ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ಯಾಕೆ?​ ಸ್ಪಷ್ಟನೆ ಕೊಟ್ಟ ಡಿಸಿ, ಎಸ್ಪಿ

| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2024 | 10:20 PM

ಪಂಚಮಸಾಲಿ 2 ಮೀಸಲಾತಿ ಹೋರಾಟದ ಕಿಚ್ಚು ಇಂದು(ಡಿಸೆಂಬರ್ 10) ಅಕ್ಷರಶಃ ಹಿಂಸಾಸ್ವರೂಪವನ್ನೇ ಪಡೆದಿತ್ತು. ಇಡೀ ಪಂಚಮಸಾಲಿ ಸಮುದಾಯವೇ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದೆ. ಇದನ್ನು ತಡೆಯಲು ಬ್ಯಾರಿಕೇಡ್​ ಹಾಕಲಾಗಿತ್ತಾದರೂ ಸಾವಿರಾರು ಪ್ರತಿಭಟನಾರರು ಅದನ್ನು ಲೆಕ್ಕಿಸಿದೇ ಮುನ್ನುಗ್ಗಿದ್ದಾರೆ. ಇದರಿಂದ ಕೊನೆ ಕ್ಷಣದಲ್ಲಿ ಪೊಲೀಸರು ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಇದಕ್ಕೆ ಸಮುದಾಯ, ವಿಪಕ್ಷ ಸೇರಿದಂತೆ ಹಲರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಇನ್ನು ಲಾಠಿಚಾರ್ಜ್​ ಮಾಡಿರುವ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತ ಹಾಗೂ ಬೆಳಗಾವಿ SP ಸ್ಪಷ್ಟನೆ ನೀಡಿದ್ದಾರೆ.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ಯಾಕೆ?​ ಸ್ಪಷ್ಟನೆ ಕೊಟ್ಟ ಡಿಸಿ, ಎಸ್ಪಿ
Follow us on

ಬೆಳಗಾವಿ, (ಡಿಸೆಂಬರ್ 10): ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ 2 ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭದ್ರಕೋಟೆ ಭೇದಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಇದನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನೆಕಾರರು ಚಪ್ಪಲಿ, ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನೆಕಾರರು ಗಾಯಗೊಂಡಿದ್ದು, ಪೊಲೀಸರ ಈ ನಡೆಗೆ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಳಗಾವಿ ಪೊಲೀಸ್ ಆಯುಕ್ತ ಹಾಗೂ ಎಸ್ಪಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಇತ್ತ ಐಜಿಪಿ, ಡಿಸಿ,‌ ಕಮಿಷನರ್ ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿ  ಲಾಠಿಚಾರ್ಜ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಲಾಠಿ ಚಾರ್ಜ್​ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

ಸುದ್ದಿಗೋಷ್ಟಿಯಲ್ಲಿ ಡಿಸಿ ಮೊಹ್ಮದ್ ರೋಷನ್ ಮಾತನಾಡಿ, 2 ದಿನದ ಹಿಂದೆ ಪಂಚಮಸಾಲಿ ಹೋರಾಟದ ಅರ್ಜಿ ಇತ್ತು. ಅದರ ಮೇಲೆ ಜಿಲ್ಲಾಡಳಿತದಿಂದ ನಿರ್ಬಂಧ ವಿಧಿಸಿತ್ತು. ಡಿಸಿ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ನಿನ್ನೆ ಪಂಚಮಸಾಲಿ ಸ್ವಾಮೀಜಿ ಜೊತೆಗೆ ಸಭೆ ಮಾಡಿದ್ವಿ. ಇದರಲ್ಲಿ ಹೋರಾಟದ ಕುರಿತು ಚರ್ಚೆ ಮಾಡಲಾಗಿತ್ತು. ಹೋರಾಟಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ವಿ. ಬೆಳಗಾವಿಗೆ ಹೋರಾಟಗಾರರು, ಮುಖಂಡರು ಬರಬಹುದು. ಇವರ ಮೇಲೆ ಯಾವುದೇ ನಿಷೇಧ ಇಲ್ಲ. ಶಾಂತಿಯುತವಾಗಿ ಹೋರಾಟ ನಡೆಸುವಂತೆ ಆದೇಶ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಪ್ರತಿಭಟಿಸಲು ಹೈಕೋರ್ಟ್​ ಆದೇಶ ಇದ್ದು, ಹೈಕೋರ್ಟ್ ಆದೇಶವನ್ನ ನಾವು ಪಾಲನೆ ಮಾಡಿದ್ದೇವೆ. ಲಾಠಿಚಾರ್ಜ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಹೋರಾಟದಲ್ಲಿ ಲಾಠಿಚಾರ್ಜ್ ಪ್ರಕರಣದ ಬಗ್ಗೆ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ. ಹೋರಾಟ ಮಾಡುತ್ತೇವೆ ಎಂದು ಮನವಿ‌ ಮಾಡಿಕೊಂಡಿದ್ದರು. ಶಾಂತವಾಗಿ ಧರಣಿ ಮಾಡಿ ಎಂದು ಅನುಮತಿ ಕೊಟ್ಟಿದ್ವಿ. ಈ ಸಂಬಂಧ ನಿನ್ನೆ ರಾತ್ರಿ ಸಮಾಜದ ಮುಖಂಡರ ಜತೆ ಸಭೆ ಮಾಡಿದ್ವಿ. ಹೈಕೋರ್ಟ್ ಆದೇಶ ಪ್ರತಿ ಕೂಡ ಅವರಿಗೆ ತೋರಿಸಿದ್ದೆವು ಎಂದು ಹೇಳಿದರು.

ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್​: ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ

ಪ್ರತಿಭಟನೆಕಾರರ ವಿರುದ್ಧ ಕೇಸ್ ಹಾಕ್ತೇವೆ ಎಂದ ಕಮಿಷನರ್​

ಬೆಳಗ್ಗೆಯಿಂದ ಶಾಂತ ರೀತಿಯಲ್ಲಿ ಹೋರಾಟ ನಡೀತಿತ್ತು. ಮಧ್ಯಾಹ್ನ ಸುವರ್ಣಸೌಧದ ಒಳಗೆ ಇರುವ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುತ್ತೇವೆ ಎಂದು ಹೇಳಿದ್ರು. 10 ಸಾವಿರ ಜನ ಒಳಗೆ ಹೋಗುತ್ತೇವೆ ಎಂದರು. ಆದ್ರೆ, ಹತ್ತು ಜನರಿಗೆ ಅವಕಾಶ ಕೊಡ್ತೇವಿ ಎಂದು ನಾವು ಹೇಳಿದ್ದೆವು. ಇದಕ್ಕೆ ಒಪ್ಪದೇ ಬ್ಯಾರಿಕೆಡ್ ತಳ್ಳಿ ಹೆದ್ದಾರಿ ಮೇಲೆ ಬರಲು ಯತ್ನಿಸಿದ್ರು. ಈ ವೇಳೆ ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಿದರು. ಇದರಲ್ಲಿ 14 ಪೊಲೀಸ್​​ ಸಿಬ್ಬಂದಿ ಗಾಯಗೊಂಡಿದ್ದಾರೆ. ಇನ್ನು 70ಕ್ಕೂ ಅಧಿಕ ಜನರನ್ನ ಈಗಾಗಲೇ ವಶಕ್ಕೆ ಪಡೆದಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

SP ಭೀಮಾಶಂಕರ್ ಗುಳೇದ್ ಹೇಳಿದ್ದೇನು?

ಇನ್ನು ಪಂಚಮಸಾಲಿ ಹೋರಾಟದಲ್ಲಿ ಲಾಠಿ ಚಾರ್ಜ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ SP ಭೀಮಾಶಂಕರ್ ಗುಳೇದ್, ಹೈಕೋರ್ಟ್ ಆದೇಶದಂತೆ ಹೋರಾಟಕ್ಕೆ ಅನುಮತಿ ನೀಡಿದ್ವಿ. ಹೋರಾಟಗಾರರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿತ್ತು. ಆದ್ರೆ, ಕೋರ್ಟ್​ ಆದೇಶ ಮೀರಿ ಹೆದ್ದಾರಿ ಮೇಲೆ ಕುಳಿತರು. ಮನವೊಲಿಸಲು ಯತ್ನಿಸಿದ್ವಿ, ಎಚ್ಚರಿಕೆ ಕೂಡ ನೀಡಿದ್ವಿ. ಒಪ್ಪದಿದ್ದಾಗ ಬಲವಂತವಾಗಿ ಮಾಡುವ ಪ್ರಮೇಯ ಬಂತು ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ, ಲಾಠಿ ಚಾರ್ಜ್, ಕಲ್ಲು ತೂರಾಟ

ಬ್ಯಾರಿಕೇಡ್​ಗಳನ್ನ ಮುರಿದರು, ಕಲ್ಲು, ಚಪ್ಪಲಿ ತೂರಿದರು ಈ ಮೂಲಕ ಕೋರ್ಟ್​​ ಆದೇಶ ಕಡೆಗಣಿಸಿದ್ರು. ಸಾರ್ವಜನಿಕ ಹಿತದೃಷ್ಟಿಯಿಂದ ಬಲಪ್ರಯೋಗ ಮಾಡಿದ್ವಿ. ನಮ್ಮ ಇಲಾಖೆಯ 14 ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರಿಗೂ ಜಿಲ್ಲಾಡಳಿತದಿಂದ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಿದರು.

ಓರ್ವ ಸಿಬ್ಬಂದಿಗೆ ತಲೆಗೆ ಗಂಭೀರ ಗಾಯವಾಗಿದೆ. ಹಿರಿಯ ಅಧಿಕಾರಿಗಳಿಗೂ ಘಟನೆಯಲ್ಲಿ ಗಾಯವಾಗಿದೆ. ಇದು ಪೂರ್ವ ನಿಯೋಜಿತ ಎಂದು ಹೇಳಲು ಹೋಗುವುದಿಲ್ಲ. ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದು ಗಮನಕ್ಕೆ ತರುತ್ತೇವೆ. ಮುಂದಿನ ಕ್ರಮ ನ್ಯಾಯಾಲಯ ತೆಗೆದುಕೊಳ್ಳುತ್ತೆ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:15 pm, Tue, 10 December 24