ನೆಲಮಂಗಲ: ಕನ್ನಡ ಮನಸ್ಸುಗಳನ್ನ ಒಗ್ಗೂಡಿಸುವಂತಹ ಒಂದು ಒಳ್ಳೆಯ ಪ್ರಯತ್ನ ಕೋಟಿ ಕಂಠ ಗಾಯನ ಕಾರ್ಯಕ್ರಮವಾಗಿದೆ ಎಂದು ನೆಲಮಂಗಲ ಆರ್ಟಿಓ ಅಧಿಕಾರಿ ಮಂಜುನಾಥ್ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರ್ಟಿಓ ಕಛೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ವಿಶಾಲಗೊಳಿಸಲು ನನ್ನ ನಾಡು ನನ್ನ ಹಾಡು ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅನನ್ಯತೆ ಎಲ್ಲೆಡೆ ಪಸರಿಸಲು ಕೋಟಿ ಕಂಠ ಗಾಯನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಲಾಯಿತು.
ಇದೇ ವೇಳೆ ಸಂಕಲ್ಪ ಪ್ರತಿಜ್ಞೆಯೂ ಮಾಡಲಾಯಿತು. ಕನ್ನಡ ನಾಡಿನ ಪ್ರಜೆಯಾದ ನಾನು ನನ್ನ ನಾಡು ನುಡಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ, ಕನ್ನಡವನ್ನೆ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡು ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡ ನಾಡಿನಲ್ಲಿರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುತ್ತೇನೆ ಎಂದು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಂಕಲ್ಪ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ