ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ ಪ್ರಯಾಣಿಕರು, ಮಂಗಳೂರಿಗೆ ಎರಡನೇ ಸ್ಥಾನ

|

Updated on: Jun 03, 2024 | 11:53 AM

ಪ್ರಯಾಣಿಕರ ಸಂಖ್ಯೆಯಲ್ಲಿ ಕರ್ನಾಟಕದ ಬೆಳಗಾವಿ ಮತ್ತು ಮಂಗಳೂರು ವಿಮಾನ ನಿಲ್ದಾಣಗಳು ಈ ವರ್ಷ ಗಣನೀಯ ಸಾಧನೆ ಮಾಡಿವೆ. ಬೆಳಗಾವಿ ಮುಂಚೂಣಿಯಲ್ಲಿದ್ದರೆ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಇನ್ನಷ್ಟು ವಿವರಗಳಿಗಾಗಿ ಮುಂದೆ ಓದಿ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ ಪ್ರಯಾಣಿಕರು, ಮಂಗಳೂರಿಗೆ ಎರಡನೇ ಸ್ಥಾನ
ಮಂಗಳೂರು & ಬೆಳಗಾವಿ ವಿಮಾನ ನಿಲ್ದಾಣ
Follow us on

ಬೆಂಗಳೂರು, ಜೂನ್ 3: ಬೆಳಗಾವಿ ವಿಮಾನ ನಿಲ್ದಾಣವು (Belagavi Airport) ವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿ ಭಾರಿ ಬೆಳವಣಿಗೆ ಸಾಧಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಹಿಂದಿನ ವರ್ಷದ ಏಪ್ರಿಲ್​​​ಗೆ ಹೋಲಿಸಿದರೆ 2024 ರ ಏಪ್ರಿಲ್‌ನಲ್ಲಿ ಶೇ 64.1 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬೆಂಗಳೂರು ಮತ್ತು ಮಂಗಳೂರು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದರೆ, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಬಹಿರಂಗಪಡಿಸಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಸಿಕ ಏರ್ ಟ್ರಾಫಿಕ್ ವರದಿಯು ದೇಶದಲ್ಲಿ ಒಟ್ಟಾರೆ ಪ್ರಯಾಣಿಕರ ಬೆಳವಣಿಗೆಯಲ್ಲಿ ಶೇಕಡಾ 6 ರಷ್ಟು ಬೆಳವಣಿಗೆ ತೋರಿಸಿದೆ. 2023 ರ ಏಪ್ರಿಲ್​ನಲ್ಲಿ 30.56 ಮಿಲಿಯನ್ ಮಂದಿ ಪ್ರಯಾಣಿಸಿದ್ದರೆ, ಏಪ್ರಿಲ್ 2024 ರಲ್ಲಿ 32.39 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. ವಿದೇಶಕ್ಕೆ ಪ್ರಯಾಣಿಸುವ ಭಾರತೀಯರ ಸಂಖ್ಯೆಯಲ್ಲಿ ಶೇಕಡಾ 16.8 ರಷ್ಟು ಏರಿಕೆ ಯಾಗಿದೆ.

ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಈ ವರ್ಷದ ಏಪ್ರಿಲ್‌ನಲ್ಲಿ 31,060 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಕೇವಲ 18,922 ಮಂದಿ ಪ್ರಯಾಣಿಸಿದ್ದರು. ಈ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಎರಡು ಪ್ರಮುಖ ಕಾರಣಗಳಿವೆ. 2023ರ ಅಕ್ಟೋಬರ್​ನಲ್ಲಿ ಪ್ರಾರಂಭವಾದ ಬೆಳಗಾವಿ-ದೆಹಲಿ ಮಾರ್ಗದಲ್ಲಿ ಇಂಡಿಗೋ ವಿಮಾನದ ದೈನಂದಿನ ಕಾರ್ಯಾಚರಣೆ ನಮಗೆ ದೊಡ್ಡ ಉತ್ತೇಜನವನ್ನು ನೀಡಿತು ಎಂದು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ ಪ್ರೆಸ್’ ವರದಿ ಮಾಡಿದೆ. ಮುಂಬೈ ಮಾರ್ಗದಲ್ಲಿ ಸಂಚರಿಸುವ 80 ಆಸನಗಳನ್ನು ಹೊಂದಿರುವ ಸ್ಟಾರ್‌ಏರ್‌ನ ಎಂಬ್ರೇರ್ 175 ವಿಮಾನದ ಜತೆ ಈಗ 50 ಆಸನಗಳನ್ನು ಹೊಂದಿರುವ ಎಂಬ್ರೇರ್ 145 ವಿಮಾನ ಸೇರ್ಪಡೆಯಾಗಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲೂ ಹೆಚ್ಚಿದ ಪ್ರಯಾಣಿಕರು

ಕಳೆದ ವರ್ಷ ಏಪ್ರಿಲ್​​ನಲ್ಲಿ 1,42,995 ಕ್ಕೆ ಹೋಲಿಸಿದರೆ ಈ ವರ್ಷ ಅದೇ ತಿಂಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ 1,91,026 ಮಂದಿ ಸಂಚರಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಎರಡನೇ ಅತಿದೊಡ್ಡ ಬೆಳವಣಿಗೆಯನ್ನು ಕಂಡಿರುವ ಏರ್​ಪೋರ್ಟ್ ಆಗಿದೆ. ಈ ವಿಮಾನ ನಿಲ್ದಾಣದಲ್ಲಿ ಶೇ 33.6 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಫುಟ್​​ಪಾತ್​ಗಳಲ್ಲಿ ದಿನಗಟ್ಟಲೇ ವಾಹನ ಪಾರ್ಕ್ ಮಾಡಿ ಹೋಗುವ ಮುನ್ನ ಎಚ್ಚರ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಿರ ಬೆಳವಣಿಗೆ ದಾಖಲಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ 34,21,997 ಪ್ರಯಾಣಿಕರೊಂದಿಗೆ ಶೇ 6.7 ರ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 32,06,356 ಮಂದಿ ಪ್ರಯಾಣಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ