ನಿನ್ನಂತಹ ಪೆದ್ದನ ಜೊತೆ ಚರ್ಚೆ ಮಾಡಲು ನಾವು ತಯಾರಿಲ್ಲ: ಸಚಿವ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2022 | 5:27 PM

ರಾಮುಲು ಹೇಳುತ್ತಾರೆ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿಲ್ಲ ಅಂತ. ಆದರೆ ನಿಮಗೆ ಇತಿಹಾಸ ಗೊತ್ತಿಲ್ಲ. ನೆಹರು ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡೋ ಹಕ್ಕಿಲ್ಲ ಎಂದು ಹೇಳಿದರು.

ನಿನ್ನಂತಹ ಪೆದ್ದನ ಜೊತೆ ಚರ್ಚೆ ಮಾಡಲು ನಾವು ತಯಾರಿಲ್ಲ: ಸಚಿವ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ಶ್ರೀರಾಮುಲು, ಸಿದ್ದರಾಮಯ್ಯ
Follow us on

ಬಳ್ಳಾರಿ: ರಾಮುಲು ಬಳ್ಳಾರಿ ಅಭಿವೃದ್ಧಿಗೆ ನಿಂದೆನೆಪ್ಪಾ ಕೊಡುಗೆ. ನಮಗೆ ಚರ್ಚೆಗೆ ಆಹ್ವಾನ ಕೊಡುತ್ತೀರಾ? ನಿನ್ನಂತಹ ಪೆದ್ದನ ಜೊತೆ ಚರ್ಚೆ ಮಾಡಲು ನಾವು ತಯಾರಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಸಚಿವ ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್​ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ವಿ.ಎಸ್​ ಉಗ್ರಪ್ಪ ಬರುತ್ತಾರೆ. ಬಳ್ಳಾರಿ ಲೂಟಿ ಮಾಡಿದ್ದೇ ನಿಮ್ಮ ಸಾಧನೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ರಾಮುಲು ಹೇಳುತ್ತಾರೆ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿಲ್ಲ ಅಂತ. ಆದರೆ ನಿಮಗೆ ಇತಿಹಾಸ ಗೊತ್ತಿಲ್ಲ. ನೆಹರು ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡೋ ಹಕ್ಕಿಲ್ಲ. ನಿಮ್ಮ ವಿಜಯನಗರ ಉಕ್ಕಿನ ಕಾರ್ಖನೆ ಸ್ಥಾಪಿಸಿದ್ದು ಯಾರಪ್ಪ ರಾಮುಲು ಎಂದು ಪಶ್ನಿಸಿದರು. ಬಳ್ಳಾರಿಯನ್ನ ಅಭಿವೃದ್ಧಿ ಮಾಡಿದ್ದು ಸೋನಿಯಾ ಗಾಂಧಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇನ್ನು ಭಾರತ್ ಜೋಡೋ ಯಾತ್ರೆಗೆ ಜನಸ್ಪಂದನೆ ನೋಡಿ ಬಿಜೆಪಿಗೆ ನಡುಕ ಶುರುವಾಗಿದ್ದು, ಅಧಿಕಾರ ಹೋಗುತ್ತೆ ಎಂಬ ಆತಂಕ ಉಂಟಾಗಿದೆ. ಹಿಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾವು 5 ವರ್ಷ ನುಡಿದಂತೆ ನಡೆದಿದ್ದೇವೆ. 2023ಕ್ಕೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇದು ಚುನಾವಣಾ ಯಾತ್ರೆ ಅಲ್ಲ, ಐತಿಹಾಸಿಕ ಯಾತ್ರೆ

ಚುನಾವಣಾ ಉದ್ದೇಶಕ್ಕೆ ಕೈಗೊಂಡ ಪಾದಯಾತ್ರೆ ಅಲ್ಲ. ಇದೊಂದು ಐತಿಹಾಸಿಕ ಪಾದಯಾತ್ರೆ. ಐಕ್ಯತಾ ಯಾತ್ರೆ ಇದೀಗ 1,000 ಕಿ.ಮೀ. ಪೂರೈಸಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಯಾತ್ರೆ ಕೈಗೊಳ್ಳಲಾಗಿದೆ. ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ದ್ವೇಷ, ಹಿಂಸೆಯ ರಾಜಕಾರಣದಿಂದ ಜನ ಆತಂಕದಲ್ಲಿದ್ದಾರೆ. ಸಂಘಪರಿವಾರ, ಹಿಂದೂ ಸಂಘಟನೆಗಳಿಂದ ಆತಂಕ ಸೃಷ್ಟಿಯಾಗುತ್ತಿದೆ. ಬಡವರು, ದಲಿತರು, ಹಿಂದುಳಿದವರು ಆತಂಕದಲ್ಲಿದ್ದಾರೆ. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.

ಕರ್ನಾಟಕದಲ್ಲಿ ಚುನಾವಣೆ ಗೆಲ್ಲಬೇಕು ಅಂತ ಮಾಡುತ್ತಿರುವ ಪಾದಯಾತ್ರೆ ಇದಲ್ಲ. ಹಿಂದೆಯೂ ಗಾಂಧಿ, ಚಂದ್ರಶೇಖರ್, ವಿನೊಭಾ ಭಾವೆ ಪಾದಯಾತ್ರೆ ಮಾಡಿದ್ದರು. ಆದರೆ ಇಷ್ಟು ಉದ್ದನೆಯ ಐತಿಹಾಸಿಕ ಪಾದಯಾತ್ರೆ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯ ಅನುಭವಿಸುತ್ತಿದ್ದೀರಿ ನೀವು

ಆರ್​ಎಸ್​ಎಸ್ ಹಾಗೂ ಬಿಜೆಪಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರಿಗೆ ಕೇಳುತ್ತೇನೆ ರಾಹುಲ್ ಗಾಂಧಿ ಐತಿಹಾಸಿಕ ಪಾದಯಾತ್ರೆ ಮಾಡಿದ್ದಾರೆ. ದೇಶಕ್ಕಾಗಿ ಅವರ ಕುಟುಂಬತ್ಯಾಗ ಬಲಿದಾನ ಮಾಡಿದ್ದಾರೆ. ಮೋದಿಯವರೇ, ಅಮಿತ್ ಶಾ ಅವರೇ ದೇಶಕ್ಕಾಗಿ ನಿಮ್ಮ ತ್ಯಾಗ ಏನು ಎಂದು ಪ್ರಶ್ನಿಸಿದರು.

ಗಾಂಧಿಜಿಯಾದಿಯಾಗಿ, ನೆಹರೂ ಆದಿಯಾಗಿ ಅನೇಕ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. 1925ರಲ್ಲಿ ಆರ್​ಎಸ್​ಎಸ್ ಸ್ಥಾಪನೆ ಆಯ್ತು. ಯಾವುದಾದರೂ ಒಬ್ಬ ಹುತಾತ್ಮ ಆಗಿರುವ ಉದಾಹರಣೆ ಇದೆಯಾ? ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯ ಅನುಭವಿಸುತ್ತಿದ್ದೀರಿ ನೀವು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:19 pm, Sat, 15 October 22