ಅಂದು ಪರಪ್ಪನ ಅಗ್ರಹಾರ ಜೈಲು, ಇಂದು ಸೆಲೆಬ್ರಿಟಿಗಳ ತಾಣ

ಹಲವು ಪ್ರಕರಣಗಳಲ್ಲಿ ಸೆಲೆಬ್ರಿಟಿಗಳು ಜೈಲು ಪಾಲಾಗಿದ್ದಾರೆ. ಹೊರಗೆ ರಾಜಾತಿಥ್ಯ ಅನುಭವಿಸಿ ಮೆರೆಯುತ್ತಿದ್ದವರು ಈಗ ಸಾಮಾನ್ಯ ಕೈದಿಗಳಾಗಿ ದಿನ ದೂಡುತ್ತಿದ್ದಾರೆ.

ಅಂದು ಪರಪ್ಪನ ಅಗ್ರಹಾರ ಜೈಲು, ಇಂದು ಸೆಲೆಬ್ರಿಟಿಗಳ ತಾಣ
ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ
Edited By:

Updated on: Nov 26, 2020 | 12:55 PM

ಬೆಂಗಳೂರು: ಇದೀಗ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವು ಸೆಲೆಬ್ರಿಟಿಗಳ ತಾಣವಾಗುತ್ತಿದೆ. ಒಂದಲ್ಲಾ ಒಂದು ರೀತಿಯಲ್ಲಿ ದಿನಂಪ್ರತಿ ಜೈಲಿನ ವಿಚಾರ ಕಿವಿಗೆ ಬೀಳುತ್ತಲೇ ಇರುತ್ತದೆ.

ಸೆಲೆಬ್ರಿಟಿಗಳು ಎಂದರೆ ಎಲ್ರಿಗೂ ಇಷ್ಟ. ಅವರನ್ನು ಮಾತನಾಡಿಸಬೇಕು, ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅಂದ್ರೆ ಎಲ್ಲರೂ ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಾರೆ. ಡ್ರಗ್ಸ್ ಕೇಸ್, ಭ್ರಷ್ಟಾಚಾರ, ಆರ್ಥಿಕ ಅಪರಾಧಗಳು, ಐಎಂಎ ವಂಚನೆ ಹೀಗೆ ಹಲವು ಪ್ರಕರಣಗಳಲ್ಲಿ ಸೆಲೆಬ್ರಿಟಿಗಳು ಜೈಲು ಪಾಲಾಗಿದ್ದಾರೆ. ರಾಜಾತಿಥ್ಯ ಅನುಭವಿಸಿ ಮೆರೆಯುತ್ತಿದ್ದವರು ಈಗ ಸಾಮಾನ್ಯ ಕೈದಿಗಳಾಗಿ ದಿನ ದೂಡುತ್ತಿದ್ದಾರೆ.

ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಿನಿಮಾ ತಾರೆಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ, ರಾಜಕಾರಣಿಗಳಾದ ವಿ.ಶಶಿಕಲಾ, ರೋಷನ್ ಬೇಗ್, ಸಂಪತ್ ರಾಜ್, ಬನೀಶ್ ಕೋಡಿಯೇರಿ, ವಿರೇನ್ ಖನ್ನಾ ಅವರ ದಿನಚರಿ ಹೇಗಿದೆ? ಇವರು ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿ ಇದ್ದಾರಾ ಅಥವಾ ಸೌಲಭ್ಯಗಳೇನಾದರೂ ಸಿಕ್ಕಿದೆಯಾ ಎಂಬ ಪ್ರಶ್ನೆ ಹಲವರದು. ಏಕೆಂದರೆ ಸೆಲೆಬ್ರಿಟಿಗಳು ಸಾಮಾನ್ಯರಾಗುವುದು ಅಷ್ಟು ಸುಲಭವಲ್ಲ. ಇಂತಹ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಎಲ್ಲಾ ಕೈದಿಗಳನ್ನು ನಡೆಸಿಕೊಳ್ಳುವಂತೆ ಇವರನ್ನೂ ನಡೆಸಿಕೊಳ್ಳಲಾಗುತ್ತಿದೆ. ಯಾವುದೇ ಐಷಾರಾಮಿ ಜೀವನದ ನೆನಪೇ ಬಾರದಂಥ ಜೈಲಿನ ವಾತಾವರಣದಲ್ಲಿ ಅವರು ದಿನದೂಡಬೇಕು. ದಿನಕ್ಕೆ ಒಂದು ಬಾರಿ ಮನೆಗೆ ಕರೆಮಾಡುವ ಅವಕಾಶ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿದಂತೆ ಯಾವುದೇ ಹೆಚ್ಚಿನ ಸೌಲಭ್ಯಗಳಿರುವುದಿಲ್ಲ.

ಸಂಜನಾ ಗಲ್ರಾನಿ -ರಾಗಿಣಿ ದ್ವಿವೇದಿ: ಡ್ರಗ್ಸ್ ಕೇಸ್​ನಲ್ಲಿ ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್​ನಲ್ಲಿ ಪ್ರತ್ಯೇಕ ಸೆಲ್​ಗಳಲ್ಲಿದ್ದಾರೆ. ರಾಗಿಣಿ ಮತ್ತು ಸಂಜನಾರ ಸೆಲ್​ಗಳಲ್ಲಿರುವ ಇಬ್ಬರು ಇತರ ಕೈದಿಗಳು ಸೆಲಬ್ರಿಟಿಗಳಿಗೆ ಗೆಳತಿಯರಾಗಿದ್ದಾರೆ.

ರೋಷನ್ ಬೇಗ್: ಐಎಂಎ ವಂಚನೆ ಪ್ರಕರಣದ ಆರೋಪದಲ್ಲಿ ಕಳೆದ ಒಂದು ವಾರದಿಂದ ಜೈಲಿನಲ್ಲಿದ್ದಾರೆ. ಪ್ರಭಾವಿ ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ಎಂಬ ಪ್ರಭಾವಳಿ ಇವರಿಗೆ ಇತ್ತು.

ಸಂಪತ್ ರಾಜ್: ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ದಾಂದಲೆ ಪ್ರಕರಣದ ಆರೋಪಿ ಸಂಪತ್​ ರಾಜ್ ನವೆಂಬರ್ 16ರಿಂದ ಜೈಲಿನಲ್ಲಿದ್ದಾರೆ. ಇವರು ಮಾಜಿ ಮೇಯರ್​ ಸಹ ಹೌದು.

ಶಶಿಕಲಾ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ಅತ್ಯಾಪ್ತ ಗೆಳೆತಿ ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು. ಇವರ ಶಿಕ್ಷೆಯ ಅವಧಿ ಇನ್ನೇನು ಮುಗಿಯಲಿದೆ.

ನಟಿಯರು ಇರುವ ಮಹಿಳಾ ವಿಭಾಗದ ಬ್ಯಾರಕ್​ನಲ್ಲಿಯೇ ಶಶಿಕಲಾ ಇದ್ದಾರೆ. ಸದ್ಯ ಅನಾರೋಗ್ಯ ಕಾರಣ ರೋಷನ್ ಬೇಗ್ ಮತ್ತು ಸಂಪತ್ ರಾಜ್ ಜೈಲಿನ ಅಸ್ಪತ್ರೆಯ ವಾರ್ಡಿನಲ್ಲಿದ್ದಾರೆ. ಕೆಲವೊಮ್ಮೆ ಕ್ಯಾಂಟೀನ್​ನಲ್ಲಿ ಮೊಟ್ಟೆ ಮತ್ತು ಬ್ರೇಡ್ ಖರೀದಿಸಲು ಆರೋಪಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.