ಗ್ರಾ.ಪಂ. ಚುನಾವಣಾ ಕಣದಲ್ಲಿ BE, MBA ಪದವೀಧರರು.. ಅಭ್ಯರ್ಥಿಗಳಾಗಲು ಉದ್ಯೋಗವನ್ನೇ ತೊರೆದರು..

ಗ್ರಾ.ಪಂ. ಚುನಾವಣಾ ಕಣದಲ್ಲಿ BE, MBA ಪದವೀಧರರು.. ಅಭ್ಯರ್ಥಿಗಳಾಗಲು ಉದ್ಯೋಗವನ್ನೇ ತೊರೆದರು..
ಪ್ರಮೋದ್​, ಶ್ರುತಿ, ಸೌಮ್ಯಾ (ಎಡದಿಂದ-ಬಲಕ್ಕೆ)

ವಿದ್ಯಾವಂತ ಯುವಕರೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.. ಮತಹಾಕಲೂ ಹಳ್ಳಿ ಕಡೆ ಮುಖಹಾಕದ ಬಿಇ, ಎಂಬಿಎ ಪದವೀಧರರೂ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ.

Lakshmi Hegde

|

Dec 21, 2020 | 12:47 PM

ಮಂಡ್ಯ: ಗ್ರಾಮ ಪಂಚಾಯತಿ ಚುನಾವಣೆ ಎಂದರೆ ಸಾಮಾನ್ಯವಾಗಿ ಅಭ್ಯರ್ಥಿಗಳು ಹಿರಿಯರಾಗಿರುತ್ತಾರೆ.. ಗ್ರಾಮದ ಮುಖಂಡರಾಗಿರುತ್ತಾರೆ ಎಂಬ ಕಲ್ಪನೆಯೇ ಇದೆ. ಬಹುತೇಕ ಗ್ರಾಮಗಳಲ್ಲಿ ಇದೇ ಚಿತ್ರಣವೇ ಈಗಲೂ ಇದೆ. ಆದರೆ ಈಗೀಗ ಮಹತ್ವದ ಬದಲಾವಣೆಯಾಗುತ್ತಿದೆ, ವಿದ್ಯಾವಂತ ಯುವಕರೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.. ಮತ ಹಾಕಲೂ ಹಳ್ಳಿ ಕಡೆ ಮುಖಹಾಕದ ಬಿಇ, ಎಂಬಿಎ ಪದವೀಧರರೂ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ!

ಇದಕ್ಕೆ ಸಾಕ್ಷಿ ಮಂಡ್ಯ ಜಿಲ್ಲೆ.. ಮೈಸೂರಿನ ಇನ್ಫೋಸಿಸ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿಖರನಹಳ್ಳಿ ಗ್ರಾಮದ ಯುವಕ ಎಸ್​. ಜೆ. ಪ್ರಮೋದ್​ ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಎಂಬಿಎ ಪದವೀಧರ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಶಿಖರನಹಳ್ಳಿಯಲ್ಲಿ ಪಡೆದಿದ್ದ ಪ್ರಮೋದ್​ ಕದಬಹಳ್ಳಿಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿ, ಕ್ಯಾಂಪಸ್​ ಸೆಲೆಕ್ಷನ್​ನಲ್ಲಿಯೇ ಇನ್ಫೋಸಿಸ್​ ​ಗೆ ಆಯ್ಕೆಯಾಗಿದ್ದರು. ಅಲ್ಲಿ ಎರಡು ವರ್ಷ ಕೆಲಸ ಮಾಡಿದ ಪ್ರಮೋದ್​, ಇದೀಗ ಕದಬಹಳ್ಳಿ ಪಂಚಾಯತಿಯಿಂದ ಸ್ಪರ್ಧಿಸಲು ಉದ್ಯೋಗ ತೊರೆದಿದ್ದಾರೆ.

ಅಷ್ಟೊಳ್ಳೆ ಉದ್ಯೋಗವನ್ನು ಬಿಟ್ಟು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನೆಂದು ಕೇಳಿದರೆ, ಗ್ರಾಮಾಭಿವೃದ್ಧಿ ಕನಸು ಎನ್ನುತ್ತಾರೆ ಪ್ರಮೋದ್​.

ಸೌಮ್ಯಾರದ್ದೂ ಇದೇ ನಿರ್ಧಾರ ಪ್ರಮೋದ್​ ಮಾತ್ರವಲ್ಲ, ಇನ್ನೋರ್ವ ಎಂಬಿಎ ಪದವೀಧರೆ ಸೌಮ್ಯಾ ಕೂಡ ಇದೇ ದಾರಿ ಹಿಡಿದಿದ್ದಾರೆ. ಇವರು ಬಿಳಗುಂದ ಗ್ರಾಮದವರಾಗಿದ್ದು, ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಕಣಕ್ಕೆ ಇಳಿದಿದ್ದಾರೆ.

ತುಮಕೂರಲ್ಲಿ ವಾಸ ಸೌಮ್ಯ ಬೆಂಗಳೂರು ವಿವಿಯಲ್ಲಿ ಎಂಕಾಂ ಮುಗಿಸಿ, ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಅಭ್ಯಾಸ ಮಾಡಿದ್ದಾರೆ. ಸದ್ಯ ಪತಿಯೊಂದಿಗೆ ತುಮಕೂರಿನಲ್ಲಿ ನೆಲೆಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವೋಟರ್​ ಐಡಿ ಹುಟ್ಟೂರಿನಲ್ಲೇ ಇರುವುದರಿಂದ, ಮಂಡ್ಯದ ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ರಾಜಕಾರಣಕ್ಕೆ ವಿದ್ಯಾವಂತರು ಧುಮುಕಬೇಕು. ಇದರಿಂದ ಸುಧಾರಣೆಯೂ ಆಗುತ್ತದೆ.. ನಾನೂ ಅಷ್ಟೇ ಗ್ರಾಮದ ಏಳಿಗೆಗಾಗಿ ಸೇವೆ ಸಲ್ಲಿಸುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಹಲಗೂರು ಗ್ರಾಪಂ ಕಣದಲ್ಲಿ ಬಿಇ ಪದವೀಧರೆ ಇನ್ನು ಮಳವಳ್ಳಿ ತಾಲೂಕಿನ ಹಲಗೂರು ಗ್ರಾಪಂ ಚುನಾವಣಾ ಕಣದಲ್ಲಿ ಬಿಇ ಪದವೀಧರೆಯೊಬ್ಬಳು ಸ್ಪರ್ಧಿಸಿದ್ದಾರೆ. ಹಲಗೂರು ಗ್ರಾಮದವರೇ ಆಗಿರುವ ಶ್ರುತಿ, ಎಲೆಕ್ಟ್ರಾನಿಕ್​ ಆ್ಯಂಡ್ ಕಮ್ಯೂನಿಕೇಷನ್​ ಇಂಜಿನಿಯರಿಂಗ್ ಮಾಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಹೆರಿಗೆಗಾಗಿ ತವರು ಹಲಗೂರಿಗೆ ಬಂದಿದ್ದು, ಇಲ್ಲಿಯೇ ಚುನಾವಣೆಗೆ ಇಳಿದಿದ್ದಾರೆ.

ಹಳ್ಳಿ ಜನರ ಸಮಸ್ಯೆಗಳನ್ನು ಬಗೆಹರಿಸುವುದೇ ಪ್ರಮುಖ ಉದ್ದೇಶ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಶ್ರುತಿ

ನಾಮಪತ್ರ ಸಲ್ಲಿಸಿದ ಸೌಮ್ಯಾ

Follow us on

Related Stories

Most Read Stories

Click on your DTH Provider to Add TV9 Kannada