ಬೆಳಗಾವಿ, ಮಾರ್ಚ್ 2: ರಾಜ್ಯದಲ್ಲಿ ಲೋಕಸಭೆ ಚುನಾವಣೆ (Lok Sabha Elections) ಕಾವು ರಂಗೇರುತ್ತಿದೆ. ಇದೇ ವೇಳೆ ರೈತರ ಆಕ್ರೋಶ ಕೂಡ ಜೋರಾಗಿದೆ. ಸರ್ಕಾರ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಚುನಾವಣೆಯಲ್ಲಿ ಬಿಜಿ ಇದ್ದು ಜಾನುವಾರುಗಳಿಗೆ ಮೇವಿಲ್ಲ. ನೀರಿಲ್ಲದೇ ಪರಿತಪ್ಪಿಸುತ್ತಿವೆ. ಬರ ಪರಿಹಾರವೂ ಇಲ್ಲ, ರೈತರ (Farmers) ಕಷ್ಟ ಹೇಳತಿರದ್ದಾಗಿದ್ದು ಇದರಿಂದ ಬೆಳಗಾವಿಯಲ್ಲಿ ರೈತರು ಇಂದು ಬೀದಿಗಿಳಿದಿದ್ದರು. ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದು, ಕೊನೆ ಘಳಿಗೆಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ಯಾಕೆ? ರೈತರ ಬೇಡಿಕೆಗಳೇನೂ ಎಂಬ ಮಾಹಿತಿ ಇಲ್ಲಿದೆ.
ಜಿಲ್ಲೆಯ ರೈತರು ಮತ್ತು ವಿವಿಧ ಮಠಾಧೀಶರು ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊರಾಟಕ್ಕಿಳಿದಿದ್ದರು. ಬರಗಾಲದ ಪರಿಹಾರ ನೀಡಬೇಕು, ಸಾಲ ಮನ್ನಾ ಮಾಡಬೇಕು, ಘಟಪ್ರಭಾ ನದಿಯಿಂದ ಎಡ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಮುಖ್ಯವಾಗಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು ಅಂತಾ ಒತ್ತಾಯಿಸಿ ಇಂದು ಹೋರಾಟ ಆರಂಭಿಸಿದ್ದರು. ಬೆಳಗಾವಿಯ ಚನ್ನಮ್ಮ ವೃತ್ತದಿಂದ ಹೋರಾಟ ಶುರು ಮಾಡಿದ ರೈತರು ಡಿಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಇದನ್ನೂ ಓದಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಅಕ್ರಮ ಚಟುವಟಿಕೆ: ಡಿಸಿಪಿ ರೋಹನ್ ಜಗದೀಶ್ ದಿಢೀರ್ ಭೇಟಿ
ರೈತರು ಹೋರಾಟ ಮಾಡುವ ವಿಚಾರ ತಿಳಿದು ಡಿಸಿ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ಯಾರು ಒಳ ಬಾರದಂತೆ ತಡೆದಿದ್ದರು. ಇದನ್ನ ಗಮನಿಸಿದ ರೈತರು ಆಕ್ರೋಶಗೊಂಡು ಬ್ಯಾರಿಕೇಡ್ ತಳ್ಳಿ ಗೇಟ್ ಹಾರಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ಉಂಟಾಯಿತು. ಇದೇ ವೇಳೆ ಡಿಸಿಪಿ ರೋಹನ್ ಜಗದೀಶ್ ರೈತರನ್ನ ತಳ್ಳಿದ್ರೂ ಅನ್ನೋ ಕಾರಣಕ್ಕೆ ಆಕ್ರೋಶಗೊಂಡ ರೈತರು ಕಚೇರಿ ಎದುರಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಇನ್ನೂ ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರೈತರ ಮನವಿಯನ್ನ ಆಲಿಸಿದರು. ಇದೇ ವೇಳೆ ಸಾಲಮನ್ನಾ ಮಾಡಲು ಸುಗ್ರವಾಜ್ಞೆ ಹೊರಡಿಸುವಂತೆ ರೈತರು ಪಟ್ಟು ಹಿಡಿದರು. ಆಗ ಇದು ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸ ನಿಮ್ಮ ಮನವಿಯನ್ನ ಸರ್ಕಾರಕ್ಕೆ ಕಳುಹಿಸುತ್ತೇವೆ ಅಂತಾ ಹೇಳಿದರು. ಇದಕ್ಕೆ ಒಪ್ಪದ ರೈತರು ಡಿಸಿ ಅವರ ಮುಂದೆಯೇ ಬೊಬ್ಬೆ ಹೊಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಬ್ಯಾಂಕ್ಗಳಿಂದ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲಾಗುತ್ತಿದ್ದು ಅದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇತ್ತ ಮೇವಿನ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡುತ್ತೇವೆ ಅನ್ನೋ ಭರವಸೆಯನ್ನ ಡಿಸಿ ನೀಡಿದರು. ಆದರೆ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಲು ಡಿಮ್ಯಾಂಡ್ ಇದ್ದು ಅದನ್ನ ಕೂಡ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇನ್ನೂ ತಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಶ್ರೀಗಂಧದ ತುಂಡು ಸಾಗಿಸ್ತಿದ್ದ ನಕಲಿ ಪತ್ರಕರ್ತನ ಬಂಧನ
ಇಂದು ಒಂದು ದಿನದ ಸಾಂಕೇತಿಕ ಹೋರಾಟ ಮಾಡುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಬರ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಮೇವಿನ ವ್ಯವಸ್ಥೆ ಮಾಡುವ ಭರವಸೆ ಸಿಕ್ಕಿದ್ದು ಆದಷ್ಟು ಬೇಗ ಇದನ್ನ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆಲಸ ಮಾಡಲಿ. ಇಲ್ಲವಾದರೆ ರೈತರು ಮತ್ತೊಮ್ಮೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.