ಬೆಳಗಾವಿಗೆ ಗಾಂಜಾ, ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಕಿಂಗ್​ಪಿನ್​ಗಳ ಬಂಧನ​: ಪೊಲೀಸರಿಗೆ ಮೆಚ್ಚುಗೆ

ಕುಂದಾನಗರಿ ಬೆಳಗಾವಿಯನ್ನು ಉಡ್ತಾ ಪಂಜಾಬ್ ಮಾಡಲು ಹೊರಟ್ಟಿದ್ದ ಕತರ್ನಾಕ್ ಗ್ಯಾಂಗ್​ನ ಬೆಳಗಾವಿ ಪೊಲೀಸರು ಮುಂಬೈನಲ್ಲಿ ಖೆಡ್ಡಾಗೆ ಬೀಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳೇ ಈ ದಂಧೆಕೋರರ ಟಾರ್ಗೆಟ್ ಆಗಿದ್ದು ಒಂದು ಸಣ್ಣ ಸುಳಿವಿನಿಂದ 9 ಜನ ಆರೋಪಿಗಳನ್ನ ಬಂಧನ ಮಾಡಿದ್ದಾರೆ. ಬರೀ ಪೆಡ್ಲರ್, ಗಾಂಜಾ ಸೇವನೆ ಮಾಡ್ತಿದ್ದವರನ್ನು ಅರೆಸ್ಟ್ ಮಾಡುತ್ತಿದ್ದ ಪೊಲೀಸರು ಇದೀಗ ಗ್ಯಾಂಗ್ ಲೀಡರ್​ನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ 8ತಿಂಗಳ ಅವಧಿಯಲ್ಲಿ ಎಷ್ಟು ಜನ ಬಂಧನ ಆಗಿದೆ? ಯಾರಿತ ಮಾಸ್ಟರ್ ಮೈಂಡ್ ಇಲ್ಲಿದೆ ವಿವರ

ಬೆಳಗಾವಿಗೆ ಗಾಂಜಾ, ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಕಿಂಗ್​ಪಿನ್​ಗಳ ಬಂಧನ​: ಪೊಲೀಸರಿಗೆ ಮೆಚ್ಚುಗೆ
ಬೆಳಗಾವಿ ಪೊಲೀಸ್​
Edited By:

Updated on: Aug 23, 2025 | 10:28 PM

ಬೆಳಗಾವಿ, ಆಗಸ್ಟ್​ 23: ಕುಂದಾನಗರಿ ಬೆಳಗಾವಿಯು (Belagavi) ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರು ರಾಜ್ಯಗಳನ್ನು ಸಂಪರ್ಕಿಸುವ ಮಹಾನಗರವಾಗಿದೆ. ಇಂತಹ ಕುಂದಾನಗರಿ ಈಗ ಉಡ್ತಾ ಪಂಜಾಬ್ ಆಗುತ್ತಿದೆಯಾ ಎಂಬ ಆತಂಕ ಶುರುವಾಗಿದೆ. ಪೊಲೀಸರ ಒಂದು ಕಾರ್ಯಾಚರಣೆ ಇದಕ್ಕೆ ಬ್ರೇಕ್ ಹಾಕಿದ್ದು, ಡ್ರಗ್ (Drug)​ ಮಾಫಿಯಾದ  ಮಾಸ್ಟರ್ ಮೈಂಡ್​ ಪೊಲೀಸರ (Police) ಖೆಡ್ಡಾಗೆ ಬಿದ್ದಿದ್ದಾನೆ.

ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಸಪ್ಲೈ ದಂಧೆ ಬೆಳಗಾವಿಯಲ್ಲಿ ಜೋರಾಗಿತ್ತು. ಮಿಸೆ ಚಿಗುರದ ಯುವಕ, ಯುವತಿಯರಿಗೆ ಗಾಂಜಾ, ಫೆ‌ನ್ನಿ, ಹೇರಾಯಿನ್ ಸಲೀಸಾಗಿ ಸಪ್ಲೈ ಆಗುತ್ತಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಈ ಸಂಬಂಧ ಕಾರ್ಯಾಚರಣೆಗೆ ಇಳಿದ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡತ್ತಿದ್ದ ಖರ್ತನಾಕ್ ಗ್ಯಾಂಗ್​ನ್ನು ಬಂಧಿಸಿದ್ದಾರೆ. ಸಿಇಎನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಆರ್ ಗಡ್ಡೇಕರ್ ನೇತೃತ್ವದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ.

ಈ ಹಿಂದೆ ಸಣ್ಣ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ಓರ್ವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಈತ ಹಲವು ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದನು. ಈತ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಮುಂಬೈನಲ್ಲಿ ಕಿಂಗ್​ಪಿನ್​ನನ್ನು ರೆಡ್ ಹ್ಯಾಂಡ್​ ಆಗಿ ಅರೆಸ್ಟ್ ಮಾಡಿದ್ದರು. ಹಿಂಡಲಗಾ ಜೈಲಿನಲ್ಲಿರುವ ಈ ಕಿಂಗ್​ಪಿನ್​ನನ್ನು ಭೇಟಿಯಾಗಲು ಬರುತ್ತಿದ್ದ ಗಾಂಜಾ ಮಾಸ್ಟರ್ ಮೈಂಡ್​ನನ್ನು ಬೆಳಗಾವಿ ನಗರದ ಹೊರ ವಲಯದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರಕ್ಕೆ ಸಪ್ಲೈ ‌ಮಾಡುತ್ತಿದ್ದ 30 ಲಕ್ಷ ಮೌಲ್ಯದ 50 ಕೆಜಿ ಗಾಂಜಾ, ಎರಡು ಕಾರು, 13 ಮೊಬೈಲ್ ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಮಾಫಿಯಾದ ಮಾಸ್ಟ್​ರ್ ಮೈಂಡ್ ಇಸ್ಮಾಯಿಲ್ ಸದ್ದಾಂ ಸಯ್ಯದ, ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ್ ಆಸಬೆ, ರಮಜಾನ್ ಜಮಾದಾರ, ತಾಜೀಬತ ಮುಲ್ಲಾ ಬಂಧಿತರು.

ಆರೋಪಿ ಇಸ್ಮಾಯಿಲ್ ಕಳೆದ ನಾಲ್ಕು ವರ್ಷದಿಂದ ಆ್ಯಕ್ಟೀವ್ ಆಗಿದ್ದನು. ಇಡೀ ಬೆಳಗಾವಿಗೆ ಈತನೇ ಗಾಂಜಾ ಸಪ್ಲೈ ಮಾಡುತ್ತಿದ್ದನು. ಈತನ ಬೆನ್ನು ಬಿದ್ದಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದನು. ಮಧ್ಯಪ್ರದೇಶ, ಮುಂಬೈನಲ್ಲಿ ಇರುತ್ತಿದ್ದ ಈತ ಹಲವು ರಾಜ್ಯಗಳಿಗೂ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್​ ಆಗಿದ್ದಾನೆ. ಈತನ ಬೆನ್ನು ಬಿದ್ದಿದ್ದ ಸಿಇಎನ್ ಠಾಣೆ ಸಿಪಿಐ ಗಡ್ಡೇಕರ್ ಆ್ಯಂಡ್ ಟೀಮ್ ಕಡೆಗೂ ಇಸ್ಮಾಯಿಲ್​ನನ್ನು ಬಂಧಿಸುವಯಲ್ಲಿ ಯಶಸ್ವಿಯಾಗಿದೆ.

ಜೊತೆಗೆ ಗಾಂಜಾ ಹಾಗೂ ಮಾರಕಾಸ್ತ್ರಗಳ ಸಮೇತ ಹಿಡಿದು 9 ಜನರನ್ನ ಹಿಂಡಲಗಾ ಜೈಲಿಗಟ್ಟಿದೆ. ಕಳೆದ ಎರಡು ತಿಂಗಳಿನಿಂದ ಬೆಳಗಾವಿ ನಗರ ಪೊಲೀಸರು ಗಾಂಜಾ ಮಾಫಿಯಾದ ಬೆನ್ನು ಬಿದ್ದಿದ್ದರು. ಈವರೆಗೂ ಬೆಳಗಾವಿಯಲ್ಲಿ ಗಾಂಜಾ ಮಾರಾಟ ಮಾಡ್ತಿದ್ದವರನ್ನು ಮಾತ್ರ ಬಂಧಿಸಿದ್ದರು. ಕಳೆದ ಎಂಟು ತಿಂಗಳ ಅವಧಿಯಲ್ಲಿ ನಗರದಲ್ಲಿ ಬರೋಬ್ಬರಿ 129 ಎನ್​ಡಿಪಿಎಸ್ ಕೇಸ್​ಗಳು ದಾಖಲಾಗಿದ್ದು, ಇದರಲ್ಲಿ 97 ಆರೋಪಿಗಳನ್ನ ಬಂಧಿಸುವಯಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಮಾದಕ ವಸ್ತು ಸೇವನೆ ಮಾಡಿದವರ ಮೇಲೆ 85ಕೇಸ್​ಗಳು ದಾಖಲಾಗಿದ್ದು, 104 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಎಂಟು ತಿಂಗಳಲ್ಲಿ 34ಲಕ್ಷ ಮೌಲ್ಯದ 102ಕೆಜಿ ಗಾಂಜಾ ಮತ್ತು ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಕೋಟಿ ರೂ ಡ್ರಗ್ಸ್ ಸೀಜ್: ಆಫ್ರಿಕಾ ಮೂಲದ ಇಬ್ಬರ ಬಂಧನ

ಒಟ್ಟಿನಲ್ಲಿ ಪೊಲೀಸರು ಬೆಳಗಾವಿಯನ್ನು ಉಡ್ತಾ ಪಂಜಾಬ್ ಮಾಡಲು ಯತ್ನಿಸುತ್ತಿದ್ದವರ ಹೆಡೆಮುರಿ ಕಟ್ಟಿದ್ದಾರೆ. ಪಬ್ ಸಂಸ್ಕೃತಿ ಹೆಚ್ಚಾಗುತ್ತಿದ್ದಂತೆ ಡ್ರಗ್ಸ್ ದಂಧೆಯೂ ಜೋರಾಗಿ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸ್ ಪಣತೊಟ್ಟಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿದ ಸೈಬರ್ ಕ್ರೈಮ್ ಪೊಲೀಸರಿಗೆ, ಪೊಲೀಸ್ ಆಯುಕ್ತ ನಗದು ಬಹುಮಾನ ಘೋಷಿಸಿದ್ದಾರೆ. ಡ್ರಗ್ಸ್ ಮುಕ್ತ ನಗರ ಮಾಡಲು ಬೆಳಗಾವಿ ಪೊಲೀಸರು ಕಂಕಣಬದ್ಧರಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ