ಆ ಒಂದು ಭವ್ಯ ಕಟ್ಟಡದಲ್ಲಿ ನಿತ್ಯವೂ ಮಂಗಳವಾದ್ಯಗಳು ಮೊಳಗುತ್ತಿದ್ದವು. ನಿತ್ಯ ಏನಾದರೊಂದು ಸಭೆ ಸಮಾರಂಭ, ಮದುವೆ ಮುಂಜಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿದ ಆ ಕಲ್ಯಾಣ ಮಂಟಪದಲ್ಲಿಂದು ವಾದ್ಯದ ಸದ್ದಿನ ಬದಲಾಗಿ ಜೆಸಿಬಿ ಸದ್ದು ಮಾಡ್ತಿತ್ತು. ಅಕ್ರಮವಾಗಿ ಕಟ್ಟಿದ ಆ ಐಷಾರಾಮಿ ಕಲ್ಯಾಣ ಮಂಟಪವನ್ನ ಅಧಿಕಾರಿಗಳು (Ballari City Corporation) ಧ್ವಂಸ ಮಾಡಿ ತೆರವು ಮಾಡಿದರು. ಅಷ್ಟಕ್ಕೂ ಕೋಟ ಕೋಟಿ ಬೆಲೆ ಬಾಳುವ ಕಲ್ಯಾಣ ಮಂಟಪ ತೆರವು ಮಾಡಿದ್ಯಾಕೆ..? ಆ ಕುರಿತಾದ ಒಂದು ವರದಿಯಿದೆ ನೋಡಿ.. ಘರ್ಜಿಸುತ್ತಿರುವ ಜೆಸಿಬಿಗಳು.. ಪುಡಿಪುಡಿಯಾದ ಕಟ್ಟಡ. ಆ ಕಡೆ ತೆರವು ಮಾಡಿ.. ಈ ಗೋಡೆ ಒಡೆಯಿರಿ ಅಂತಿರೋ ಅಧಿಕಾರಿಗಳು.. ಮಂಗಳ ವಾದ್ಯ ಮೊಳಗುತ್ತಿದ್ದ ಕಲ್ಯಾಣ ಮಂಟಪ ಪೀಸ್ ಪೀಸ್. ಜೆಸಿಬಿಗಳ (JCB) ಸದ್ದಿಗೆ ಸೈಲೆಂಟ್ ಆದ ಲ್ಯಾಂಡ್ ಮಾಫಿಯಾ (Land Mafia). ಯೆಸ್. ಬಳ್ಳಾರಿಯ (Ballari) ಬಂಡಿಹಟ್ಟಿ ಪ್ರದೇಶದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕಲ್ಯಾಣ ಮಂಟಪವನ್ನ ತೆರವು ಮಾಡುವಾಗ ಕಂಡುಬಂದ ದೃಶ್ಯಗಳಿವು..
ಯೆಸ್. ಇದು ಬಳ್ಳಾರಿ ಮಹಾನಗರದ ಬಂಡಿಹಟ್ಟಿ ಪ್ರದೇಶದಲ್ಲಿರುವ ಸಪ್ತಗಿರಿ ಫಂಕ್ಷನ್ ಹಾಲ್. ಬಂಡಿಹಟ್ಟಿಯ ಬೈಪಾಸ್ ರಸ್ತೆಯನ್ನೆ ಒತ್ತುವರಿ ಮಾಡಿ ಈ ಕಲ್ಯಾಣ ಮಂಟಪವನ್ನ ನಿರ್ಮಾಣ ಮಾಡಲಾಗಿತ್ತು. ಹಲವು ವರ್ಷಗಳ ಹಿಂದೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಈ ಕಲ್ಯಾಣ ಮಂಟಪದಲ್ಲಿ ನಿತ್ಯ ಮದುವೆ. ಸಮಾರಂಭ ಸಭೆಗಳು ನಡೆಯುತ್ತಿದ್ದವು. ಆದ್ರೆ ಸರ್ಕಾರಿ ರಸ್ತೆಯ ಜಾಗವನ್ನೆ ಒತ್ತುವರಿ ಮಾಡಿ 150-150 ಅಡಿ ವಿಸ್ತೀಣದಲ್ಲಿ ನಿರ್ಮಿಸಿದ ಕಲ್ಯಾಣ ಮಂಟಪವನ್ನ ತೆರವು ಮಾಡುವಂತೆ ಸ್ಥಳೀಯರು ಪಾಲಿಕೆಗೆ ಒತ್ತಾಯ ಮಾಡುತ್ತಲೇ ಬಂದಿದ್ರು.
ಆದ್ರೆ ಕಲ್ಯಾಣ ಮಂಟಪದ ಮಾಲೀಕರು ನ್ಯಾಯಾಲಯದ ಮೊರೆ ಹೋದ ಪರಿಣಾಮ ಕಲ್ಯಾಣ ಮಂಟಪದ ತೆರವು ಮಾಡಲಾಗಿರಲಿಲ್ಲ. ಆದ್ರೆ ಇದೀಗ ರಸ್ತೆಯ ಜಾಗವನ್ನ ಒತ್ತುವರಿ ಮಾಡಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಸಪ್ತಗಿರಿ ಫಂಕ್ಷನ್ ಹಾಲ್ ಅಕ್ರಮ ಕಟ್ಟಡವಾಗಿದೆ ಎಂದು ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೆ ಪಾಲಿಕೆಯ ಅಧಿಕಾರಿಗಳು ಕಲ್ಯಾಣ ಮಂಟಪವನ್ನ ತೆರವು ಮಾಡಿದ್ದಾರೆ. ನಿನ್ನೆ ಗುರುವಾರ ಬೆಳ್ಳಂ ಬೆಳ್ಳಿಗ್ಗೆಯೇ ಪಾಲಿಕೆಯ ಅಧಿಕಾರಿಗಳು ಜೆಸಿಬಿಯಿಂದ ಕಲ್ಯಾಣ ಮಂಟಪದವನ್ನ ಧ್ವಂಸ ಮಾಡಿ ರಸ್ತೆಯ ಜಾಗವನ್ನ ಕೊನೆಗೂ ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ.
ಸಪ್ತಗಿರಿ ಫಂಕ್ಷನ್ ಹಾಲ್ ಒಂದೇ ಅಲ್ಲ. ಬಳ್ಳಾರಿ ನಗರದಲ್ಲಿ ಹಲವಾರು ಕಟ್ಟಡಗಳು ಅಕ್ರಮವಾಗಿ ತೆಲೆ ಎತ್ತಿ ನಿಂತಿವೆ. ರಸ್ತೆ, ಮೈದಾನ, ಪಾರ್ಕ್, ಅಷ್ಠೆ ಅಲ್ಲ ಸರ್ಕಾರಿ ಜಾಗವನ್ನ ಸಹ ಕಬಳಿಸಿ ಹಲವರು ಕಟ್ಟಡಗಳು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಅತಂಹ ಕಟ್ಟಡಗಳ ತೆರವಿಗೆ ಮಹಾನಗರ ಪಾಲಿಕೆ ಇದೀಗ ಮುಂದಾಗಿದ್ದು, ಅಕ್ರಮ ಕಟ್ಟಡಗಳ ಬಗ್ಗೆ ಸರ್ವೆ ನಡೆಸಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪಾಲಿಕೆ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಪಾಲಿಕೆ ಅಧಿಕಾರಿಗಳು ಎಲ್ಲ ಅಕ್ರಮ ಕಟ್ಟಡಗಳನ್ನ ತೆರವು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಒಂದೆಡೆ ಬಂಡಿಹಟ್ಟಿಯ ಬೈಪಾಸ್ ರಸ್ತೆಯನ್ನೆ ನುಂಗಿ ಹಾಕಿ ಬೃಹತ್ತಾಗಿ ನಿರ್ಮಿಸಿದ ಕಲ್ಯಾಣ ಮಂಟಪ ತೆರವು ಮಾಡುತ್ತಿದ್ದಂತೆ ಲ್ಯಾಂಡ್ ಮಾಫಿಯಾದಲ್ಲಿ ತೊಡಗಿದವರ ಸದ್ದು ಅಡಗಿದೆ. ಹೀಗಾಗಿ ಈಗಲಾದ್ರು ನಗರದಲ್ಲಿ ಅಕ್ರಮವಾಗಿ ನಿರ್ಮಿಸಿರುವ ನೂರಾರು ಕಟ್ಟಡ ಮನೆಗಳನ್ನ ಪಾಲಿಕೆ ತೆರವು ಮಾಡಿ ಸರ್ಕಾರಿ ಆಸ್ತಿ ಉಳಿಸಲು ಮುಂದಾಗಬೇಕಿದೆ. ಆಗ ಮಾತ್ರ ಬಳ್ಳಾರಿಯಲ್ಲಿನ ಲ್ಯಾಂಡ್ ಮಾಫಿಯಾಗೆ ಬ್ರೇಕ್ ಹಾಕಬಹುದಾಗಿದೆ. ಆ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ? ಇಲ್ಲ ಇದು ಆರಂಭ ಶೂರತ್ವಕ್ಕೆ ಮಾತ್ರ ಅನ್ನುವಂತಾಗುತ್ತದಾ ಕಾಯ್ದುನೋಡಬೇಕಿದೆ.
ವರದಿ: ವೀರಪ್ಪ ದಾನಿ, ಟಿವಿ9, ಬಳ್ಳಾರಿ