ಬೆಳಗಾವಿ ಜಿಲ್ಲೆಯ ಒಂದೊಂದು ರಸ್ತೆಯಲ್ಲೂ ಕಾದು ಕುಳಿತಿರುವ ಯಮರಾಯ

| Updated By: Rakesh Nayak Manchi

Updated on: Nov 06, 2022 | 6:34 PM

Belagavi: ಆರು ತಿಂಗಳ ಹಿಂದಷ್ಟೇ ಮಾಡಿದ್ದ ಜಿಲ್ಲೆಯ ರಾಯಬಾಗ ಅಂಕಲಿ ಮಧ್ಯೆ ಹಾದುಹೋಗುವ ರಾಜ್ಯ ಹೆದ್ದಾರಿ ಈಗ ನೋಡಲು ಸಿಗದ ಸ್ಥಿತಿಗೆ ತಲುಪಿದೆ. ಈ ರಸ್ತೆಯಲ್ಲಿ ವಾಹನ ಚಲಾಯಿಸಿಲು ಗುಂಡಿಗೆ ಬೇಕು ಇಲ್ಲಾವದ್ರೇ ನೀವು ಗುಂಡಿಪಾಲಾಗ್ತೀರಾ.

ಬೆಳಗಾವಿ ಜಿಲ್ಲೆಯ ಒಂದೊಂದು ರಸ್ತೆಯಲ್ಲೂ ಕಾದು ಕುಳಿತಿರುವ ಯಮರಾಯ
ಹದಗೆಟ್ಟ ಚಿಕ್ಕೋಡಿ-ರಾಯಬಾಗ ರಾಜ್ಯ ಹೆದ್ದಾರಿ
Follow us on

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಒಂದೊಂದು ರಸ್ತೆಯಲ್ಲೂ ಯಮರಾಯ ಕಾದು ಕುಳಿತಿದ್ದಾನೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ರಾಯಬಾಗ ಅಂಕಲಿ ಮಧ್ಯೆ ಹಾದುಹೋಗುವ ರಾಜ್ಯ ಹೆದ್ದಾರಿ ಸ್ಥಿತಿಯಂತೂ ಹೇಳುವುದು ಬೇಡ. ಆರು ತಿಂಗಳ ಹಿಂದಷ್ಟೇ ಮಾಡಿದ್ದ ರಸ್ತೆ ಈಗ ನೋಡಲು ಸಿಗದ ಸ್ಥಿತಿಗೆ ತಲುಪಿದೆ. ಈ ರಸ್ತೆಯಲ್ಲಿ ವಾಹನ ಚಲಾಯಿಸಿಲು ಗುಂಡಿಗೆ ಬೇಕು, ಇಲ್ಲಾವದರೆ ನೀವು ಗುಂಡಿಪಾಲಾಗುವುದು ಖಂಡಿತ.

ಚಿಕ್ಕೋಡಿ ಪಟ್ಟಣದಿಂದ ರಾಯಬಾಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಅಂಕಲಿ ಗ್ರಾಮದಿಂದ ರಾಯಬಾಗವರೆಗೂ ಸುಮಾರು ಹತ್ತು ಕಿ.ಮೀ.ವರೆಗೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಆರು ತಿಂಗಳ ಹಿಂದಷ್ಟೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಹೊಸದಾದ ರಸ್ತೆಯೇ ಇದೀಗ ಹಾಳಾಗಿ ಹೋಗಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ನಿತ್ಯವೂ ನೂರಾರು ವಾಹನ ಸವಾರರು ಸಂಚಾರರು ಓಡಾಡ್ತಾರೆ. ಹಾಕಿದ್ದ ಟಾರ್ ಕಿತ್ತು ಹೋಗಿ ರಸ್ತೆ ಎಲ್ಲಿದೆ ಅಂತಾ ಹುಡುಕುವ ಸ್ಥಿತಿ ಇದ್ದು, ಇದರ ಜತೆಗೆ ಬರೋಬ್ಬರಿ ಸುಮಾರು ಹತ್ತು ಕಿ.ಮೀ.ವರೆಗೂ ಗುಂಡಿಗಳು ಬಿದ್ದಿದ್ದು ಇದರಿಂದ ಪ್ರಯಾಣಿಕರು ಹೈರಾಣಾಗಿ ಹೋಗುತ್ತಿದ್ದಾರೆ.

ಇನ್ನೂ ಒಂದು ಕಡೆ ಗುಂಡಿಗಳು ಬಿದ್ದು ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿದ್ದರೆ, ಇನ್ನೊಂದೆಡೆ ಮೊಣಕಾಲುದ್ದ ಬಿದ್ದ ಗುಂಡಿಗಳಿಂದ ವಾಹನಗಳು ಕೂಡ ಹಾಳಾಗುತ್ತಿವೆ. ಎಲ್ಲೆಂದರಲ್ಲಿ ವಾಹನ ಸಾಮಾಗ್ರಿಗಳು ಕಟ್ ಆಗಿ ಬೀಳುತ್ತಿದ್ದರೆ ಇನ್ನೂ ಕೆಲವು ವಾಹನಗಳು ಗುಂಡಿಗೆ ಬಿದ್ದು ಟೈಯರ್ ಬ್ಲಾಸ್ಟ್ ಆಗಿ ಮಾಲೀಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಡೀ ರಸ್ತೆಯೇ ಹಾಳಾಗಿ ಹೋಗಿದ್ದು ಇದೇ ರಸ್ತೆಯಲ್ಲೇ ಅಧಿಕಾರಿಗಳು ಕೂಡ ಕಣ್ಣು ಮುಚ್ಚಿ ಓಡಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಒಂದು ಕಡೆ ತಗ್ಗು ಗುಂಡಿಗೆ ಸಾಕಾಗಿ ಹೋಗಿದ್ದರೆ ಇನ್ನೊಂದು ಕಡೆ ರಸ್ತೆಯೂದ್ದಕ್ಕೂ ಸಾಕಷ್ಟು ಧೂಳು ಕೂಡ ಮೇಲೆಳುತ್ತಿದ್ದು, ಇದು ವಾಹನ ಸವಾರರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡುತ್ತಿದೆ. ಅದರಲ್ಲೂ ಬೈಕ್ ಸವಾರರಂತೂ ಧೂಳಿಗೆ ಕಂಗೆಟ್ಟು ಹೋಗಿದ್ದು ಮುಖಕ್ಕೆ ಕರ್ಚಿಪು ಕಟ್ಟಿಕೊಂಡು ವಾಹನ ಚಲಾಯಿಸಿಕೊಂಡು ಓಡಾಡುತ್ತಿದ್ದಾರೆ. ಇಷ್ಟೇಲ್ಲಾ ರಸ್ತೆ ಹದಗೆಟ್ಟು ಹೋದರೂ ಬೆಳಗಾವಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ ಮಾತ್ರ ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಉಳಿದಿದ್ದಾರೆ. ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರು, ವಾಹನ ಸವಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯ ಯಾವುದೇ ರಸ್ತೆಗೆ ಹೋದರೂ ಗುಂಡಿಗಳೇ ಬಿದ್ದಿದ್ದು ಇದರಿಂದ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತಕ್ಕೆ ಈ ವಿಚಾರ ಗೊತ್ತಿದ್ದರೂ ಮೌನವಾಗಿದೆ. ಮೊನ್ನೆಯಷ್ಟೇ ಉದ್ಘಾಟನೆಗೊಂಡ ರಸ್ತೆಗಳು ಕೂಡ ಕಿತ್ತು ಹೋಗಿದ್ದು ಗುತ್ತಿಗೆದಾರರ ಮೇಲೆ ಕಠಿಣ ಕ್ರಮಕ್ಕೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಬೇಕಿದೆ. ಇದರ ಜೊತೆಗೆ ಸದ್ಯಕ್ಕೆ ಸಂಪೂರ್ಣವಾಗಿ ಹಾಳಾಗಿ ಗುಂಡಿಗಳು ಬಿದ್ದಿರುವ ರಸ್ತೆಗಳಿಗೆ ಗುಂಡಿ ತುಂಬಿಸುವ ಕೆಲಸವನ್ನೂ ಮಾಡಬೇಕಿದೆ.

ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ