ಬೆಂಗಳೂರು: ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪ ಸಂಬಂಧ ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ್ ರೆಡ್ಡಿಗೆ (G Somashekar Reddy) ಮ್ಯಾಜಿಸ್ಟ್ರೇಟ್ ಕೋರ್ಟ್ ಶಿಕ್ಷೆ ಪ್ರಕಟಿಸಿತ್ತು. ಇದೀಗ ಈ ಶಿಕ್ಷೆಗೆ ಹೈಕೋರ್ಟ್ (Karnataka High Court) ಏಕಸದಸ್ಯ ಪೀಠ ಮಧ್ಯಂತರ ತಡೆ ನೀಡಿದೆ. ಲೈಸೆನ್ಸ್ ನವೀಕರಿಸದೇ ರಿವಾಲ್ವರ್ ಇಟ್ಟುಕೊಂಡ ಆರೋಪ ಸಂಬಂಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಸೋಮಶೇಖರ್ ರೆಡ್ಡಿ ವಿರುದ್ಧ 2013ರಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಕರಣ ದಾಖಲಿಸಿದ್ದರು. 2009ರ ಡಿ.31ಕ್ಕೆ ರಿವಾಲ್ವರ್ ಲೈಸೆನ್ಸ್ ಅವಧಿ ಮುಕ್ತಾಯವಾಗಿತ್ತು. ಆದರೆ 2011ರ ನ.10ರವರೆಗೆ ನವೀಕರಿಸದೇ ರಿವಾಲ್ವರ್ ಇಟ್ಟುಕೊಂಡಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ಪ್ರೊಬೇಷನ್ ಆಫ್ ಅಫೆಂಡರ್ಸ್ ಕಾಯ್ದೆಯಡಿ 50 ಸಾವಿರ ರೂ. ಬಾಂಡ್, ಒಬ್ಬರ ಶ್ಯೂರಿಟಿ ನೀಡಲು ಸೂಚಿಸಿತ್ತು. ಇದೇ ವೇಳೆ ಶಾಂತಿ, ಉತ್ತಮ ನಡತೆ ಮುಂದುವರಿಸಬೇಕು, ಒಂದು ವರ್ಷ ಕೋರ್ಟ್ ನಿಗಾದಲ್ಲಿರಬೇಕು ಎಂದು ಷರತ್ತು ವಿಧಿಸಿತ್ತು. ಮಾತ್ರವಲ್ಲದೆ, ಕ್ರಿಮಿನಲ್ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಿತ್ತು.
ಇದನ್ನೂ ಓದಿ: ಅರಸೀಕೆರೆಯಲ್ಲಿ ಬಿಜೆಪಿಗೆ ಬಿಸಿ ತುಪ್ಪ; ಬಂಡಾಯವೆದ್ದ ಯಡಿಯೂರಪ್ಪ ಸಹೋದರಿಯ ಮೊಮ್ಮಗ ಎನ್ಆರ್ ಸಂತೋಷ್ ಜೆಡಿಎಸ್ನತ್ತ
ವಿಚಾರಣೆ ವೇಳೆ ರೆಡ್ಡಿ ಪರ ವಕೀಲರು, ಮನೆಯ ನವೀಕರಣ ಮಾಡುವ ವೇಳೆ ರಿವಾಲ್ವರ್ ನವೀಕರಣದ ಕಡತ ಕಳೆದು ಹೋಗಿದೆ. ಆ ಕಾರಣಕ್ಕಾಗಿ ನವೀಕರಣ ಮಾಡಿಸಿರಲಿಲ್ಲ. ಪರವಾನಗಿ ಯಾವಾಗ ಮುಗಿಯುತ್ತದೆ ಎನ್ನುವ ದಿನಾಂಕ ಕೂಡ ನೆನಪಿರಲಿಲ್ಲ ಎಂದು ಹೇಳಿದ್ದರು. ಈ ವೇಳೆ ಕೋರ್ಟ್, ದೋಷಿಯಾಗಿರುವ ವ್ಯಕ್ತಿ ಇರಿಸಿಕೊಂಡಿರುವ ಅಸ್ತ್ರ ಸಾಮಾನ್ಯವಾದುದಲ್ಲ. ನೀವು ಹೇಳಿದ ಕಾರಣ ನಂಬಿಕೆಗೆ ದೂರವಾದದ್ದು. ಒಂದು ವೇಳೆ ಪುಸ್ತಕ ಕಳೆದು ಹೋಗಿದ್ದರೆ ದೂರು ನೀಡುವ ಅವಕಾಶ ಇತ್ತು. ಓರ್ವ ಜನಪ್ರತಿನಿಧಿಯಾಗಿ ಈ ರೀತಿಯ ನಿರ್ಲಕ್ಷ್ಯದ ಧೋರಣೆ ತೋರಿರುವುದು ಅಪಾಯಕಾರಿ ಎಂದು ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಜೆ.ಪ್ರೀತ್ ಆದೇಶದ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಸೋಮಶೇಖರ್ ರೆಡ್ಡಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Thu, 13 April 23