ಬಳ್ಳಾರಿ, ಡಿಸೆಂಬರ್ 20: ಬಳ್ಳಾರಿಯಲ್ಲಿ ಶಂಕಿತ ಐಸಿಸ್ (ISIS) ಉಗ್ರನಿಂದ ಕಾಲೇಜು ಯುವಕರನ್ನ ತನ್ನ ಸಂಘಟನೆಗೆ ಸೆಳೆದುಕೊಳ್ಳುವ ಯತ್ನಗಳು ನಡೆದಿದ್ದವು ಎಂದು ತಿಳಿದುಬಂದಿದೆ. ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ (KG Halli DJ Halli Violence) ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ಎದುರೂ (Bellary) ದೊಡ್ಡ ಪ್ಲಾನ್ ನಡೆದಿತ್ತು. ಸ್ವಲ್ಪದರಲ್ಲೆ ಆ ಯತ್ನವನ್ನು ವಿಫಲಗೊಳಿಸಲಾಗಿತ್ತು. ಗಣಿನಾಡಿನಲ್ಲಿ ಶಂಕಿತ ಉಗ್ರರ ಇಂತಹ ಕರಾಳ ಕೃತ್ಯಗಳ ಬಗ್ಗೆ ತಿಳಿದು ಜನ ಈಗ ಆತಂಕಗೊಂಡಿದ್ದಾರೆ.
ನವೆಂಬರ್ 22 ರಂದು ಬಳ್ಳಾರಿ ಖಾಸಗಿ ಕಾಲೇಜು ಒಂದರಲ್ಲಿ ಯುವಕರನ್ನ ಐಸಿಸ್‌ಗೆ ಸೆಳೆಯುವ ಯತ್ನ ನಡೆದಿತ್ತು. ಮೊಹಮ್ಮದ್ ಪೈಗಂಬರ್‌ಗೆ ಅಪಮಾನದ ನಡೆದಿದೆ ಎಂದು ನೆಪವಾಗಿಸಿಕೊಂಡು ಈ ಐಸಿಸ್ ಸೆಳೆತಕ್ಕೆ ಮೆಗಾ ಪ್ಲಾನ್ ನಡೆದಿತ್ತಾ ಎಂಬ ಅನುಮಾನ ಕಾಡುತ್ತಿದೆ. ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ -NIA) ಬಂಧಿತನಾಗಿರುವ ಶಂಕಿತ ಉಗ್ರ ಸೈಯದ್ ಸಮೀರ್ ಪ್ಲಾನ್ ಸೂತ್ರಧಾರ ಎಂಬುದು ಬಯಲಾಗಿದೆ. ಬಳ್ಳಾರಿ ಮಾಡ್ಯೂಲ್ ಮಾಸ್ಟರ್ ಮೈಂಡ್ ಮಿನಾಸ್‌ನ ಸಹಚರ ಈ ಸೈಯದ್ (20).
ಅಂದಹಾಗೆ, ಸೈಯದ್ ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ಸೆಕೆಂಡ್ ಇಯರ್ ಓದುತ್ತಿದ್ದ. ಎನ್.ಐ.ಎ ಪ್ರೆಸ್ ರಿಲೀಸ್ನಲ್ಲಿ ಸೈಯದ್ ನ ಈ ಕರಾಳ ಕೃತ್ಯವನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ. ನವೆಂಬರ್ 22 ರಂದು ತಾನು ಓದುವ ಕಾಲೇಜ್‌ನಲ್ಲಿ ಪೈಗಂಬರ್‌ಗೆ ಅಪಮಾನ ಮಾಡಲಾಗಿದೆ ಎಂದು ಸೈಯದ್ ಯುವಕರನ್ನು ಗುಂಪು ಕಟ್ಟಿದ್ದ. ಯುವಕ ಗುಂಪು ಕಟ್ಟಿ ಗಲಾಟೆಯನ್ನೂ ಮಾಡಿದ್ದ ಸೈಯದ್. ಬಳಿಕ ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಬಂದು ದೂರು ನೀಡಿದ್ದ.
ಇದನ್ನೂ ಓದಿ: 4 ರಾಜ್ಯದ 19 ಸ್ಥಳಗಳಲ್ಲಿ ಎನ್‌ಐಎ ದಾಳಿ: ಮುಖ್ಯಸ್ಥ ಸೇರಿದಂತೆ 8 ಜನರ ಬಂಧನ
ನವೆಂಬರ್ 22 ರ ಸಂಜೆ ಅನ್ಯಕೋಮಿನ ಯುವಕರ ದಂಡು ಕಟ್ಟಿಕೊಂಡು ಹೋಗಿ ಕೌಲ್ ಬಜಾರ್ ಠಾಣೆಗೆ ಮುತ್ತಿಗೆ ಹಾಕಲು ಶಂಕಿತ ಐಸಿಸ್ ಉಗ್ರ ಸೈಯದ್ ಯತ್ನಿಸಿದ್ದ. ಸಾವಿರಾರು ಜನ್ರನ್ನ ಸೇರಿಸಿ ಠಾಣೆಗೆ ಮುತ್ತಿಗೆ ಹಾಕಿಸಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ. ಮುಸ್ಲಿಂ ಸಮುದಾಯದ ಯುವಕರ ಮೈಂಡ್ ವಾಷ್ ಮಾಡಿ ಗಲಭೆ ಎಬ್ಬಿಸಲು ಅಂದು ನಡೆದಿತ್ತು. ಅದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ದೊಡ್ಡ ಪ್ಲಾನ್ ಹಾಕಿಕೊಂಡಿದ್ದನಂತೆ. ಸ್ವಲ್ಪದರಲ್ಲೆ ಆ ಯತ್ನ ವಿಫಲವಾಗಿತ್ತು. ಇದೀಗ, ಗಣಿನಾಡಿನಲ್ಲಿ ಶಂಕಿತ ಉಗ್ರರ ಕರಾಳ ಕೃತ್ಯಗಳ ಬಗ್ಗೆ ಜನ ಆತಂಕಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Wed, 20 December 23