ಟಿವಿ9 ವರದಿ ಫಲಶ್ರುತಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಹಾಸ್ಟೆಲ್ ವಾರ್ಡನ್ ಅಮಾನತು
ಬಾಗಲಕೋಟೆ(Bagalakote) ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಬಳಿ ಇರುವ ಡಾ: ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಹಾಸ್ಟೆಲ್ ವಾರ್ಡನ್, ನಾಲ್ಕೈದು ಜನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬಾಗಲಕೋಟೆ , ಡಿ.15: ನಾಲ್ಕೈದು ಜನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಹಾಸ್ಟೆಲ್ ವಾರ್ಡನ್(Hostel warden) ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬಾಗಲಕೋಟೆ(Bagalakote) ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಬಳಿ ಇರುವ ಡಾ: ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಹಾಸ್ಟೆಲ್ ವಾರ್ಡನ್ ಸುರೇಶ್ ಸಂಕನಗೌಡ ಅಮಾನತ್ತಾಗಿದ್ದಾನೆ. ಈತ ನಾಲ್ಕೈದು ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ,ಇದು ಮೇಲ್ನೋಟಕ್ಕೆ ಸಾಬೀತಾಗಿದ್ದು ಹಾಸ್ಟೆಲ್ ವಾರ್ಡನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಈತ ವಿದ್ಯಾರ್ಥಿನಿಯರು ತಮ್ಮ ಮನೆಗಳಿಗೆ ಫೋನ್ ಮಾಡಬೇಕೆಂದು ಫೋನ್ ಕೇಳಿದಾಗ ವಸತಿ ಶಾಲೆ ಪಕ್ಕದಲ್ಲೇ ಮನೆ ಹೊಂದಿದ್ದ ಈತ ವಿದ್ಯಾರ್ಥಿನಿಯರು ಕರೆ ಮಾಡಲು ಮನೆಗೆ ಬರುವಂತೆ ಹೇಳ್ತಿದ್ದ. ತನ್ನ ಮನೆಗೆ ಬಂದಾಗ ಫೋನ್ ಕೊಡುವ ನೆಪದಲ್ಲಿ ದೇಹದ ವಿವಿಧ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳವನ್ನು ನೀಡುತ್ತಿದ್ದ. ಸುಮಾರು ದಿನಗಳಿಂದ ಇದು ನಡೆಯುತ್ತಿದ್ದರೂ ಸಹಿಸಿಕೊಂಡು ಬಂದಂತಹ ವಿದ್ಯಾರ್ಥಿನಿಯರು ಕೊನೆಗೆ ತಮ್ಮ ಪೋಷಕರಿಗೆ ಈ ವಿಷಯವನ್ನು ಮುಟ್ಟಿಸಿದ್ದರು.
ಇದನ್ನೂ ಓದಿ:ಮಂಡ್ಯ: ರಸ್ತೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಅರೆಸ್ಟ್
ಪೋಷಕರು ವಸತಿ ಶಾಲೆಯ ಪ್ರಿನ್ಸಿಪಾಲ್ , ಜೊತೆಗೆ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದರು. ಪ್ರಿನ್ಸಿಪಾಲ್ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದಾಗಲು ಕೂಡ ಹಾಸ್ಟೆಲ್ ವಾರ್ಡನ್ ಮೇಲೆ ಯಾವುದೇ ಕ್ರಮವಾಗಿರಲಿಲ್ಲ. ನಂತರ ಟಿವಿ9 ಮುಂದೆ ಪೋಷಕರು ಹಾಗೂ ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವಾರ್ಡನ್ ಸುರೇಶ್ ಸಂಕನಗೌಡ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಟಿವಿ9 ನಲ್ಲಿ ಡಿಸೆಂಬರ್ 13ರಂದು ವರದಿ ಪ್ರಸಾರವಾಗಿತ್ತು.
ವರದಿ ಪ್ರಸಾರದ ಬೆನ್ನೆಲ್ಲೇ ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಸಿಇಓ ಶಶಿಧರ ಕುರೇರ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಮಾಹಿತಿಯನ್ನು ಪಡೆದುಕೊಂಡಿದ್ದರು. ವಿದ್ಯಾರ್ಥಿನಿಯರ ಜೊತೆ ಚರ್ಚಿಸಿದಾಗ ,ವಾರ್ಡನ್ ವಿರುದ್ಧ ಅನೇಕ ವಿದ್ಯಾರ್ಥಿಯರು ಆರೋಪ ಮಾಡಿದ್ದು ಕಂಡುಬಂದಿದೆ. ಮಾಡಿದ ಆಪಾದನೆಯು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ಸಿಬ್ಬಂದಿಗೆ ಉಲ್ಲೇಖ ಎರಡರಲ್ಲಿ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ವಾರ್ಡನ್ ನೀಡಿದ ಸಮಜಾಯಿಷಿಯ ಸಮಂಜಸವಾಗಿರುವುದಿಲ್ಲ. ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರು ಬಾಗಲಕೋಟೆ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಇವರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕರಾದಂತ ಡಾಕ್ಟರ್ ನವೀನ್ ಕುಮಾರ್ ರಾಜು ಎಸ್ ಅವರಿಗೆ ವರದಿಯನ್ನು ಸಲ್ಲಿಸಿದರು.
ಬಾಗಲಕೋಟೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವರದಿಯಾಧರಿಸಿ ವಾರ್ಡನ್ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳದೆ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಇಲಾಖೆ ಸೇವಾ ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಾವಳಿ 1957ರ ನಿಯಮ ಅಡಿಯಲ್ಲಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಿನಿಮಯಗಳು 2011ರ ಶೆಡ್ಯೂಲ್ ಮೂರರಂತೆ ಶ್ರೀ ನವೀನ್ ಕುಮಾರ್ ರಾಜು ಎಸ್ ತಮಗೆ ಇರುವಂತಹ ಪ್ರದತ್ತವಾದ ಅಧಿಕಾರದ ಅನ್ವಯ ಇಲಾಖೆ ವಾರು ವಿಚಾರಣೆಯನ್ನು ಕಾಯ್ದಿರಿಸಿ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಹಾಸ್ಟೆಲ್ ವಾರ್ಡನ್ ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ನೀಡಿದ ಆರೋಪ: ಶಿವಮೊಗ್ಗದ ಇಬ್ಬರು ಶಿಕ್ಷಕರು ಅಮಾನತು
ಮುಂದುವರೆದು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಹಿತ ದೃಷ್ಟಿಯಿಂದ ಶಾಲೆಯ ವಾರ್ಡನ್ ಆಗಿ ಹೆಚ್ಚುವರಿ ಪ್ರಭಾರವನ್ನು ತಾತ್ಕಾಲಿಕವಾಗಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರಾದ ಸಿದ್ದಲಿಂಗಪ್ಪ ಯಮಕನಮರಡಿ ಹಿಂದಿ ಭಾಷಾ ಶಿಕ್ಷಕರು ಇವರಿಗೆ ನೀಡಿ ಆದೇಶಿಸಿದೆ. ಇದರ ಜೊತೆಗೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಬೀಳಗಿ ಪೊಲೀಸ್ ಠಾಣೆಯಲ್ಲಿ ಹಾಸ್ಟೆಲ್ ವಾರ್ಡನ್ ಸುರೇಶ್ ಸಂಕನಗೌಡ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಹಾಗೂ ಜಾತಿನಿಂದನೆ ಎರಡು ಎಫ್ ಐ ಆರ್ ದಾಖಲಾಗಿವೆ . ಒಟ್ಟಿನಲ್ಲಿ ಕಾಮುಕ ಹಾಸ್ಟೆಲ್ ವಾರ್ಡನ್ ನನ್ನು ಅಮಾನತ್ತು ಮಾಡುವ ಮೂಲಕ ಅಧಿಕಾರಿಗಳು ಸದ್ಯದ ಮಟ್ಟಿಗೆ ವಿದ್ಯಾರ್ಥಿನಿಯರು ಹಾಗೂ ಪೋಷಕರಲ್ಲಿ ನಿರಾಳತೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ