
ಬಳ್ಳಾರಿ, ನವೆಂಬರ್ 12: ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆಯೇ ಸುರಿಯುತ್ತದೆ ಎಂದು ಯುವತಿಯರನ್ನು ನಂಬಿಸಿ, ಅವರನ್ನು ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬರೋಬ್ಬರಿ ಎರಡು ತಿಂಗಳ ತನಿಖೆಯ ಬಳಿಕ 11 ಆರೋಪಿಗಳನ್ನು ಬಂಧಿಸಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಈ ಜಾಲದ ಹಿಂದೆ ಸ್ವಾಮೀಜಿಯೊಬ್ಬರ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದೆ.
ಆರೋಪಿಗಳು ಯುವತಿಯರನ್ನು ಸೆಳೆಯಲು ವಿಶೇಷ ತಂತ್ರ ಅನುಸರಿಸುತ್ತಿದ್ದರು. ಮದುವೆಯಾಗದ ಸುಂದರ ಯುವತಿಯರು ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ ಎಂದು ಸುಳ್ಳು ಕಥೆ ಕಟ್ಟುತ್ತಿದ್ದರು. ಅದರಲ್ಲೂ ಕನಿಷ್ಠ 5 ಅಡಿ 6 ಇಂಚು ಎತ್ತರ ಇರುವ, ದೇಹದ ಮೇಲೆ ಯಾವುದೇ ಕಲೆಗಳಿಲ್ಲದ ಯುವತಿಯರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು. ಹಣದ ಅವಶ್ಯಕತೆ ಇರುವ ಹಾಗೂ ಮೂಢನಂಬಿಕೆಗಳನ್ನು ನಂಬುವ ಯುವತಿಯರನ್ನು ಗುರುತಿಸಿ ಬಲೆಗೆ ಬೀಳಿಸುತ್ತಿದ್ದರು ಎನ್ನಲಾಗಿದೆ.
ಮೊದಲಿಗೆ ಯುವತಿಯರ ಫೋಟೋಗಳನ್ನು ಪಡೆದು, ಬಳಿಕ ಅವರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನೂ ಕೇಳುತ್ತಿದ್ದರು. ಆಯ್ಕೆಯಾದ ಯುವತಿ ಪೂಜೆ ಮಾಡಿದರೆ ಹಣ ಬರುತ್ತದೆ, ಅದರಲ್ಲಿ ಯುವತಿಗೆ ಒಂದು ಪಾಲು, ಸ್ವಾಮೀಜಿಗೆ ಮತ್ತೊಂದು ಪಾಲು ಹಾಗೂ ಯುವತಿಯನ್ನು ಕರೆತಂದ ಏಜೆಂಟ್ಗೆ ಇನ್ನೊಂದು ಪಾಲು ನೀಡಲಾಗುತ್ತದೆ ಎಂದು ನಂಬಿಸುತ್ತಿದ್ದರು. ನಂತರ ಯುವತಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಸಿಕೊಂಡು ಅವರನ್ನು ಲೈಂಗಿಕ ದೌರ್ಜನ್ಯ ಹಾಗೂ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಜಾಲವನ್ನು ಪತ್ತೆಹಚ್ಚಲು ಬಳ್ಳಾರಿ ಪೊಲೀಸರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಅಕ್ಕ ಪಡೆ ಮೂಲಕ ಕಾರ್ಯಾಚರಣೆಗೆ ಬಳಸಿಕೊಂಡಿದ್ದರು. ಬಡ ಮಹಿಳೆಯರ ಸೋಗಿನಲ್ಲಿ ತಂಡದೊಳಗೆ ಪ್ರವೇಶಿಸಿ ಎರಡು ತಿಂಗಳ ಕಾಲ ಮಾಹಿತಿ ಕಲೆಹಾಕಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಬಳ್ಳಾರಿ ಮಾತ್ರವಲ್ಲದೆ ಚಿಕ್ಕಮಗಳೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಅನಂತಪುರದಲ್ಲೂ ಈ ಜಾಲ ಸಕ್ರಿಯವಾಗಿತ್ತು ಎನ್ನಲಾಗಿದೆ. ಮೀಡಿಯಾ, ಪೇಪರ್ ಸೇರಿದಂತೆ ವಿವಿಧ ಕೋಡ್ವರ್ಡ್ಗಳನ್ನು ಬಳಸಿ ವ್ಯವಹಾರ ನಡೆಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದ್ದು, ಡಿಆರ್ ಎಂಬ ಪ್ರಮುಖ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ. ಪೆನ್ನೇಕರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ