ಬೆಂಗಳೂರು: ಮಹಾಮಾರಿ ಕೊರೊನಾದ ಕಾಟದಿಂದ ಮುಕ್ತರಾಗಿ ಮೊದಲ ಬಾರಿಗೆ ಯಾವುದೇ ಕೊರೊನಾ ನಿರ್ಬಂಧಗಳಿಲ್ಲದೆ ಗಣೇಶ ಹಬ್ಬವನ್ನು ಆಚರಿಸಲು ಇಡೀ ರಾಜ್ಯ ಸಜ್ಜಾಗಿದೆ. ಈಗಾಗಲೇ ಮಾರ್ಕೆಟ್ಗಳಲ್ಲಿ ಹಬ್ಬದ ಖರೀದಿ ಶುರುವಾಗಿದೆ. ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಬ್ಬದ ತಯಾರಿ ಜೋರಾಗಿ ಸಾಗಿದೆ. ಇದರ ನಡುವೆ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ಆ.31ರಂದು ಅಂದರೆ ಬುಧವಾರ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಸಾಯಿಖಾನೆಯಲ್ಲಿ ಪ್ರಾಣಿವಧೆ ನಿಷೇಧ ಅನ್ವಯವಾಗಲಿದೆ. ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. 2022ರ ಆಗಸ್ಟ್ 31ರ ಬುಧವಾರದಂದು ‘ಗಣೇಶ ಚತುರ್ಥಿ’ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ಇದೇ ತಿಂಗಳ ಆರಂಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಿ ನಾಗರಿಕ ಸಂಸ್ಥೆ ಸುತ್ತೋಲೆ ಹೊರಡಿಸಿತ್ತು. ಈಗ ಗಣೇಶ ಚತುರ್ಥಿ ಹಬ್ಬಕ್ಕೂ ಇದೇ ಆದೇಶ ಮುಂದುವರೆದಿದೆ.
ಮಳೆಯ ನಡುವೆ ರೂಟ್ ಮಾರ್ಚ್ ಗೆ ಸಿದ್ಧತೆ
ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ರೂಟ್ ಮಾರ್ಚ್ ಕೈಗೊಂಡಿದ್ದಾರೆ. ಪಶ್ಚಿಮ ವಿಭಾಗ ಪೊಲೀಸ್, ಕೆಎಸ್ಆರ್ಪಿ, ಕ್ವಿಕ್ ರಿಯಾಕ್ಷನ್ ಟೀಂ ಹಾಗು ಸ್ವಾಟ್ (SWAT) ಪೊಲೀಸರು ರೂಟ್ ಮಾರ್ಚ್ ಗೆ ಸಿದ್ಧತೆ ನಡೆಸಿದ್ದಾರೆ. ಜೆಜೆ ನಗರ ಗಲ್ಲಿಗಳಲ್ಲಿ ಪಥಸಂಚಲ ಮಾಡುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲಿದ್ದಾರೆ. ಡಿಸಿಪಿ ಲಕ್ಷಣ ನಿಂಬರಗಿ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಯಲಿದೆ. ಮಳೆಯ ನಡುವೆ ರೂಟ್ ಮಾರ್ಚ್ ಗೆ ಸಿದ್ಧತೆ ನಡೆದಿದೆ. ನಗರದ ಪಶ್ಚಿಮ ವಿಭಾಗದಿಂದ ರೂಟ್‌ಮಾರ್ಚ್ ನಡೆಸಿ ರೌಡಿಗಳಿಗೆ ಎಚ್ಚರಿಸೋದಕ್ಕೆ ಪೊಲೀಸರು ಮುಂದಾಗಿದ್ದಾರೆ.
ನಾಳೆಯಿಂದ ಗೌರಿ-ಗಣೇಶ ಹಬ್ಬ ಹಿನ್ನಲೆ ಇಂದು ಜೆಜೆ ನಗರ (ಜಗಜೀವನ್ ರಾಮನಗರ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಯುತ್ತೆ. ಕೆ.ಎಸ್.ಆರ್.ಪಿ, ಕ್ವಿಕ್ ರಿಯಾಕ್ಷನ್ ಟೀಂ, ಡಿ ಸ್ವಾಟ್, ಪಶ್ಚಿಮ ವಿಭಾಗದ ಪೊಲೀಸರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದು 300 ಕ್ಕೂ ಹೆಚ್ಚು ಪೊಲೀಸರು ರೂಟ್ ಮಾರ್ಚ್ ಮಾಡಲಿದ್ದಾರೆ.
Published On - 2:57 pm, Mon, 29 August 22