ಅರಸೀಕೆರೆಯಲ್ಲಿ ಬಿಜೆಪಿಗೆ ಬಿಸಿ ತುಪ್ಪ; ಬಂಡಾಯವೆದ್ದ ಯಡಿಯೂರಪ್ಪ ಸಹೋದರಿಯ ಮೊಮ್ಮಗ ಎನ್‌ಆರ್ ಸಂತೋಷ್ ಜೆಡಿಎಸ್ನತ್ತ
ಹಾಸನದ ಅರಸೀಕೆರೆ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ಧ ಯಡಿಯೂರಪ್ಪ ಸಹೋದರಿಯ ಮೊಮ್ಮಗ ಎನ್‌ಆರ್ ಸಂತೋಷ್ ಬಂಡಾಯ ಘೋಷಣೆ ಮಾಡಿದ್ದಾರೆ. ಸೋಮವಾರ 50 ಸಾವಿರ ಜನರೊಂದಿತೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಸಂತೋಷ್ ಹೇಳಿದ್ದಾರೆ.
ಹಾಸನ: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದೇ ತಡ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿದೆ. ಹಾಸನ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರ ಸಂಬಂಧಿ ಎನ್.ಆರ್.ಸಂತೋಷ್ಗೆ (NR Santhosh) ಟಿಕೆಟ್ ಕೈತಪ್ಪಿದೆ. ಹೀಗಾಗಿ ಬಿಜೆಪಿ ವಿರುದ್ಧ ಬಂಡಾಯ ಘೋಷಣೆ ಮಾಡಿದ ಸಂತೋಷ, ಸೋಮವಾರ (ಏಪ್ರಿಲ್ 17) 50 ಸಾವರಿ ಜನರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ. ಬಳಿಕ ಸ್ವತಂತ್ರ ಸ್ಪರ್ಧೆಯೋ ಅಥವಾ ಬೇರೆ ಪಕ್ಷ ಸೇರಬೇಕೋ ಎನ್ನುವ ತೀರ್ಮಾನ ಮಾಡುತ್ತೇನೆ. ಜೆಡಿಎಸ್ (JDS) ಆಹ್ವಾನ ಮಾಡಿದರೆ ಯೋಚಿಸುವುದಾಗಿ ಹೇಳಿದ್ದಾರೆ. ಇದು ಹಾಲಿ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಸಂತೋಷ್ ಬಂಡಾಯ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಬಗ್ಗೆ ಹೇಳಿಕೆ ನೀಡಿದ ಸಂತೋಷ್, ಸೋಮವಾರ ಐವತ್ತು ಸಾವಿರ ಜನರ ಜೊತೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಬಳಿಕ ಸ್ವತಂತ್ರ ಸ್ಪರ್ಧೆಯೋ ಅಥವಾ ಬೇರೆ ಪಕ್ಷ ಸೇರಬೇಕೋ ಎಂಬ ತೀರ್ಮಾನ ಮಾಡುತ್ತೇನೆ. ಪಕ್ಷ ಟಿಕೇಟ್ ಕೊಡುತ್ತದೆ ಎನ್ನೋ ನಿರೀಕ್ಷೆ ಇತ್ತು. ಆದರೆ ನನಗೆ ಅವಕಾಶ ಕೊಟ್ಟಿಲ್ಲ. ನಾನು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಅವಕಾಶವನ್ನು ನಿರಾಕರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ, ಸ್ಪರ್ಧೆ ಮಾಡಿಯೇ ಸಿದ್ದ. ಜೆಡಿಎಸ್ನಿಂದ ಆಹ್ವಾನ ಬಂದರೆ ಆಲೋಚನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ.
ಯಡಿಯೂರಪ್ಪ ಸಂಬಂಧವೇ ಬೇಡ ಎಂದ ಸಹೋದರಿ ಪ್ರೇಮಾ
ಇದನ್ನೂ ಓದಿ: ಇಂದು ರಾತ್ರಿಯೇ ಬಿಜೆಪಿ ಪಟ್ಟಿ ಬಿಡುಗಡೆಯಾಗಬಹುದು ಎಂದ ಜಗದೀಶ್ ಶೆಟ್ಟರ್
ಬಿಎಸ್ ಯಡಿಯೂರಪ್ಪ ಸಹೋದರಿ ಪ್ರೇಮಾ ಅವರ ಮಗಳು ಗಿರಿಜಮ್ಮ ಅವರ ಮಗ ಸಂತೋಷ್ ಆಪರೇಷನ್ ಕಮಲದಲ್ಲಿ ಪಾತ್ರವಹಿಸಿದ್ದ ಎನ್ನಲಾಗುತ್ತಿದೆ. ಮೊಮ್ಮಗ ಸಂತೋಷ್ಗೆ ಟಿಕೆಟ್ ತಪ್ಪಿದ ಹಿನ್ನೆಲೆ ಯಡಿಯೂರಪ್ಪ ವಿರುದ್ಧವೇ ಸಹೋದರಿ ಬಿ.ಎಸ್.ಪ್ರೇಮಾ ಅಸಮಾಧಾನ ಹೊರಹಾಕಿದ್ದು, ಅವರ ಸಂಬಂಧವೇ ಬೇಡ ಎಂದು ಕಣ್ಣೀರು ಹಾಕಿದ್ದಾರೆ. ತಾತನ ಜೊತೆ ಇರುತ್ತೇನೆ ರಾಜಕೀಯ ಸೆರುತ್ತೇನೆ ಎಂದು ಹೋಗಿದ್ದ, ಕಷ್ಟಪಟ್ಟು ಬಿಜೆಪಿ ಸರ್ಕಾರ ಅದಿಕಾರಕ್ಕೆ ತಂದ. ಅಂದು ಎಂಟಿಬಿ ನಾಗರಾಜ್ ಅವರನ್ನ ವಿಮಾನ ಹತ್ತಿಸುವ ವೇಳೆ ಡಿಕೆ ಶಿವಕುಮಾರ್ ಕೈಗೆ ಸಿಕ್ಕಿದ್ದರೆ ನನ್ನ ಮೊಮ್ಮಗ ಉಳಿಯುತ್ತಿರಲಿಲ್ಲ. ಅಷ್ಟೆಲ್ಲಾ ಮಾಡಿ ಸರ್ಕಾರ ತಂದ ಮೊಮ್ಮಗನಿಗೆ ಮೋಸ ಆಗಿದೆ ಎಂದರು.
ಸಂತೋಷ್ಗೆ ಟಿಕೆಟ್ ತಪ್ಪಿದ ಹಿನ್ನೆಲೆ ಕಾರ್ಯಕರ್ತರ ಆಕ್ರೋಶ
ಸಂತೋಷ್ಗೆ ಟಿಕೇಟ್ ಸಿಗದ ಹಿನ್ನೆಲೆ ಸಿಡಿದೆದ್ದ ಕಾರ್ಯಕರ್ತರು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರಕ್ಕೆ ತಯಾರಗಾಗಿದ್ದ ಪ್ರಚಾರ ವಾಹನದ ಮೇಲಿನ ಬಿಜೆಪಿ ಕಮಲ ಚಿನ್ಹೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಸೀಕೆರೆಯ ಎನ್‌ಆರ್ ಸಂತೋಷ್ ಮನೆ ಮುಂದೆ ನಡೆದ ಹೈಡ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಬಿಜೆಪಿ ವಿರುದ್ಧವೇ ಘೋಷಣೆ ಕೂಗಿದ್ದಾರೆ. ಅಲ್ಲದೆ, ಸಂತೋಷ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Thu, 13 April 23