ಬಳ್ಳಾರಿ: 27 ಕೋಟಿ ವೆಚ್ಚದ ಕಟ್ಟಡ ಇದ್ದರೂ ಎಪಿಎಂಸಿ ಗೋದಾಮಿನಲ್ಲಿ ವಸತಿ ಶಾಲೆ!
ಬಳ್ಳಾರಿಯ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿ ಒಟ್ಟು 230 ವಿದ್ಯಾರ್ಥಿಗಳನ್ನು ಹೊಂದಿರುವ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಎಪಿಎಂಸಿ ಗೋದಾಮಿನಲ್ಲಿ ಪಾಠ ಕೇಳುವಂತಾಗಿದೆ. ಅಲ್ಲದೆ ಈ ಎಪಿಎಂಸಿ ಗೋದಾಮುಗಳು ಬೆಳಿಗ್ಗೆ ಪಾಠ ಕೇಳುವ ಶಾಲೆಗಳಾದ್ರೇ ಸಂಜೆ, ರಾತ್ರಿ ಮಕ್ಕಳ ವಸತಿ ಕೋಣೆಗಳಾಗುತ್ತವೆ. ಭತ್ತದ ರಾಶಿಯ ನಡುವೆಯೇ ಇಲ್ಲಿಯ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ಧಾರೆ. ಭತ್ತದ ರಾಶಿಗಳಿಂದ ಬರುವ ಧೂಳು, ಕಸ, ಜನ ಜಂಗುಳಿಯ ನಡುವೆ ಊಟ, ಆಟ, ಪಾಠ, ಕಲಿಕೆ ನಡೆಯುತ್ತಿದೆ.
ಬಳ್ಳಾರಿ, ಡಿ.19: ಸಿನಿಮಾ ಟಾಕೀಸ್ನಲ್ಲಿ ವಸತಿ ಶಾಲೆ ನಡೆಸಲಾಗುತ್ತಿರುವ ಬಗ್ಗೆ ಈ ಹಿಂದೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದೀಗ ಇದೇ ಮಾದರಿಯಲ್ಲಿ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಂಬೇಡ್ಕರ್ ವಸತಿ ಶಾಲೆ (Ambedkar Residential School) ಈಗ ಎಪಿಎಂಸಿ ಗೋದಾಮಿನಲ್ಲಿ (APMC Godown) ನಡೆಯುತ್ತಿದೆ. ದುರಂತವೆಂದ್ರೇ, ಆ ಶಾಲೆಗೆ ಕಟ್ಟಡವಿರದೇ ಅನಿವಾರ್ಯವಾಗಿ ಸಿನಿಮಾ ಟಾಕೀಸ್ ನಲ್ಲಿ ನಡೆದ್ರೇ, ಈ ಶಾಲೆಗೆ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಯಾದ್ರೂ ಸಣ್ಣಪುಟ್ಟ ಕೆಲಸವಿದೆ ಎಂದು ವರ್ಷವಾದ್ರೂ ಸ್ಥಳಾಂತರ ಮಾಡಿದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಅಧಿಕಾರಿಗಳ ನಿಲಕ್ಷ್ಯವೋ ಜನಪ್ರತಿನಿಧಿಗಳ ಬೇಜವಾಬ್ದಾರಿಯೋ ಇಲ್ಲಿಯ ಶಾಲೆಗಳ ಪರಿಸ್ಥಿತಿ ಮಾತ್ರ ಹದಗೆಟ್ಟು ಹೋಗಿದೆ. ದೊಡ್ಡ ಕಟ್ಟಡ ನಿರ್ಮಾಣವಾದ್ರೂ ಉದ್ಘಾಟನೆಯಾಗಿ ವರ್ಷ ಕಳೆಯುತ್ತಾ ಬಂದ್ರೂ ಸ್ಥಳಾಂತರ ಮಾಡಿಲ್ಲ. ಕರೂರು ಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಎಪಿಎಂಸಿ ಗೋದಾಮಿನಲ್ಲಿ ಪಾಠ ಕೇಳುವಂತಾಗಿದೆ. ಈ ಎಪಿಎಂಸಿ ಗೋದಾಮುಗಳು ಬೆಳಿಗ್ಗೆ ಪಾಠ ಕೇಳುವ ಶಾಲೆಗಳಾದ್ರೇ ಸಂಜೆ, ರಾತ್ರಿ ಮಕ್ಕಳ ವಸತಿ ಕೋಣೆಗಳಾಗುತ್ತವೆ. ಇಲ್ಲಿಯೇ ಪಾಠ ಕೇಳುವುದು ಇಲ್ಲಿಯೇ ಓದುವುದು ರಾತ್ರಿ ಊಟ ಮಾಡಿ ಮಲಗೋದು ಕೂಡ ಇಲ್ಲಿಯೇ ಆಗಿದೆ. ಕಳೆದ ಏಳೆಂಟು ವರ್ಷಗಳಿಂದ ವಸತಿ ಶಾಲೆ ಇಲ್ಲಿಯೇ ನಡೆಯುತ್ತಿದೆ. 140 ಬಾಲಕರು ಮತ್ತು 90 ಬಾಲಕಿಯರು ಸೇರಿದಂತೆ ಒಟ್ಟು 230 ವಿದ್ಯಾರ್ಥಿಗಳನ್ನು ಹೊಂದಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕೇವಲ 3 ಶೌಚಾಲಯಗಳು ಇವೆ. ಹೀಗಾಗಿ ಇದರಲ್ಲಿ ಬಹುತೇಕ ಮಕ್ಕಳು ಬಯಲು ಶೌಚಾಲಯವನ್ನೆ ಅವಲಂಬಿಸಿದ್ದಾರೆ. ಇನ್ನೂ ಮುಖ ತೊಳೆಯಲು, ಸ್ನಾನ ಮಾಡಲು, ಬಟ್ಟೆ ತೊಳೆಯಲು ಕೇವಲ ಎರಡೇ ಎರಡು ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಸರ್ಕಾರದ ನಿರ್ಲಕ್ಷ್ಯ: ಬಳ್ಳಾರಿಯಲ್ಲಿನ ಒಂದು ಕಾಲದ ಚಿತ್ರಮಂದಿರ ಈಗ ಬಾಲಕಿಯರ ಸರ್ಕಾರಿ ವಸತಿ ಶಾಲೆ
ಎಪಿಎಂಸಿ ಗೋದಾಮು ಆಗಿರೋದ್ರಿಂದ ಇಲ್ಲಿ ನಿತ್ಯವೂ ಕೃಷಿ ಚಟುವಟಿಕೆ ನಡೆಯುತ್ತದೆ. ಭತ್ತದ ರಾಶಿಯ ನಡುವೆಯೇ ಇಲ್ಲಿಯ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ಧಾರೆ. ಭತ್ತದ ರಾಶಿಗಳಿಂದ ಬರುವ ಧೂಳು, ಕಸ, ಜನ ಜಂಗುಳಿಯ ನಡುವೆ ಊಟ, ಆಟ, ಪಾಠ, ಕಲಿಕೆ ನಡೆಯುತ್ತಿದೆ. ಇದರ ಜೊತೆ ಸುತ್ತಲು ನಿರಂತರ ದನಕರಗಳ ಓಡಾಟವಿರೋದ್ರ ಜೊತೆ ಸ್ವಚ್ಚತೆ ಅನ್ನೋದು ಸಂಪೂರ್ಣ ಮರೀಚಿಕೆಯಾಗಿದೆ. ಇದೆಲ್ಲದರ ಮಧ್ಯೆ ರಾತ್ರಿ ವೇಳೆ ಕರೆಂಟ್ ಹೋದರೆ ಪರ್ಯಾಯ ವ್ಯವಸ್ಥೆ ಇಲ್ಲ. ಹಾಗಂತ ಈ ಮಕ್ಕಳಿಗೆ ವಸತಿ ಶಾಲೆ ಇಲ್ಲವೆಂದು ಏನಿಲ್ಲ. ಈಗಾಗಲೇ 27 ಕೋಟಿ ವೆಚ್ಚದಲ್ಲಿ, 12 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡವನ್ನ ಕಳೆದ ವರ್ಷ ಉದ್ಘಾಟನೆ ಕೂಡ ಮಾಡಲಾಗಿದೆ. ಆದರೆ ಕೆಲವೊಂದಿಷ್ಟು ತಾಂತ್ರಿಕ ತೊಂದರೆಯ ನೆಪವನ್ನು ನೀಡುವ ಮೂಲಕ ಶಿಫ್ಟ್ ಮಾಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಹಲ್ಲಿದ್ರೇ ಕಡಲೆ ಇಲ್ಲ. ಕಡಲೇ ಇದ್ರೇ ಹಲ್ಲು ಇಲ್ಲ ಎನ್ನುವ ಸ್ಥಿತಿ ಬಳ್ಳಾರಿ ಜಿಲ್ಲೆಯ ವಸತಿ ಶಾಲೆಗಳದ್ದಾಗಿದೆ ಕುರುಗೋಡಿನ ವಸತಿ ಶಾಲೆಗೆ ಕಟ್ಟಡವಿಲ್ಲವೆಂದು ಸಿನಿಮಾ ಟಾಕೀಸ್ ನಲ್ಲಿ ನಡೆಸಲಾಗುತ್ತಿದೆ. ಕರೂರಿನ ವಸತಿ ಶಾಲೆಗೆ ಕಟ್ಟಡವಿದ್ರೂ ಸಣ್ಣಪುಟ್ಟ ಕಾರಣ ಹೇಳಿ ಸ್ಥಳಾಂತರ ಮಾಡದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬಳ್ಳಾರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:55 pm, Tue, 19 December 23