ಬಾಗಲಕೋಟೆ: ಇಡೀ ದೇಶವೇ ಇಂದು ಸ್ವಾತಂತ್ರ್ಯ ದಿನಾಚರಣೆಗೆ (Independence Day 2021) ಸಿದ್ಧವಾಗಿದೆ. ದೇಶದ ಮೂಲೆ ಮೂಲೆಗಳಲ್ಲೂ ಕೇಸರಿ, ಬಿಳಿ, ಹಸಿರು ಬಣ್ಣದ ರಾಷ್ಟ್ರಧ್ವಜ ಹಾರಾಡಲು ಆರಂಭವಾಗಿದೆ. ಅದರಂತೆಯೇ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆ ನಮ್ಮ ರಾಷ್ಟ್ರಧ್ವಜ. ಕೇಸರಿ, ಬಿಳಿ, ಹಸಿರು ಬಣ್ಣದ ನಮ್ಮ ರಾಷ್ಟ್ರಧ್ವಜ (National Flag) ನೋಡಿದರೆನೆ ದೇಶಪ್ರೇಮ ಉಕ್ಕಿ ಹರಿಯುತ್ತದೆ. ಆದರೆ ಆ ಧ್ವಜದ ಬಟ್ಟೆ ತಯಾರಾಗುವುದು ಎಲ್ಲಿ ಎಂದು ಗೊತ್ತಾ? ಈ ಪ್ರಶ್ನೆಗೆ ಉತ್ತರ ಗೊತ್ತಿರದ ಅನೇಕರಿಗೆ ಇಲ್ಲಿದೆ ಉತ್ತರ.
ರಾಷ್ಟ್ರಧ್ವಜದ ಬಟ್ಟೆ ತಯಾರಾಗುವುದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ಖಾದಿ ಕೇಂದ್ರದಲ್ಲಿ. ತುಳಸಿಗೇರಿ ಗ್ರಾಮದ ಖಾದಿ ಕೇಂದ್ರದಲ್ಲಿ ವರ್ಷವಿಡೀ ನೇಕಾರ ಮಹಿಳೆಯರು ರಾಷ್ಟ್ರಧ್ವಜ ಬಟ್ಟೆ ತಯಾರಿಕೆಯಲ್ಲಿ ಮಗ್ನರಾಗಿರುತ್ತಾರೆ. ದೇಶದ ಏಕೈಕ ರಾಷ್ಟ್ರಧ್ವಜ ಬಟ್ಟೆ ತಯಾರು ಮಾಡುವ ಖಾದಿ ಕೇಂದ್ರ ಎಂದು ತುಳಸಿಗೇರಿ ಖಾದಿ ಕೇಂದ್ರ ಪ್ರಸಿದ್ಧಿ ಪಡೆದಿದೆ. ಇಲ್ಲಿ ತಯಾರಾದ ರಾಷ್ಟ್ರಧ್ವಜದ ಬಟ್ಟೆ ಇಲ್ಲಿಂದ ಹುಬ್ಬಳ್ಳಿಯ ಬೆಂಗೇರಿ ಖಾದಿ ಕೇಂದ್ರಕ್ಕೆ ರವಾನೆಯಾಗುತ್ತದೆ. ಬೆಂಗೇರಿಯಲ್ಲಿ ಅದಕ್ಕೆ ರಾಷ್ಟ್ರಧ್ವಜದ ರೂಪ ಸಿಗುತ್ತದೆ. ನಂತರ ಅಲ್ಲಿಂದ ದೇಶ ವಿದೇಶದ ಬಾನಂಗಳದಲ್ಲಿ ಭಾರತೀಯರು ಎಲ್ಲೆಲ್ಲಿ ಇದ್ದಾರೊ ಅಲ್ಲಿ ನಮ್ಮ ತ್ರಿವರ್ಣ ಧ್ವಜ ರಾರಾಜಿಸುತ್ತದೆ.
ರಾಷ್ಟ್ರಧ್ವಜದ ಬಟ್ಟೆ ತಯಾರಿಸುವವರಿಗಿಲ್ಲ ಸರಿಯಾದ ವೇತನ
ತ್ರಿವರ್ಣ ಧ್ವಜ ಬಾನಿನಲ್ಲಿ ಹಾರಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಆ ಧ್ವಜದ ಬಟ್ಟೆ ನೇಯುವ ಬಡ ನೇಕಾರರ ಪರಿಸ್ಥಿತಿ ನೆನೆದರೆ ಅಷ್ಟೇ ನೋವು ಕೂಡ ಆಗುತ್ತದೆ. ತುಳಸಿಗೇರಿ ಖಾದಿ ಕೇಂದ್ರದಲ್ಲಿ 60 ಜನ ನೇಕಾರ ಮಹಿಳೆಯರು ಈ ಕೆಲಸ ಮಾಡುತ್ತಾರೆ. ಆದರೆ ಇವರಿಗೆ ಸಿಗುವ ವೇತನ ಮಾತ್ರ ತುಂಬಾ ಕಡಿಮೆ. ಒಂದು ಮೀಟರ್ ರಾಷ್ಟ್ರಧ್ವಜ ಬಟ್ಟೆ ನೇಯಲು ಮೀಟರ್ಗೆ ಸಿಗೋದು ಕೇವಲ 20 ರೂಪಾಯಿ. ಸರಕಾರದ ಸಹಾಯಧನ 7 ರೂಪಾಯಿ. ಇನ್ನು ಒಂದು ಲಡಿಗೆ ನೂಲು ತಯಾರಿಸಲು ಕೇವಲ 9 ರೂಪಾಯಿ ಸರಕಾರದ ಅನುದಾನ 3 ರೂಪಾಯಿ. ಇದರಿಂದ ಈ ನೇಕಾರರಿಗೆ ಸರಿಯಾಗಿ ಜೀವನ ನಡೆಸುವುದಕ್ಕೂ ಆಗುವುದಿಲ್ಲ.
ದಿನಕ್ಕೆ 100 ರಿಂದ 150 ರೂಪಾಯಿ ಮಾತ್ರ ಕೂಲಿ ಸಿಗುತ್ತಿದ್ದು, ಮನೆ ಮಕ್ಕಳು ಶಾಲೆ, ಆಸ್ಪತ್ರೆ ಖರ್ಚು ಹೇಗೆ ನಿಭಾಯಿಸಲು ಸಾಧ್ಯ. ಹೀಗಾಗಿ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ನೇಕಾರರು ಬಹಳ ಕಷ್ಟದ ಜೀವನ ನಡೆಸುತ್ತಿದ್ದಾರೆ.
ನಮಗೆ ನೀಡುವ ಕೂಲಿ ಬಹಳ ಕಡಿಮೆಯಾಗಿದೆ. ಆದರೂ ದೇಶಾಭಿಮಾನ ರಾಷ್ಟ್ರಧ್ವಜದ ಮೇಲಿನ ಗೌರವಕ್ಕೆ ಕೆಲಸ ಮಾಡುತ್ತಿದ್ದೇವೆ. ನಮಗೂ ಜೀವನ ಇದೆ. ಆದ್ದರಿಂದ ಮೀಟರ್ಗೆ ಕನಿಷ್ಠ 30 ರೂಪಾಯಿ ಆದರೂ ನೀಡಬೇಕು. ಜೊತೆಗೆ ನೂಲು ನೇಯಲು ಒಂದು ಲಡಿಗೆಗೆ ಕೇವಲ 9 ರೂಪಾಯಿ ಇದ್ದು, ಅದನ್ನು ಕೂಡ ಹೆಚ್ಚಿಸಬೇಕು ಎಂದು ನೇಕಾರ ಮಹಿಳೆ ಕಲ್ಲವ್ವ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ರಾಷ್ಟ್ರಧ್ವಜ ಬಟ್ಟೆ ತಯಾರಿಕೆ ಅಂದರೆ ಅದು ಸಾಮಾನ್ಯ ಕೆಲಸವಲ್ಲ. ಅದಕ್ಕೆ ಕೆಲಸದ ಮೇಲೆ ಶ್ರದ್ಧೆ ಜೊತೆಗೆ ಅಭಿಮಾನ ಇರಲೇಬೇಕು. ಈ ಖಾದಿ ಕೇಂದ್ರದಲ್ಲಿ ಪರಿಣತಿ ಪಡೆದ ನೇಕಾರರು ನಿತ್ಯ ಬೆವರು ಹರಿಸುತ್ತಿದ್ದಾರೆ. ಇನ್ನು ಖಾದಿ ಕೇಂದ್ರದ ಕಿಡಕಿಗಳು ದುರಸ್ತಿಗೆ ಬಂದಿದ್ದು, ಹೊಸ ಕಿಡಕಿ ಅಳವಡಿಸಿ. ಖಾದಿ ಕೇಂದ್ರಕ್ಕೆ ಕಂಪೌಂಡ್ ನಿರ್ಮಿಸಿಕೊಡಬೇಕೆಂದು ಖಾದಿ ಕೇಂದ್ರದ ಮ್ಯಾನೇಜರ್ ವೀರಪ್ಪ ಮೆಣಸಗಿ ಆಗ್ರಹ ಮಾಡಿದ್ದಾರೆ.
ಒಟ್ಟಿನಲ್ಲಿ ದೇಶದ ಹೆಮ್ಮೆಯ ರಾಷ್ಟ್ರಧ್ವಜದ ಬಟ್ಟೆ ತಯಾರಿಕೆಯಲ್ಲಿ ನೇಕಾರ ಮಹಿಳೆಯರು ನಿತ್ಯ ಬೆವರು ಹರಿಸುತ್ತಿದ್ದಾರೆ. ದೇಶಾಭಿಮಾನದಿಂದ ಕಡಿಮೆ ಕೂಲಿಯಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ಸರಕಾರ ಇನ್ನಷ್ಟು ಹೆಚ್ಚಿನ ಕೂಲಿ ಅನುದಾನ ನೀಡಿ ಇವರ ಕಾರ್ಯಕ್ಕೆ ಗೌರವ ನೀಡುವುದರ ಜತೆಗೆ ಅವರ ಕುಟುಂಬಕ್ಕೆ ಆಸರೆಯಾಗಬೇಕಿದೆ ಎನ್ನುವುದು ನಮ್ಮ ಆಶಯ.
ವರದಿ: ರವಿ ಮೂಕಿ
ಇದನ್ನೂ ಓದಿ:
ಸ್ವಾತಂತ್ರೋತ್ಸವದ ಜತೆಗೆ ಧಾರವಾಡದ 75 ವರ್ಷದ ಈ ರಾಷ್ಟ್ರಧ್ವಜಕ್ಕೂ ಅಮೃತ ಮಹೋತ್ಸವದ ಸಂಭ್ರಮ!
ಚಿತ್ರದುರ್ಗ: ಗಾಂಧಿವಾದಿಗಳ ನೆಲೆಬೀಡು ತುರುವನೂರು; ಸ್ವಾತಂತ್ರ್ಯ ಹೋರಾಟದ ತವರೂರಿನಲ್ಲಿದೆ ಗಾಂಧಿ ಗುಡಿ