ಹಾಸನ ಜೆಡಿಎಸ್ ಟಿಕೆಟ್ ತಿಕ್ಕಾಟಕ್ಕೆ ಹೊಸ ಸೂತ್ರ: ಭವಾನಿ ರೇವಣ್ಣಗೆ ಬೇರೆ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಚರ್ಚೆ
ಹಾಸನ ಜೆಡಿಎಸ್ ಟಿಕೆಟ್ ತಿಕ್ಕಾಟಕ್ಕೆ ಬೇಕ್ ಹಾಕಲು ಜೆಡಿಎಸ್ ವರಿಷ್ಠರು ಹೊಸ ಸೂತ್ರ ಹೆಣೆಯುತ್ತಿದ್ದಾರೆ. ಇದರೊಂದಿಗೆ ಭವಾನಿ ರೇವಣ್ಣ ಸಮಾಧಾನ ಪಡಿಸಲು ದೇವೇಗೌಡ ಹಾಗೂ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ.
ಬೆಂಗಳೂರು/ಹಾಸನ: ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಬಿಜೆಪಿ ಹಾಗೂ ಕಾಂಗ್ರೆಸ್ನ ಅಭ್ಯರ್ಥಿ ಫೈನಲ್ ಆಗಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಎರಡು ಅಭ್ಯರ್ಥಿ ಪಟ್ಟಿ ಪ್ರಕಟಿಸಿದೆ. ಇನ್ನು ಜೆಡಿಎಸ್ ಈಗಾಗಲೇ ಇಂದು ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೊಂದು ಪಟ್ಟಿ ಪ್ರಕಟಿಸಲು ಹಾಸನ ಟಿಕೆಟ್ ಕಗ್ಗಂಟಾಗಿದೆ. ಹೌದು..ಹಾಸನ ಟಿಕೆಟ್ ವಿಚಾರಕ್ಕೆ ಸಹೋದರರು ಜಿದ್ದಿಗೆ ಬಿದ್ದಿದ್ದಾರೆ. ಪತ್ನಿ ಭವಾನಿಗೆ ಟಿಕೆಟ್ ಕೊಡಿಸಲು ಹೆಚ್.ಡಿ ರೇವಣ್ಣ ಪಟ್ಟು ಹಿಡಿದು, ಸಮರವನ್ನೇ ಸಾರಿದ್ದಾರೆ. ಆದ್ರೆ, ಹೆಚ್‌ಡಿ ಕುಮಾರಸ್ವಾಮಿ ಮಾತ್ರ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ಕೊಟ್ಟೇ ತೀರುತ್ತೇನೆಂದು ಹೇಳುತ್ತಿದ್ದಾರೆ. ಇವರಿಬ್ಬರ ಕಾಳಗದಲ್ಲಿ ನಾನಾ ತಂತ್ರಗಳು, ದಾಳ ಪ್ರತಿದಾಳ ಉರುಳಿದ್ವು, ಕೊನೆಗೆ ದೇವೇಗೌಡರ ಅಂಗಳಕ್ಕೆ ಬಂದು ನಿಂತಿದ್ದು, ದೇವೇಗೌಡರ ನಿವಾಸದಲ್ಲಿ ಈ ಸಂಬಂಧ ಈಗಾಗಲೇ ಸರಣಿ ಸಭೆಗಳು ಆಗಿವೆ. ಇದೀಗ ಕುಮಾರಸ್ವಾಮಿ ಹಾಗೂ ದೇವೇಗೌಡ ಸೇರಿಕೊಂಡು ಹಾಸನ ಟಿಕೆಟ್ ಗೊಂದಲಕ್ಕೆ ಅಂತ್ಯ ಹಾಡಲು ಹೊಸ ಸೂತ್ರ ರೂಪಿಸಿದ್ದು, ಈ ಒಂದು ದಾಳದಿಂದ ರೇವಣ್ಣ ಕುಟುಂಬವನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.
ದೇವೇಗೌಡರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಭವಾನಿಗೆ ಟಿಕೆಟ್ ಕೊಡಬೇಕು ಎಂದು ರೇವಣ್ಣ ಒತ್ತಡ ಹಾಕಿದ್ದರೆ, ಮತ್ತೊಂದೆಡೆ ಕುಮಾರಸ್ವಾಮಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಪಟ್ಟು ಹಿಡಿದಿದ್ದರು. ಇದೀಗ ಅಂತಿಮವಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡ ಕೂಡಿಕೊಂಡು ಭವಾನಿ ಅವರಿಗೆ ಮೈಸೂರಿನ ಚಾಮರಾಜ ಕ್ಷೇತ್ರದ ಟಿಕೆಟ್ ನೀಡಿದರೆ ಹೇಗೆ ಎನ್ನುವ ಚರ್ಚೆಗಳುನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿವೆ. ಈ ಕಾರಣದಿಂದ ಭವಾನಿ ಅವರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎನ್ನುವುದು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಹಾಸನ ಟಿಕೆಟ್ ಬಗೆಹರಿಸುವ ಪ್ಲಾನ್ ಮಾಡಿದ್ದಾರೆ.
ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,28,508 ಮತದಾರರಿದ್ದು, ಈ ಪೈಕಿ 1,14,639 ಪುರುಷರು ಹಾಗೂ 1,13,820 ಮಹಿಳೆಯರು ಇದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಇವರನ್ನು ವರ್ಗೀಕರಿಸುವುದಾದರೆ, ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ಮುಸ್ಲಿಮರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಶಿಕ್ಷಿತರ ಈ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮೊದಲಿನಿಂದಲೂ ಒಕ್ಕಲಿಗರಿಗೇ ಟಿಕೆಟ್ ನೀಡುತ್ತ ಬಂದಿವೆ. ಹಾಗೆಯೇ ಇಲ್ಲಿ ಗೆದ್ದವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಹೀಗಾಗಿ ಈ ಬಾರಿಯೂ ಸಹ ಭವಾನಿ ರೇವಣ್ಣ ಅವರನ್ನು ಇಲ್ಲಿ ಕಣಕ್ಕಿಳಿಸುವ ಬಗ್ಗೆಯೂ ದೇವೇಗೌಡ ಹಾಗೂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಆದ್ರೆ, ಭವಾನಿ ರೇಣವಣ ಹಾಸನ ಬಿಟ್ಟು ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಒಪ್ಪಿಕೊಳ್ಳುತ್ತಾರಾ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Thu, 13 April 23