ಬಳ್ಳಾರಿ: ಕಣ್ ಹಾಯಿಸಿದಲ್ಲೆಲ್ಲಾ ಭಕ್ತ ಸಾಗರ. ದೇಗುಲದಲ್ಲಿ ಭಕ್ತಿಯ ಝೇಂಕಾರ.. ಭಕ್ತರ ಹರ್ಷೋದ್ಗಾರ. ಕಿಕ್ಕಿರಿದು ಸೇರಿದ್ದ ಭಕ್ತರು ತೇರಿಗೆ ಹೂ ಹಣ್ಣು, ಉತ್ತುತ್ತಿ ಸಮರ್ಪಿಸ್ತಿದ್ರೆ, ರಥೋತ್ಸವ ಅದ್ಧೂರಿಯಾಗಿ ಜರುಗಿತ್ತು.
ರಥೋತ್ಸವಕ್ಕೆ ಅದ್ಧೂರಿ ಚಾಲನೆ:
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ರಥೋತ್ಸವವನ್ನ ಕಣ್ತುಂಬಿಕೊಳ್ಳಲು 2 ಕಣ್ಣು ಸಾಲುವುದಿಲ್ಲ. ಯಾಕಂದ್ರೆ, 5 ಲಕ್ಷಕ್ಕೂ ಅಧಿಕ ಭಕ್ತರು ಕೊಟ್ಟೂರೇಶ್ವರಗೆ ಆಗಮಿಸಿ ಪವಾಡ ಪುರುಷ ಗುರುಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾದ್ರು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತಿಯೇ ಭಕ್ತರು ಕೊಟ್ಟೂರು ದೊರೆಯೇ, ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲುಮುರಿವೆ ಬಹುಪರಾಕ್ ಅಂತಾ ಘೋಷಣೆ ಕೂಗಿ ಭಕ್ತಿ ಸಮರ್ಪಿಸಿದ್ರು.
ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ:
ಇನ್ನು, ಪವಾಡಗಳ ಮೂಲಕ ಎಲ್ಲಾ ಭಕ್ತರ ಆರಾಧ್ಯ ದೈವರಾಗಿರುವ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕಿಂತ ಮುಂಚೆಯೇ ಸ್ವಾಮಿಯ ಮೂರ್ತಿಯನ್ನ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಲಾಯ್ತು. ದಲಿತ ಮಹಿಳೆ ಆರತಿ ಮಾಡಿದ ಬಳಿಕ ಪಲ್ಲಕ್ಕಿ ಉತ್ಸವ ತೇರು ಎಳೆಯಿತು. ಆಗ ನಂದಿಕೋಲು, ಮತ್ತಿತರ ವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದ್ವು. ಈ ವರ್ಷ ಕೂಡ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತ ರಥೋತ್ಸವಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು.
ಭಕ್ತರಿಗೆ ಪ್ರಸಾದದ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಸಿಸಿ ಕ್ಯಾಮರಾ ಆಳವಡಿಸಲಾಗಿತ್ತು. ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ್ದ ಲಕ್ಷಾಂತರ ಭಕ್ತರು ರಥೋತ್ಸವ ದರ್ಶನ ಪಡೆದ್ರು. ಬಾಳೆ ಹಣ್ಣುಗಳನ್ನ ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿ ಬೇಡಿಕೊಂಡ್ರು.