
ಬೆಳಗಾವಿ, ಜುಲೈ 12: ಹಣಕಾಸು ವ್ಯವಹಾರ ಹಿನ್ನೆಲೆಯಲ್ಲಿ ವೈದ್ಯನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಸವದಿ ಗ್ರಾಮದಲ್ಲಿ ನಡೆದಿದೆ. ಮಹಿಷವಾಡಗಿ ಗ್ರಾಮದ ವೈದ್ಯ ಆನಂದ ಉಪಾಧ್ಯಾಯ ಅವರನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಕಾಡಪ್ಪ ತೇಲಿ, ಸಿದ್ದಪ್ಪ ತೇಲಿ, ಸಿದ್ದರಾಯ ತೇಲಿ, ಧರೆಪ್ಪಾ ತೇಲಿ ಮತ್ತು ನಾಗಪ್ಪ ಬಿರಡಿ ಸೇರಿದಂತೆ 25 ಜನರ ಗ್ಯಾಂಗ್ ಜುಲೈ 10ರಂದು ಶಾಲಾ ಮೈದಾನದಿಂದ ವೈದ್ಯ ಆನಂದ ಉಪಾಧ್ಯಾಯ ಅವರನ್ನು ಅಪಹರಿಸಿದ್ದಾರೆ. ಬಳಿಕ, ವೈದ್ಯ ಆನಂದ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಟ್ಟಿಗೆ, ಪೈಪ್, ಹಗ್ಗದಿಂದ ಮನಬಂದಂತೆ ಥಳಿಸಿ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ.
ವೈದ್ಯ ಆನಂದ ಉಪಾಧ್ಯಾಯ ಅವರ ಅಪಹರಣದ ಬಗ್ಗೆ ಸಂಬಂಧಿಕರು ತಕ್ಷಣ ಅಥಣಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದರೂ ಅಥಣಿ ಠಾಣೆ ಪೊಲೀಸರು ನಿರ್ಲಕ್ಷ್ಯ ತೋರಿದ್ದ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಕುಟುಂಬಸ್ಥರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಅವರಿಗೆ ಮನವಿ ಮಾಡಿದ್ದಾರೆ. ಕೊನೆಗೆ, ಅಧಿಕಾರಿಗಳು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಂಗಳಿಯಲ್ಲಿ ಗೋ ರಕ್ಷಕರ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್
ವೈದ್ಯ ಆನಂದ ಉಪಾಧ್ಯಾಯ ಅವರು 2018ರಲ್ಲಿ ತೇಲಿ ಕುಟುಂಬದ ಜೊತೆ ಸೇರಿ ಶ್ರೀಪದ್ಮಾವತಿ ಇಂಟರ್ ನ್ಯಾಷನಲ್ ಸ್ಕೂಲ್ ಆರಂಭಿಸಿದ್ದರು. ವೈದ್ಯ. ಆನಂದ್ ತೇಲಿ ಕುಟುಂಬಕ್ಕೆ 1.80 ಕೋಟಿ ಹಣ ನೀಡಿದ್ದರು. ಆನಂತರ ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿ ಶಾಲೆ ಆಡಳಿತ ಮಂಡಳಿಯಿಂದ ಹೊರಬಂದಿದ್ದರು. ಶಾಲೆ ವಿಚಾರವಾಗಿ ಹೈಕೋರ್ಟ್ನಲ್ಲಿ ಕೇಸ್ ವಿಚಾರಣೆ ನಡೆಯುತ್ತಿದೆ. ಈ ವಿಚಾರಕ್ಕೆ ವೈದ್ಯ ಆನಂದ್ ಅವರನ್ನು ಅಪಹರಿಸಿ, ಹಲ್ಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ, ಅಥಣಿ ಪೊಲೀಸರು ವೈದ್ಯ ಆನಂದ್ ಅವರನ್ನು ರಕ್ಷಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published On - 5:24 pm, Sat, 12 July 25