನ್ನಾದರೂ ನಾನೇ ತೀರಿಸುತ್ತೇನೆ ಎಂದು ನಿರ್ಧರಿಸಿದ ನಿವೃತ್ತ ಅಧಿಕಾರಿಯೊಬ್ಬರು ಬರೋಬ್ಬರಿ 50 ಸಾವಿರ ರೂಪಾಯಿ ಚೆಕ್ ಅನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಬಾಗಲಕೋಟೆಯ ನವನಗರದ ನಿವಾಸಿ, ನಿವೃತ್ತ ಸರ್ಕಾರಿ ಅಧಿಕಾರಿ ವಿಜಯರಾವ್ ಕುಲಕರ್ಣಿ ಅವರ ಈ ನಡೆ ಇದೀಗ ಗಮನ ಸೆಳೆದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಚೆಕ್ ಕಳುಹಿಸಿರುವ ಅವರು, ತಮ್ಮ ಪಾಲಿನ ಸಾಲದ ಹೊರೆ ತಗ್ಗಿಸುವ ಪ್ರಯತ್ನ ಮಾಡಿದ್ದಾರೆ.
ಬಾಗಲಕೋಟೆಯ ನವನಗರದ ಸೆಕ್ಟರ್ 2ರ ನಿವಾಸಿಯಾಗಿರುವ ವಿಜಯರಾವ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಬಾಗಲಕೋಟೆ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯ ಸರ್ಕಾರದ ಸಾಲ 8.24 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಪ್ರಜೆಯ ತಲೆಯ ಮೇಲಿನ ಸಾಲದ ಹೊರೆ ಸುಮಾರು 1.20 ಲಕ್ಷ ರೂಪಾಯಿ ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಉಪಚುನಾವಣೆಯ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಈ ವಿಚಾರದಿಂದ ಪ್ರೇರಿತರಾದ ವಿಜಯರಾವ್ ಕುಲಕರ್ಣಿ, ತಮ್ಮ ಪಾಲಿನ ಸಾಲವನ್ನು ತಾವೇ ತೀರಿಸಬೇಕು ಎಂದು ನಿರ್ಧರಿಸಿದ್ದಾರೆ.
2026ರ ಏಪ್ರಿಲ್ 10ರಂದು ವಿಜಯರಾವ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು. ಸರ್ಕಾರದ ಸಾಲದಲ್ಲಿ ತಮ್ಮ ಪಾಲಿನ ಮೊತ್ತವನ್ನು ಪಾವತಿಸಲು ಇಚ್ಛಿಸಿರುವುದಾಗಿ ತಿಳಿಸಿ, ಅದನ್ನು ಯಾವ ರೀತಿ ಪಾವತಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಕೇಳಿದ್ದರು. ಆದರೆ ಸರ್ಕಾರದಿಂದ ಯಾವುದೇ ಉತ್ತರ ಬಂದಿರಲಿಲ್ಲ ಎನ್ನಲಾಗಿದೆ.
ಇದೀಗ ಅಕ್ಟೋಬರ್ 30ರಂದು ಮತ್ತೊಂದು ಪತ್ರ ಬರೆದಿರುವ ಅವರು, ಅಕ್ಟೋಬರ್ 31ರಂದು ತಮ್ಮ ಪಾಲಿನ ಸಾಲದ ಮೊತ್ತವಾಗಿ 50 ಸಾವಿರ ರೂಪಾಯಿಗಳ ಚೆಕ್ ಅನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಪತ್ರದಲ್ಲಿ ಚೆಕ್ ವಿವರ ಹಾಗೂ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಸಾಲದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ತಮ್ಮ ವೈಯಕ್ತಿಕ ಹಣವನ್ನು ನೀಡಲು ಮುಂದಾಗಿರುವ ವಿಜಯರಾವ್ ಅವರ ನಡೆ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ಸಾಮಾನ್ಯ ಪ್ರಜೆಯಾಗಿ ಸರ್ಕಾರದ ಆರ್ಥಿಕ ಹೊಣೆಯಲ್ಲಿ ತಮ್ಮ ಪಾಲನ್ನೂ ನಿಭಾಯಿಸಬೇಕು ಎಂಬ ಅವರ ಆಲೋಚನೆ ಗಮನ ಸೆಳೆದಿದೆ. ಆದರೆ ಸರ್ಕಾರ ಈ ಚೆಕ್ ಸ್ವೀಕರಿಸುತ್ತದೆಯೇ? ಅವರ ಮನವಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ