ಬೆಂಗಳೂರು, ಜೂನ್ 03: ಮಳೆಗಾಲ (Monsoon) ಆರಂಭವಾಗಿದೆ. ಇದು ಹಾವುಗಳ (Snakes) ಸಂತಾನೋತ್ಪತ್ತಿ ಕಾಲ. ಬೆಂಗಳೂರಿನ (Bengaluru) ಜನತೆಗೆ ಹಾವುಗಳ ಕಾಟ ಶುರುವಾಗಿದೆ. ನಗರದ ಹಲವು ಪ್ರದೇಶದಲ್ಲಿನ ಮನೆಯೊಳಗೆ ಮತ್ತು ಅಕ್ಕಪಕ್ಕದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವನ್ಯ ಜೀವಿ ಸಂರಕ್ಷಣಾ ತಂಡದ ಪ್ರಕಾರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿನಗರ ವಲಯದ 110 ಹಳ್ಳಿಗಳಿಂದ ಹೆಚ್ಚಿನ ಕರೆಗಳು ಬಂದಿವೆ ಎಂದು ತಿಳಿಸಿದರು.
ವನ್ಯ ಜೀವಿ ಸಂರಕ್ಷಣಾ ತಂಡ ಕಳೆದ ವಾರ 100 ಕರೆಗಳನ್ನು ಸ್ವೀಕರಿಸಿದೆ. ಸರಾಸರಿ ಪ್ರತಿದಿನ 30 ಕರೆಗಳು ಬಂದಿವೆ. ಹೆಚ್ಚಿನ ಕರೆಗಳು ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯದಿಂದ ಬಂದಿವೆ ಎಂದು ಹೇಳಿದರು.
ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ರಕ್ಷಣಾ ಕಾರ್ಯದಲ್ಲಿ ಭಾರಿ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ತಮ್ಮ ಮನೆಯೊಳಗೆ ಹಾವು ಕಾಣಿಸಿಕೊಂಡಿದ್ದು, ಕೂಡಲೇ ಬಿಬಿಎಂಪಿ ವನ್ಯಜೀವಿ ರಕ್ಷಣಾ ತಂಡಕ್ಕೆ ಕರೆ ಮಾಡಿದೆವು. ಆದರೆ, ರಕ್ಷಣಾ ತಂಡ ಸಂಜೆ 7 ಗಂಟೆಗೆ ಮಾತ್ರ ಆಗಮಿಸಿತು ಎಂದು ಜ್ಞಾನ ಭಾರತಿ ವಾರ್ಡ್‌ನ ನಿವಾಸಿ ಸಚಿನ್ ಹೇಳಿದರು.
ಇದನ್ನೂ ಓದಿ: Bengaluru Rain: ಒಂದೇ ದಿನದಲ್ಲಿ 133 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ
ತಂಡದಲ್ಲಿ ಕೇವಲ ಏಳು ಸದಸ್ಯರಿದ್ದೇವೆ. ಆದರೂ ಕೂಡ ಕರೆ ಬಂದ ಎಲ್ಲ ಸ್ಥಳಗಳಿಗೆ ತೆರಳಿ ಹಾವುಗಳನ್ನು ರಕ್ಷಿಸುತ್ತಿದ್ದೇವೆ. ಇದು ನಮಗೆ ಸವಾಲಿನ ಕೆಲಸವಾಗಿದೆ. ಅತಿ ಹೆಚ್ಚಾಗಿ ಚುಕ್ಕೆ ಹಾವುಗಳು, ನಾಗರಹಾವು, ರಸೆಲ್ಸ್ ವೈಪರ್ ಮತ್ತು ನೀರು ಹಾವುಗಳನ್ನು ರಕ್ಷಿಸಿದ್ದೇವೆ. ಇದು ಸಂತಾನವೃದ್ಧಿ ಕಾಲವಾಗಿರುವುದರಿಂದ ಖಾಲಿ ಜಾಗ ಹಾಗೂ ಪೊದೆಗಳಿರುವ ಜಾಗದಲ್ಲಿ ಹಾವಿನ ಮರಿಗಳಿರುತ್ತವೆ. ಸಣ್ಣ ಮಳೆಗೆ ಮತ್ತು ತೇವಾಂಶದಿಂದ ಹೊರಬರುತ್ತವೆ ಎಂದು ಬಿಬಿಎಂಪಿ ವನ್ಯಜೀವಿ ರಕ್ಷಣಾ ತಂಡದ ಸದಸ್ಯ ಪ್ರಸನ್ನ ಕುಮಾರ್ ಹೇಳಿದರು.
ಹೆಚ್ಚಿನ ಸಂಖ್ಯೆಯ ಸಾವುಗಳು ಮರಿ ಹಾವುಗಳಿಂದ ಉಂಟಾಗುತ್ತವೆ. ಯಾವುದೇ ರೀತಿಯ ಹಾವು ಕಂಡುಬಂದಲ್ಲಿ ಬಿಬಿಎಂಪಿ ಗಮನಕ್ಕೆ ತರಬೇಕು ಎಂದರು.
ಹಾವು ಕಚ್ಚಿದ ಮೇಲೆ ಜನರು ಗಾಬರಿಯಾಗಬೇಡಿ. ಕೂಡಲೇ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ತೆರಳಿ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ ಹೇಳಿದರು.
ಹಾವು ಕಚ್ಚಿದ ಎರಡು ಗಂಟೆಯೊಳಗೆ ಚಿಕಿತ್ಸೆ ಪಡೆಯುವುದು ಸೂಕ್ತ ಎನ್ನುತ್ತಾರೆ ಬಳ್ಳಾರಿ ಮೂಲದ ಉರಗ ರಕ್ಷಕ ವಟ್ಟಂ ಆದಿತ್ಯ.
ಸಹಾಯವಾಣಿ ಸಂಖ್ಯೆಗಳು: ಬಿಬಿಎಂಪಿ ವನ್ಯಜೀವಿ ಸಹಾಯವಾಣಿ: 1533, ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ: 1926, ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ: 9902794711
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ