
ಬೆಳಗಾವಿ, (ಜನವರಿ 28): ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ರಾಮದುರ್ಗ ತಾಲೂಕಿನ ಮಲ್ಲಾಪುರ ಬಳಿ ನಡೆದಿದೆ. ಮಲ್ಲಾಪುರದ ಜಗದೀಶ್ ಕವಳೇಕರ(27), ಗಂಗಮ್ಮ(26) ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾದ ಜೋಡಿ. ಮೊದಲಿನಿಂದಲೂ ಜಗದೀಶ್ ಹಾಗೂ ಗಂಗಮ್ಮ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಜಗದೀಶ್ ಬೇರೆ ಯುವತಿ ಜೊತೆ ಮದುವೆಯಾಗಿದ್ದು, ಸದ್ಯ ಪತ್ನಿ ಗರ್ಭಿಣಿ. ಹೀಗಾಗಿ ಆಕೆ ತವರು ಮನೆಗೆ ಹೋಗಿದ್ದಾಗ ಇತ್ತ ಪ್ರೇಯಿಸಿಯೊಂದಿಗೆ ನದಿಗೆ ಹಾರಿ ಸಾವಿನ ಮನೆ ಸೇರಿದ್ದಾನೆ. ಸ್ವತಃ ಹೆಂಡ್ತಿಯೇ ಜಗದೀಶ್ ಹಾಗೂ ಗಂಗಮ್ಮಳ ಮದ್ವೆ ಮಾಡುವುದಾಗಿ ಹೇಳಿದ್ದಳು ಎಂದು ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಇರುವ ಮಲಪ್ರಭಾ ನದಿಯಲ್ಲಿ ಇಂದು (ಜನವರಿ 28) ಮಲಪ್ರಭಾ ನದಿಯಲ್ಲಿ ತಬ್ಬಿಕೊಂಡ ರೀತಿಯಲ್ಲಿ ಎರಡು ಶವಗಳು ತೆಲಿ ಬಂದಿದ್ದು, ಇದನ್ನು ನೋಡಿ ಸ್ಥಳೀಯರರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವಗಳನ್ನು ನದಿ ದಡಕ್ಕೆ ತಂದು ನೋಡಿದಾಗ ಜಗದೀಶ್ ಹಾಗೂ ಗಂಗಮ್ಮ ಎನ್ನುವುದು ಗೊತ್ತಾಗಿದೆ. ಮದುವೆಯಾಗಿದ್ದವ ಪತ್ನಿ ಬಿಟ್ಟು ಪ್ರೇಯಸಿ ಜೊತೆಗೆ ಸಾವಿನ ಮನೆ ಸೇರಿದ್ದಾನೆ. ಇನ್ನೊಂದೆಡೆ ಗಂಗಮ್ಮಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜಗದೀಶ್ ಕಳವೇಕರ್ (27) ಇದೇ ಗ್ರಾಮದ ಗಂಗಮ್ಮಳನ್ನು ಬೈಕ್ ಮೇಲೆ ಕರೆದುಕೊಂಡು ಮಲ್ಲಾಪುರ- ಗೋಣಗನುರು ಬ್ರಿಡ್ಜ್ ಬಳಿ ಹೋಗಿದ್ದಾರೆ. ಬಳಿಕ ಇಷ್ಟು ದಿನ ದೂರವಾಗಿದ್ವಿ. ಈಗ ಸಾವಿನಲ್ಲೂ ಒಂದಾಗಿರೋಣ ಎಂದು ಇಬ್ಬರು ಸೊಂಟಕ್ಕೆ ಬಟ್ಟೆಕಟ್ಟಿಕೊಂಡು ಬಳಿಕ ಮಲಪ್ರಭಾ ನದಿಗೆ ಹಾರಿದ್ದಾರೆ. ಇಂದು (ಜನವರಿ 28) ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿಯೇ ಮೃತದೇಹಗಳು ಪತ್ತೆಯಾಗಿವೆ. ಮೃತ ಜಗದೀಶ್ ಗೆ ಈಗಾಗಲೇ ಮದುವೆಯಾಗಿದ್ದು, ಎರಡೂವರೆ ತಿಂಗಳ ಹಿಂದೆ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಹೋಗಿದ್ದಳು. ಈ ವೇಳೆ ಜಗದೀಶ್ ಈ ರೀತಿ ಮಾಡಿಕೊಂಡಿದ್ದಾನೆ.
ಪತ್ನಿ ಹೆರಿಗೆಗೆಂದು ತವರಿಗೆ ಹೋಗುತ್ತಿದ್ದಂತೆಯೇ ಜಗದಿಶ್, ತನ್ನ ಪ್ರೇಯಸಿ ಗಂಗಮ್ಮಳನ್ನು ಕರೆದುಕೊಂಡು ಬಂದು 2 ತಿಂಗಳಿಂದ ಮನೆಯಲ್ಲಿಟ್ಟುಕೊಂಡಿದ್ದ. ಈ ವಿಚಾರವಾಗಿ ಕುಟುಂಬದಲ್ಲಿ ಸಾಕಷ್ಟು ಕಲಹ ಉಂಟಾಗಿತ್ತು. ಪತ್ನಿ ಕೂಡ ಈ ವಿಚಾರ ಗೊತ್ತಾಗಿ ಗಂಡನೊಟ್ಟಿಗೆ ಜಗಳ ಕೂಡ ಮಾಡಿದ್ದಳು. ಆದ್ರೆ, ಜಗದೀಶ್ ಮಾತ್ರ ಗಂಗಮ್ಮಳನ್ನ ಬಿಟ್ಟುಲ್ಲ. ಕೊನೆಗೆ ಗಂಡ ಆಕೆಯನ್ನ ಬಿಡುವುದಿಲ್ಲ ಎಂದು ಗೊತ್ತಾಗಿ ಪತ್ನಿ ಕೂಡ ಹೆರಿಗೆಯಾದ ಬಳಿಕ ಇಬ್ಬರಿಗೂ ಮದುವೆ ಮಾಡುತ್ತೇನೆ ಎನ್ನುವ ಮಟ್ಟಿಗೂ ಹೇಳಿದ್ದಳು. ಆದ್ರೆ, ಊರಲ್ಲಿದ್ದ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನೆನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಘಟನೆಯಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು ಇಬ್ಬರು ಪ್ರೀತಿ ಮಾಡ್ತಿದ್ರೇ ಮದುವೆಯಾಕಾಬೇಕಿತ್ತು. ಎರಡು ತಿಂಗಳಿಂದ ಇಬ್ಬರು ಒಟ್ಟಿಗೆ ಇದ್ರೂ ಈಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎನ್ನುವುದು ಸ್ಥಳೀಯರ ಮಾತು. ಸದ್ಯ ಈ ಬಗ್ಗೆ ರಾಮದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಗೆ ಕಾರಣವೇನು ಎನ್ನುವುದನ್ನು ತನಿಖೆ ನಡೆಸಿದ್ದಾರೆ.
ಒಟ್ಟಿನಲ್ಲಿ ಪ್ರೀತಿ ಪ್ರೇಮ ಅಂತ ಹುಡ್ಗಿ ದುರಂತ ಅಂತ್ಯ ಕಂಡಿದ್ದರೆ, ಅತ್ತ ತಂದೆಯಾಗಬೇಕಿದ್ದವ ಮಸಣ ಸೇರಿದ್ದು ದುರ್ದೈವದ ಸಂಗತಿ