ಬಾಗಲಕೋಟೆ: ಇತ್ತೀಚೆಗೆ ಎಸ್ಎಸ್ಎಲ್ಸಿ ಫಲಿತಾಂಶ ಬಂದಿದ್ದು 145 ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ಗಳಿಸಿದ್ದಾರೆ. ಕೆಲವರು ಅವರವರ ಅರ್ಹತೆಗೆ ಅನುಗುಣವಾಗಿ ಅಂಕ ಪಡೆದು ಸಂಭ್ರಮಿಸಿದ್ದಾರೆ. ಆದರೆ ಫಲಿತಾಂಶದ ವೇಳೆ ಎಸ್ಎಸ್ಎಲ್ಸಿ ಪರೀಕ್ಷಾ ಬೋರ್ಡ್ ನಿಂದ ಆದ ಯಡವಟ್ಟು ಓರ್ವ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕಂಟಕ ತಂದೊಡ್ಡಿದೆ.
ಸಮಾಜ ವಿಜ್ಞಾನ ವಿಷಯದಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಬಿಸನಾಳ ಗ್ರಾಮದ ವಿದ್ಯಾರ್ಥಿನಿ ಅಮೃತಾ ಉಳ್ಳಾಗಡ್ಡಿ ಪಡೆದಿದ್ದು 80 ಕ್ಕೆ 80 ಅಂಕ. ಆದರೆ ಅಂಕಪಟ್ಟಿಯಲ್ಲಿ ನಮೂದಾಗಿದ್ದು ಕೇವಲ 29 ಅಂಕ. ಇದರಿಂದ ವಿದ್ಯಾರ್ಥಿನಿಗೆ ಬಾರಿ ಆಘಾತವಾಗಿದ್ದು, ಇಷ್ಟೊಂದು ಕಡಿಮೆ ಅಂಕ ಬರೋಕೆ ಸಾಧ್ಯನೆ ಇಲ್ಲ. ನಾನು 80 ಅಂಕ ಬರೆದಿದ್ದೇನೆ ಎಂದು ಉತ್ತರ ಪತ್ರಿಕೆ ನಕಲು ಪ್ರತಿ ತರಿಸಿದಾಗ ಉತ್ತರಪತ್ರಿಕೆಯಲ್ಲಿ 80 ಅಂಕ ಬಿದ್ದಿರೋದು ಕಂಡು ಬಂದಿದೆ.
ಎಸ್ಎಸ್ಎಲ್ಸಿ ಬೋರ್ಡ್ನ ಎಡವಟ್ಟಿನಿಂದ ವೇದನೆ ಅನುಭವಿಸುತ್ತಿರುವ ವಿದ್ಯಾರ್ಥಿನಿ
ಹೌದು ಬಿಸನಾಳ ಗ್ರಾಮದ ಅಮೃತಾ ಪ್ರತಿಭಾವಂತ ವಿಧ್ಯಾರ್ಥಿನಿಯಾಗಿದ್ದು, ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಬಸವಾನಂದ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದಾಳೆ. ಎಸ್ಸೆಸ್ಸೆಲ್ಸಿಯಲ್ಲಿ 506 ಅಂಕಗಳು ಬಂದಿವೆ. ಎಲ್ಲ ವಿಷಯಗಳಲ್ಲೂ ಉತ್ತಮ ಅಂಕ ಪಡೆದಿದ್ದ ಅಮೃತಾ ಸಮಾಜ ವಿಜ್ಞಾನಕ್ಕೆ ಬರೀ 29 ಅಂಕ ಎಂದು ಬಂದಿದೆ. ಅಮೃತಾ ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿದಾಗ ಅಚ್ಚರಿ ಕಾದಿದ್ದು, ಉತ್ತರ ಪತ್ರಿಕೆಯಲ್ಲಿ 80ಕ್ಕೆ 80 ಅಂಕ ಇತ್ತು. ಸಮಾಜವಿಜ್ಞಾನದ 80 ಅಂಕ ಸೇರಿದರೆ ಒಟ್ಟು 557 ಅಂಕಗಳಾಗುತ್ತವೆ. ಆ ಪ್ರಕಾರ 89.12 ಪ್ರತಿಶತ ಅಂಕಗಳಾಗುತ್ತವೆ. ಬಡ ಕೃಷಿ ಕೂಲಿ ಕಾರ್ಮಿಕನ ಮಗಳು ಅಮೃತಾ ಹಲಗಲಿ ಹಾಗೂ ಬಾಗಲಕೋಟೆ ವಸತಿ ಕಾಲೇಜ್ ಗಳಲ್ಲಿ ಪಿಯು ಪ್ರವೇಶಕ್ಕೆ ಅರ್ಜಿ ಹಾಕಿದ್ದರು. ಆದರೆ ಪರೀಕ್ಷಾಮಂಡಳಿ ಯಡವಟ್ಟಿನಿಂದ ಕಡಿಮೆ ಅಂಕ ಅಂಕಪಟ್ಟಿಯಲ್ಲಿ ನಮೂದಾದ ಪರಿಣಾಮ ವಿದ್ಯಾರ್ಥಿನಿಗೆ ಕಡಿಮೆ ಅಂಕ ಎಂದು ವಸತಿ ನಿಲಯಗಳಲ್ಲಿ ಪ್ರವೇಶ ಸಿಕ್ಕಿಲ್ಲ. ಇನ್ನು ಇದೀಗ ವಿದ್ಯಾರ್ಥಿನಿಗೆ 506 ಅಂಕ ಅಲ್ಲ, 557 ಅಂಕ ಬಂದಿದ್ದು, ಶೇ. 89.12 ರಷ್ಟು ಅಂಕ ಬಂದಿದ್ದರೂ ಪ್ರವೇಶ ಸಿಗದೇ ಅನ್ಯಾಯವಾಗಿದೆ. ಈಗಾಗಲೇ ಕಾಲೇಜುಗಳು ಆರಂಭವಾಗಿದ್ದು ಅಂಕಪಟ್ಟಿ ಅವಾಂತರದಿಂದ ಸೀಟ್ ಸಿಗುತ್ತಿಲ್ಲ. ಇದನ್ನೂ ಓದಿ: ‘ರಾಜ್ ಕಪ್’ನಲ್ಲಿ ಡಾಲಿ ಧನಂಜಯ ಟೀಂ ಹೇಗಿದೆ ನೋಡಿ; ಅನಾವರಣವಾಯ್ತು ಜೆರ್ಸಿ
ಇನ್ನು ಈ ಬಗ್ಗೆ ಮಾತಾಡಿದ ವಿದ್ಯಾರ್ಥಿನಿ ಅಮೃತಾ “ನಾನು ಹೆಚ್ಚು ಆಸಕ್ತಿಯಿಂದ ಓದುವ ವಿಷಯ ಅಂದರೆ ಸಮಾಜ ವಿಜ್ಞಾನ ಆದರೆ ಅದೇ ವಿಷಯಕ್ಕೆ ಬರಿ 29 ಅಂಕ ಬಿದ್ದಿದ್ದು ಕಂಡು ಬಹಳ ನೋವಾಯಿತು. ರಿಚೆಕ್ ಗೆ ಹಾಕಿದಾಗ ನಕಲು ಉತ್ತರ ಪತ್ರಿಕೆಯಲ್ಲಿ 80 ಅಂಕ ಇರೋದು ಗೊತ್ತಾಗಿದೆ. ಆದರೆ ತಿದ್ದುಪಡಿ ಮಾಡಿದ ಅಂಕಪಟ್ಟಿ ಇನ್ನು ಕೈಸೇರಿಲ್ಲ ಪರೀಕ್ಷಾ ಮಂಡಳಿ ಯಡವಟ್ಟಿನಿಂದ ನಮಗೆ ವಸತಿ ಕಾಲೇಜುಗಳಲ್ಲಿ ಸೀಟ್ ಸಿಗಲಿಲ್ಲ”ಎಂದು ಅಳಲು ತೋಡಿಕೊಂಡರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನು ಮಗಳಿಗೆ ಬಂದ ಅಂಕದ ಬಗ್ಗೆ ಮಾತಾಡಿದ ತಂದೆ ಹುಲಿಗೆಪ್ಪ “ಎಲ್ಲೇ ವಸತಿನಿಲಯಕ್ಕೆ ಹೋದರೆ ಅಂಕದ ಪ್ರತಿಶತ ಕೇಳ್ತಾರೆ. ಶಾಲೆಗಳಲ್ಲಿಯೂ ಅಂಕ ಕೇಳ್ತಾರೆ. ನಾನು ಹಲಗಲಿ ಹಾಗೂ ಬಾಗಲಕೋಟೆ ವಸತಿನಿಲಯಗಳಿಗೆ ಅರ್ಜಿ ಹಾಕಿದ್ದೆ, ಎಲ್ಲ ಕಡೆ ಪ್ರತಿಶತ ಅಂಕದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ತಾರೆ. ಆದರೆ ಇಂತಹ ಯಡವಟ್ಟಿನಿಂದ ಮಗಳಿಗೆ ಸೀಟ್ ಸಿಕ್ಕಿಲ್ಲ. ನನ್ನ ಮಗಳಿಗೆ ಬಾಗಲಕೋಟೆಯ ವಸತಿ ಸಹಿತ ಕಾಲೇಜ್ ನಲ್ಲಿ ಪ್ರವೇಶ ಕೊಡಿಸಬೇಕು ಎಂದು ಮನವಿ ಮಾಡಿದರು.
ವರದಿ: ರವಿ ಮೂಕಿ, ಟಿವಿ9 ಕನ್ನಡ, ಬಾಗಲಕೋಟೆ
Published On - 2:10 pm, Thu, 2 June 22