ಬೆಳಗಾವಿ: ಪಂಚಮಸಾಲಿ ಸಮಾಜದ ಗಣ್ಯ ನಾಯಕರ ಕಾರಿನ ಮೇಲೆ ದಾಳಿ ಮಾಡಿ ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ. ತಮ್ಮ ರಾಜಕೀಯಕ್ಕೆ ಮುಗ್ಧ ಜನರನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jayamrityunjaya Swamiji) ಪರೋಕ್ಷವಾಗಿ ಕಿಡಿಕಾರಿದ್ದಾರೆ. ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆಯುತ್ತಿರುವ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿನ ಮೇಲೆ ದಾಳಿ ಮಾಡಿರುವುದನ್ನು ಪಂಚಮಸಾಲಿ ಸಮುದಾಯದ 1 ಕೋಟಿ 30 ಲಕ್ಷ ಜನ ಖಂಡಿಸುತ್ತೇವೆ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಈರಣ್ಣ ಕಡಾಡಿ ಅವರೇ ನಿಮ್ಮ ಜತೆಗೆ ಯಾವಾಗಲೂ ನಾವಿರುತ್ತೇವೆ. ಕೆಲವೊಂದಿಷ್ಟು ಜನರಿಗೆ ಪ್ರಚೋದನೆ ಕೊಟ್ಟು ಮಾಡಿದ್ದು ನನಗೆ ನೋವು ಅನಿಸುತ್ತೆ. ಪಕ್ಷದ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಮುತ್ತಿಗೆ ಹಾಕಲಿ. ಆದರೆ ಸಮಾಜದ ಕಾರ್ಯಕ್ರಮಕ್ಕೆ ಬಂದ ವೇಳೆ ಮುತ್ತಿಗೆ ಹಾಕಿದ್ದಾರೆ ಎಂದು ಹೇಳಿದರು.
ಒಂದು ಕಾಲಕ್ಕೆ ಪಂಚಮಸಾಲಿಗಳು ಇಂತಹ ದೌರ್ಜನ್ಯ, ದಬ್ಬಾಳಿಕೆ ಎದುರಿಸಿದ್ದೇವೆ. ನಾವು ಚನ್ನಮ್ಮ ಕುಲದವರು, ಕ್ರಾಂತಿಕಾರಿಗಳು. ತಪ್ಪಿಲ್ಲದೇ ನಮ್ಮ ಸಮಾಜದ ಮುಖಂಡರ ಮೇಲೆ ದಾಳಿ ಮಾಡಿದ್ದಾರೆ. ನೀವೆಲ್ಲರೂ ಒಗ್ಗಟ್ಟಾಗಿ ಬೀದಿಗೆ ಇಳಿಯಬೇಕು. ಎಲ್ಲಾ ನಮ್ಮ ಸಮಾಜದ ನಾಯಕರ ಮೇಲೆ ದಬ್ಬಾಳಿಕೆ ಏನಾದರೂ ಮಾಡಿದರೆ ನೀವೆಲ್ಲಾ ಬೀದಿಗಿಳಿಯಬೇಕು ಎಂದು ಸ್ಚಾಮೀಜಿ ಹೇಳಿದರು.
ನಮ್ಮ ಸಮಾಜದ ಋಣ ನಿಮ್ಮ ಮೇಲೆ ಇರೋದು ಸತ್ಯವಾದರೇ ಮೀಸಲಾತಿ ನೀಡಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಇನ್ನೂ ನಂಬಿದ್ದೇವೆ. ಸಿಎಂಗೆ ಅಧಿಕಾರ ಸಿಗಲು ಪಂಚಮಸಾಲಿ ಸಮಾಜವೇ ಕಾರಣ. ಬಹಳಷ್ಟು ಬಾರಿ ಸಿಎಂ ಬೊಮ್ಮಾಯಿ ನಮ್ಮ ಬಳಿ ಕಣ್ಣೀರಾಕಿದ್ದಾರೆ. ಪಂಚಮಸಾಲಿ ಸಮಾಜದವರನ್ನು ನಾನು ಮರೆಯಲು ಸಾಧ್ಯವಿಲ್ಲ. ನಮ್ಮ ಸಮಾಜದ ಋಣ ನಿಮ್ಮ ಮೇಲೆ ಇರೋದು ಸತ್ಯವಾಗಿದ್ದರೇ ನಮಗೆ ಮೀಸಲಾತಿ ಘೋಷಣೆ ಮಾಡಿ. ಡಿ. 12ರಂದು ಬೆಂಗಳೂರಿನಲ್ಲಿ ಕೊನೆಯ ಹೋರಾಟ ಮಾಡುತ್ತೇವೆ. ಬೆಂಗಳೂರಿಗೆ ಬರೋವಷ್ಟರಲ್ಲಿ ಮೀಸಲಾತಿ ಕೊಟ್ಟರೆ ಸನ್ಮಾನಿಸುತ್ತೇವೆ. ಕರದಂಟು ತಿನ್ನಿಸಿ, ಶಾಲು ಹೊದಿಸಿ ನಿಮಗೆ ಕಲ್ಲು ಸಕ್ಕರೆಯಿಂದ ತುಲಾಭಾರ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳೇ ಇವತ್ತಾದ್ದರೂ ಎಚ್ಚರವಾಗಿ: ಮಾಜಿ ಸಚಿವ ವಿನಯ್ ಕುಲಕರ್ಣಿ
ಸಮಾವೇಶದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿದ್ದು, ಇಲ್ಲಿ ಬಂದವರೂ ಗಟ್ಟಿ ಕಾಳುಗಳೇ, ಒತ್ತಾಯಕ್ಕೆ ಯಾರು ಇಲ್ಲಿ ಬಂದಿಲ್ಲ. 28 ವರ್ಷದಿಂದ 2ಎ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರ್ತಿದ್ದೇವೆ. ಇಷ್ಟು ಜನ ಸೇರಲು ಕಾರಣ ಕೂಡಲಸಂಗಮದ ಸ್ವಾಮೀಜಿ. ಬೇರೆ ಸಮುದಾಯಕ್ಕೆ ಮೀಸಲಾತಿ ಸಿಕ್ಕಿದ್ದಕ್ಕೆ ನಾವ್ಯಾರೂ ಅಸೂಯೆ ಪಡುವುದಿಲ್ಲ. ಇಂದು ನಮ್ಮ ಸಮಾಜ ಸಂಕಷ್ಟಕ್ಕೆ ಸಿಲುಕಿದೆ. ಬಹಳ ನೋವಿನಿಂದ ಇಂದು ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳೇ ಇವತ್ತಾದ್ದರೂ ಎಚ್ಚರವಾಗಿ. ಡಿ. 12 ಬೆಂಗಳೂರಿಗೆ ಇಪ್ಪತ್ತೈದು ಲಕ್ಷ ಅಲ್ಲಾ ಒಂದು ಕೋಟಿ ಜನ ಬರುತ್ತೇವೆ. ನಿಮ್ಮ ಕ್ಷೇತ್ರದಲ್ಲಿ ಗೆಲ್ಲಲೂ ನಮ್ಮ ಸಮಾಜದವರು ಕಾರಣ. ನೀವು ಮುಖ್ಯಮಂತ್ರಿ ಆಗಲು ನಮ್ಮ ಸಮಾಜದವರು ಕಾರಣ ಎಂದು ಹೇಳಿದರು.
ನೀವೇನಾದರೂ ಹೆಚ್ಚು ಕಡಿಮೆ ಮಾಡಿದರೆ ರಾಜಕೀಯವಾಗಿ ಬಹಳ ಅನಾಹುತಕ್ಕೆ ಕಾರಣ ಆಗುತ್ತೀರಿ. ಗೋಕಾಕ್ ಸಮಾವೇಶ ನಮಗೆ ಕರದಂಟು ಕೊಡುವ ಹಾಗೇ ಮಾಡಿ. ಸ್ವಾಮೀಜಿ ಅವರನ್ನ ಸುಮ್ಮನೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದು ಯಾವುದಕ್ಕೂ ಅವರು ಸುಮ್ಮನೆ ಕೂಡದೇ ಸಮಾಜ ಸಂಘಟನೆ ಮಾಡುತ್ತಿದ್ದಾರೆ. ಬರೀ ಮೀಸಲಾತಿಗಾಗಿ ಸಮಾಜ ಕೂಡುವುದು ಬೇಡ. ಯಾರಿಗಾದರೂ ಅನ್ಯಾಯ ಆದರೆ ಕೂಡಿ. ಯಾರು ಕುಗ್ಗುವ ಅವಶ್ಯಕತೆ ಇಲ್ಲಾ ನಿಮ್ಮ ಜತೆಗೆ ನಾವಿರುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Sun, 13 November 22