ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಬಿಜೆಪಿ ಪ್ರತಿಭಟನೆಗೆ ಕರೆ ನೀಡುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಸಂತ್ರಸ್ತೆಗೆ ಪರಿಹಾರ ಘೋಷಣೆ

Belagavi woman stripped Case : ಮಗ ಮಾಡಿದ ತಪ್ಪಿಗೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದ ವರದಿಗಾಗಿ ಬಿಜೆಪಿ 5 ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯೊಂದನ್ನು ರಚನೆ ಮಾಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಸರ್ಕಾರ ಸಂತ್ರಸ್ತೆ ಮಹಿಳೆಗೆ ಪರಿಹಾರ ಘೋಷಿಸಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಬಿಜೆಪಿ ಪ್ರತಿಭಟನೆಗೆ ಕರೆ ನೀಡುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಸಂತ್ರಸ್ತೆಗೆ ಪರಿಹಾರ ಘೋಷಣೆ
ವಿಧಾನಸೌಧ
Updated By: ರಮೇಶ್ ಬಿ. ಜವಳಗೇರಾ

Updated on: Dec 15, 2023 | 7:33 PM

ಬೆಂಗಳೂರು, (ಡಿಸೆಂಬರ್ 15): ಬೆಳಗಾವಿಯ (Belagavi) ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ  ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಸಂಬಂಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಘೋಷಿಸಿದೆ, ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 5 ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯೊಂದನ್ನು ರಚನೆ ಮಾಡಿದ್ದು, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ, ಸಂತ್ರಸ್ತೆ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಸಂತ್ರಸ್ತ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಮಾತ್ರವಲ್ಲದೇ ಬೆಳಗಾವಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್​: 5 ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದ ಜೆಪಿ ನಡ್ಡಾ 

ಕೆಲ ದಿನಗಳ ಹಿಂದೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅವರ ಮೇಲೆ ಹಲ್ಲೆ ನಡೆಸಿ, ಬೆತ್ತಲೆಯಾಗಿ ಮೆರವಣಿಗೆ ನಡೆಸಲಾಗಿತ್ತು. ಈ ಪ್ರಕರಣವನ್ನು ಸದನದಲ್ಲಿ ಚರ್ಚಿಸುವಂತೆ ಬಿಜೆಪಿ ಹೈಕಮಾಂಡ್​​ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಸೂಚನೆ ಬೆನ್ನಲ್ಲೇ ಇಂದು ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಲ್ಲದೇ ಜೆಪಿ ನಡ್ಡಾ ಅವರು ಸಂಸದೆ ಅಪ್ರಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಎನ್ನುವರೊನ್ನಳಗೊಂಡ ಸಮಿತಿಯನ್ನು ರಚಿಸಿದ್ದು, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ದುಂಡಪ್ಪ ನಾಯಕ್ ಅನ್ನೋ ಯುವಕ ಮತ್ತು ಪ್ರಿಯಾಂಕ್ ಎನ್ನುವ ಯುವತಿ ಪರಸ್ಪರ ಪ್ರೀತಿಸ್ತಿದ್ರು. ಇದಕ್ಕೆ ಯುವತಿ ಕುಟುಂಬಸ್ಥರ ವಿರೋಧವಿತ್ತು. ಯುವತಿ ಪ್ರಿಯಾಂಕಾಗೆ ಬೇರೊಂದು ಯುವಕನ ಜೊತೆ ಮದುವೆ ಮಾಡಿಸಲು ಮುಂದಾಗಿದ್ರು. ಆದ್ರೆ, ರಾತ್ರಿಯೇ ದುಂಡಪ್ಪ ಮತ್ತು ಪ್ರಿಯಾಂಕ್ ಇಬ್ಬರೂ ಊರು ಬಿಟ್ಟು ಓಡಿ ಹೋಗಿದ್ದರು.. ಇದ್ರಿಂದ ಕೆರಳಿದ ಪ್ರಿಯಾಂಕಾ ಕುಟುಂಬಸ್ಥರು, ದುಂಡಪ್ಪನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದರು. ಕಲ್ಲು ತೂರಿ ಹೆಂಚುಗಳನ್ನ ಧ್ವಂಸ ಮಾಡಿದ್ದರು. ಅಲ್ಲದೇ ದುಂಡಪ್ಪ ತಾಯಿಯ ಬಟ್ಟೆ ಬಿಚ್ಚಿ, ಮೆರವಣಿಗೆ ನಡೆಸಿ ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದರು. ಈ ಸಂಬಂಧ ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ,

Published On - 7:32 pm, Fri, 15 December 23