ಬೆಂಗಳೂರು: ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಹುಳಿಮಾವು ಕೆರೆ ಏರಿ ಇದ್ದಕ್ಕಿದ್ದಂತೆ ಒಡೆದು ಹೋಗಿ 140 ಎಕರೆ ಕೆರೆಯಲ್ಲಿ ಶಾಂತವಾಗಿ ನಿಂತಿದ್ದ ನೀರು ಇಡೀ ಏರಿಯಾಗೆ ನುಗ್ಗಿದೆ. ಶಾಂತಿನಿಕೇತನ, ಕೃಷ್ಣನಗರ, ಆರ್.ಆರ್ ಲೇಔಟ್ ಸೇರಿದಂತೆ ಸುತ್ತಾಮುತ್ತಾ ನೀರು ನಿಂತಿದೆ. ಸಾವಿರಕ್ಕೂ ಹೆಚ್ಚು ಮನೆಗಳಿಗೆ ಕೆರೆ ನೀರು ನುಗ್ಗಿದೆ. ನಿರಾಶ್ರಿತರಾದ ಹುಳಿಮಾವು ಕೆರೆಯಂಚಿನ ನಿವಾಸಿಗಳಿಗೆ ಟೆನ್ನಿಸ್ ಕೋರ್ಟ್ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಸದ್ಯ ಟೆನ್ನಿಸ್ ಕೋರ್ಟ್ಗೆ ಶಿಫ್ಟ್ ಆಗಿರೋರು, ತಮ್ಮ ಪರಿಸ್ಥಿತಿ ನೆನೆದು ಕಣ್ಣೀರಿಡ್ತಿದ್ದಾರೆ. ದಾಳಿಕೋರನಂತೆ ನುಗ್ಗಿ ಬಂದ ಜಲಾಸುರನ ಅವತಾರ ಕಂಡು ಮಮ್ಮಲ ಮರುಗುತ್ತಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿ, ಹಾಸಿಗೆ ಹೊದಿಕೆ ವ್ಯವಸ್ಯೆ ಮಾಡ್ಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಅಲ್ಲೇ ಇದ್ದು ಚಿಕಿತ್ಸೆ ನೀಡ್ತಿದ್ದಾರೆ. ಹಲಸೂರಿನ ಸಿಖ್ ಸಮುದಾಯದವರು ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಿ ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಪಾಲಿಕೆ ಕಮಿಷನರ್, ಮೇಯರ್ ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ.
5 ಜೆಸಿಬಿ.. 10 ಟಿಪ್ಪರ್.. ಕಂಟ್ರೋಲ್‌ಗೆ ಬಂದ ಕೆರೆ..!
ಮನೆಗಳಿಗೆ ನುಗ್ಗಿದ್ದ ಕೆರೆ ನೀರು ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು ಮತ್ತೊಂದೆಡೆ ಯುದ್ಧೋಪಾದಿಯಲ್ಲೇ ಕಾರ್ಯಾಚರಣೆಗೆ ನಿಂತ ಪಾಲಿಕೆ 5 ಜೆಸಿಬಿ, 10 ಟಿಪ್ಪರ್ ಬಳಸಿ ಕೆರೆ ಪಕ್ಕದ ಖಾಲಿ ಜಾಗದಿಂದ ಮಣ್ಣು ತಂದು ಕೆರೆ ಏರಿ ಒಡೆದ ಜಾಗವನ್ನ ತುಂಬಿಸಲಾಗಿದೆ. ಆದರೂ ಕೆರೆ ನೀರು ಹರಿಯುವುದು ನಿಂತಿಲ್ಲ. ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಈ ಜಲ ಕಂಟಕದಿಂದ ಸುಮಾರು 60 ರಿಂದ 70 ಕೋಟಿಯಷ್ಟು ಸಾರ್ವಜನಿಕ ಆಸ್ತಿಹಾನಿಯಾಗಿದೆ.
ಸಿಲಕಿಕೊಂಡಿದ್ದ ಗರ್ಭಿಣಿ ಪಾರು:
ಕೆರೆ ಏರಿ ಒಡೆದ ಸಮಯದಲ್ಲಿ ಕೃಷ್ಣಾ ಲೇಔಟ್ ನ ಮನೆಯಲ್ಲಿಯೇ ಸಿಲಕಿಕೊಂಡಿದ್ದ ಗರ್ಭಿಣಿ ಮಹಿಳೆ ಪರಿಮಳಾ ಅವರನ್ನ ಪಕ್ಕದ ಮನೆಯವರು ರಕ್ಷಿಸಿದ್ದಾರೆ. 5 ತಿಂಗಳು ಗರ್ಭಿಣಿ ಪರಿಮಳಾ ಕೂದಲು ಎಳೆ ಅಂತರದಲ್ಲಿ ಪಾರಾಗಿದ್ದಾರೆ.
15ಕ್ಕೂ ಹೆಚ್ಚು ಹಾವುಗಳು ಪತ್ತೆ:
ಕೆರೆ ನೀರು ನುಗ್ಗಿರುವ ಮನೆಗಳಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ. 15ಕ್ಕೂ ಹೆಚ್ಚು ಹಾವುಗಳನ್ನು BBMP ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದಾರೆ. ಹೀಗಾಗಿ ನಿರಾಶ್ರಿತರಿಗೆ ಮನೆಗೆ ವಾಪಸ್ ಹೋಗಲು ಭಯ ಶುರಯವಾಗಿದೆ. ಮನೆಯಲ್ಲಿನ ಬಟ್ಟೆ ಔಷಧಿ ತರಲು ಹೋದ್ರೆ ವಿಷಕಾರಿ ಹಾವುಗಳು ಬುಸುಗುಡುತ್ತಿವೆ ಎಂದು ಸ್ಥಳೀಯರೊಬ್ಬರು ತಮ್ಮ ಭಯವನ್ನು ತೋಡಿಕೊಂಡಿದ್ದಾರೆ.
Published On - 11:14 am, Mon, 25 November 19