ಬಳ್ಳಾರಿ, ಜನವರಿ 03: ಬಳ್ಳಾರಿ ಜಿಲ್ಲಾ ಆಸ್ಪತ್ರೆ (BIMS)ಯಲ್ಲಿ ಬಾಣಂತಿಯರ ಸಾವು ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ಬೆಳಕಿಗೆ ಬಂದಿದ್ದು, ಬಿಮ್ಸ್ ಆಸ್ಪತ್ರೆ ಮಹಿಳೆಯರಿಗೆ ಸುರಕ್ಷಿತವಲ್ಲವೇ ಎಂಬ ಪ್ರಶ್ನೆ ಮೂಡಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳಾ ಕಂಪ್ಯೂಟರ್ ಆಪರೇಟರ್ಗೆ ಬಳ್ಳಾರಿ (Ballari) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀಕ್ಷಕ ವಿ.ಕೆ.ವೆಂಕಟೇಶ್ ಎಂಬುವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಈ ಕುರಿತಾಗಿ ಸಂತ್ರಸ್ತೆ ವೆಂಕಟೇಶ್ ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೈತ್ರಾ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಧೀಕ್ಷಕ ವಿ.ಕೆ.ವೆಂಕಟೇಶ್ ಕಳೆದ ವರ್ಷ ನವೆಂಬರ್ 25 ರಂದು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿ, ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ನಿಮ್ಮ ಕುಟುಂಬದ ಮರ್ಯಾದೆ ಹರಾಜು ಹಾಕುತ್ತೇನೆ ಅಂತ ಹೆದರಿಸಿದ್ದಾನೆ.
ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವು: ಆರೋಗ್ಯ ಸಚಿವ ಗುಂಡೂರಾವ್ ಬಿಚ್ಚಿಟ್ಟ ಸತ್ಯ ಏನು? ಇಲ್ಲಿದೆ ಓದಿ
ನಂತರ, ಸಂತ್ರಸ್ತೆಯನ್ನು ಬಲವಂತವಾಗಿ ಕಾರ್ನಲ್ಲಿ ಕೂಡಿಸಿಕೊಂಡು ಬೆಳಗಲ್ ರಸ್ತೆ ಬಳಿಯ ಆಕಾಶವಾಣಿ ಕೇಂದ್ರದ ಹತ್ತಿರ ಇರುವ ಲೇ-ಔಟ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೇ ರೀತಿಯಾಗಿ ಸಂತ್ರಸ್ತೆ ಮೇಲೆ ಪದೇ ಪದೇ ಅಧೀಕ್ಷಕ ವಿಕೆ ವೆಂಕಟೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಅಲ್ಲದೇ, “ನಿನ್ನ ಪತಿಯ ನಡವಳಿಕೆ ಸರಿ ಇಲ್ಲ, ಅವನನ್ನು ಏಕೆ ಮದುವೆಯಾದೆ? ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಿನ್ನ ಪತಿ ಮತ್ತು ಕುಟುಂಬದರ ಮೊಬೈಲ್ಗೆ ಬಿಡುತ್ತೇನೆ. ನಿನ್ನನ್ನು ಬೀದಿಯಲ್ಲಿ ನಿಲ್ಲಿಸುತ್ತೇನೆ. ನಿನ್ನ ತಂಗಿ ಮತ್ತು ತಾಯಿಯನ್ನು ವೇಶ್ಯಾವಟಿ ಪ್ರಕರಣದಲ್ಲಿ ಜೈಲಿಗೆ ಕಳುಹಿಸುತ್ತೇನೆ” ಎಂದು ಅಧೀಕ್ಷಕ ವಿಕೆ ವೆಂಕಟೇಶ್ ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ