ಬೆಂಗಳೂರು: ಕಾಂಗ್ರೆಸ್ಗೆ 17 ಜನ ಸೇರಿ ಯಾರು ಬೇಕಾದರೂ ಬರಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಆಂತರಿಕ ವಿಚಾರ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಈಗಿರುವ ಶಕ್ತಿ ಸಾಲದು ಅನಿಸುತ್ತೆ. ಹಾಗಾಗಿ ಆಮದು ಶಕ್ತಿ ಅಗತ್ಯವಿದೆ. ಡಿ.ಕೆ. ಶಿವಕುಮಾರ್ ಹೇಳಿಕೆಯಲ್ಲಿ ಆತಂಕ ಕಾಣುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.
ಇದೇ ವೇಳೆ, ಹದಿನೈದನೇ ಹಣಕಾಸಿನ ಶಿಫಾರಸ್ಸಿನ ಪ್ರಕಾರ ರಾಜ್ಯಕ್ಕೆ 5500 ಕೋಟಿ ಕೊಡುವಲ್ಲಿ ಹಣಕಾಸು ಸಚಿವರು ತಡೆ ಹಿಡಿದಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. 15 ನೇ ಹಣಕಾಸಿನ ಶಿಫಾರಸ್ಸಿನ ಪ್ರಕಾರ ರಾಜ್ಯಕ್ಕೆ ಹಣ ಬರಬೇಕು ನಿಜ. ಆದರೆ ಯುಪಿಎ ಸರ್ಕಾರದಲ್ಲಿ ಆದ ಎಲ್ಲಾ ಶಿಫಾರಸ್ಸಿನ ಪ್ರಕಾರ ಅವರು ಅನುಷ್ಠಾನ ಮಾಡಿಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಕೊಡಬೇಕೆಂದು ಕೇಂದ್ರಕ್ಕೆ ಸಿಎಂ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗಿ ರಾಜ್ಯದ ಹಕ್ಕನ್ನು ಪಡೆಯುವ ಕೆಲಸ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ರಾಜ್ಯವೇ ಕಡಿತಗೊಳಿಸಲಿ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರವಾಗಿ ಬೊಮ್ಮಾಯಿ ಮಾತನಾಡಿದ್ದಾರೆ. ಸೆಸ್ ಎರಡು ಕಡೆ ಇದೆ, ಇದು ಇಡೀ ದೇಶದ ವಿಚಾರ. ಫೆಡರಲ್ ವ್ಯವಸ್ಥೆಯಲ್ಲಿ ಎರಡು ಕಡೆ ಕೂತು ಚರ್ಚೆ ಮಾಡಿ ತೀರ್ಮಾನ ಮಾಡಬೇಕಾಗತ್ತೆ. ಸಾಮಾನ್ಯ ಜನರ ಮೇಲಿನ ಹೊರೆ ಕಡಿಮೆ ಮಾಡುವುದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ತೀರ್ಮಾನ ಮಾಡುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ತೊರೆದ ಶಾಸಕರಿಗೆ ಡಿಕೆಶಿಯಿಂದ ಗ್ರೀನ್ ಸಿಗ್ನಲ್; ರಾಜ್ಯ ರಾಜಕೀಯದಲ್ಲಿ ಮತ್ತೆ ಬಾರಿ ಸಂಚಲನ
ಕಾಂಗ್ರೆಸ್ ತೊರೆದ ಶಾಸಕರಿಗೆ ಮತ್ತೆ ಪಕ್ಷಕ್ಕೆ ಬರುವ ವಿಚಾರವಾಗಿ ಡಿ.ಕೆ. ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ಮತ್ತೆ ಭಾರಿ ಸಂಚಲನ ಉಂಟಾಗಿದೆ. ನಿನ್ನೆ ಕಾಂಗ್ರೆಸ್ ತೊರದ ಶಾಸಕರಿಗೆ ಡಿ.ಕೆ. ಶಿವಕುಮಾರ್ ಪರೋಕ್ಷ ಹೇಳಿಕೆ ನೀಡಿ ಪಕ್ಷಕ್ಕೆ ಬರುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದರು. ಇದೀಗ ಈ ಘಟನೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಪಕ್ಷ ತೊರೆದವರು ಬಂದ್ರೆ ಯಾವುದೇ ಸಮಸ್ಯೆ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಇಂದೀಗ, ಬಿಜೆಪಿ ಸಚಿವ ಸಿ ಪಿ ಯೋಗೇಶ್ವರ್ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಲಿದ್ದಾರೆ. ಮೈಸೂರಿನ ಜಯಲಕ್ಷ್ಮಿ ಪುರಂ ನಿವಾಸದಲ್ಲಿ ಭೇಟಿ ಆಗಲಿದ್ದಾರೆ ಎಂದು ಹೇಳಲಾಗಿದೆ. ಸಿ ಪಿ ಯೋಗೇಶ್ವರ್ ಭೇಟಿ ಭಾರೀ ಕುತೂಹಲ ಕೆರಳಿಸಿದೆ.
ಕಳೆದ ಬಾರಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಶ್ರೀನಿವಾಸ್ ಪ್ರಸಾದ್ ಮನೆ ನಾಂದಿ ಹಾಡಿತ್ತು. ಪ್ರಸಾದ್ ಮನೆಗೆ ಭೇಟಿ ನೀಡಿದ ನಂತರವೇ ಮಾಸ್ಟರ್ ಪ್ಲ್ಯಾನ್ ಸಿದ್ದವಾಗಿತ್ತು ಎಂದು ಹೇಳಲಾಗಿತ್ತು. ಶ್ರೀನಿವಾಸ ಪ್ರಸಾದ್ ಮನೆಗೆ ಭೇಟಿ ನೀಡಿದ ನಂತರ ಮುಂಬೈಗೆ ಶಾಸಕರು ಹಾರಿದ್ದರು. ಇದೀಗ ಮತ್ತೆ ಪ್ರಸಾದ್ ಮನೆಯಲ್ಲಿ ಹೊಸ ಪ್ಲ್ಯಾನ್ ಆಗುತ್ತಾ ಎಂಬ ಅನುಮಾನ ದಟ್ಟವಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ವಿವಾದ: ತಮಿಳುನಾಡಿನಲ್ಲಿ ಹೊಸ ಸರ್ಕಾರ ಬಂದಿದೆ; ಇದೆಲ್ಲಾ ರಾಜಕೀಯ ಎಂದ ಬಸವರಾಜ ಬೊಮ್ಮಾಯಿ