ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿದ್ದಾರೆ ಮೂರ್ನಾಲ್ಕು ಸೈನಿಕರು, ಭಾರತಾಂಬೆ ಸೇವೆಗೆ ಮುಡಿಪಾದ ಮಲಿಕವಾಡ

| Updated By: ಆಯೇಷಾ ಬಾನು

Updated on: Aug 15, 2023 | 9:31 AM

Soldiers Village: ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೃಷ್ಣಾ ಉಪನದಿ ದೂಧ್‌ಗಂಗಾ ದಡದಲ್ಲಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ‌‌ಮಲಿಕವಾಡ ಗ್ರಾಮದಲ್ಲಿ ಈವರೆಗೂ ಐನೂರಕ್ಕೂ ಹೆಚ್ಚು ಜನ ಸೇವೆ ಸಲ್ಲಿಸಿ ಹಲವು ಯುದ್ಧಗಳಲ್ಲಿ ಹೋರಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ‌. ಮಲಿಕವಾಡ ಗ್ರಾಮದ ದಿವಂಗತ ಬಾಳಾಸಾಹೇಬ್ ಕರಜಗೆ ಅವರು 1961ರ ಭಾರತ ಪಾಕಿಸ್ತಾನ ಯುದ್ಧ ಹಾಗೂ 1962ರ ಚೀನಾ ಭಾರತ ಯುದ್ಧದಲ್ಲಿ ಹೋರಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ರು.

ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿದ್ದಾರೆ ಮೂರ್ನಾಲ್ಕು ಸೈನಿಕರು, ಭಾರತಾಂಬೆ ಸೇವೆಗೆ ಮುಡಿಪಾದ ಮಲಿಕವಾಡ
ಮಲಿಕವಾಡದ ಮಾಜಿ ಸೈನಿಕರು
Follow us on

ಚಿಕ್ಕೋಡಿ, ಆ.15: 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ(Independence Day) ಇಡೀ ದೇಶ ಆನಂದಿಸುತ್ತಿದೆ. ಈ ವೇಳೆ ರಾಜ್ಯದ ಗಡಿಭಾಗದಲ್ಲಿ ಇರುವ ಈ ಒಂದು ಗ್ರಾಮದ ಸ್ಟೋರಿ ನೀವು ಓದಲೇ ಬೇಕು. ಏಕೆಂದರೆ ದೇಶಭಕ್ತಿ, ದೇಶಸೇವೆ ಅನ್ನೋದು ಈ ಗ್ರಾಮದ ಪ್ರತಿಯೊಂದು ಮನೆ ಮನದಲ್ಲಿದೆ. 400ಕ್ಕೂ ಹೆಚ್ಚು ಮನೆಗಳು ಇರುವ ಈ ಊರಲ್ಲಿರೋ ಯಾವುದೇ ಮನೆಗೆ ಹೋದರೂ ಆ ಮನೆಯಿಂದ ಒಬ್ಬನಾದರೂ ಭಾರತ ಮಾತೆ ಸೇವೆಗಾಗಿ ಸೈನ್ಯಕ್ಕೆ ಸೇರಿರುವರು ಸಿಕ್ಕೇ ಸಿಗ್ತಾರೆ(Soldiers Village). ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ಈ ಊರಿನ ಗ್ರಾಮಸ್ಥರು ಅದೊಂದು ಬೇಡಿಕೆ ಇಟ್ಟು ವರ್ಷಗಳೇ ಗತಿಸಿದರೂ ಸರ್ಕಾರ ಏಕೋ ಗಮನಹರಿಸುತ್ತಿಲ್ಲ ಎಂಬ ನೋವು ಈ ಗ್ರಾಮದ ಜನರಿಗಿದೆ. ಅಷ್ಟಕ್ಕೂ ಯಾವುದು ಆ ಗ್ರಾಮ? ಆ ಗ್ರಾಮದ ಗ್ರಾಮಸ್ಥರ ಬೇಡಿಕೆಯಾದರೂ ಏನು? ಈ ಸ್ಟೋರಿ ಓದಿ.

ಮಲಿಕವಾಡ ಗ್ರಾಮದಲ್ಲಿ ಇದ್ದಾರೆ ಮನೆಗೊಬ್ಬ ವೀರಯೋಧ

ದೇಶ ಉಳಿಯಲು ಮನೆಗೊಬ್ಬ ಯೋಧ, ಮನೆಗೊಂದು ಮರ ಇರಬೇಕು ಎಂಬ ಗಾದೆ ಮಾತಿದೆ. ಈ ಗಾದೆ ಮಾತಿನಂತೆಯೇ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಪ್ರತಿ ಮನೆಯಲ್ಲೊಬ್ಬ ವೀರ ಯೋಧನಿದ್ದಾನೆ. ಕೆಲವರು ಭಾರತೀಯ ಭೂ ಸೇನೆ, ವಾಯು ಸೇನೆ, ನೌಕಾದಳದಲ್ಲಿ ಸೇವೆಯಲ್ಲಿದ್ದರೆ ಇನ್ನು ಕೆಲವರು ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದಿದ್ದಾರೆ. 400ಕ್ಕೂ ಹೆಚ್ಚು ಮನೆ ಇರುವ ಮಲಿಕವಾಡ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಓರ್ವ ಕರ್ತವ್ಯ ನಿರತ ಸೈನಿಕ ಇಲ್ಲವೇ ಸೇವೆ ಸಲ್ಲಿಸಿ ಬಂದ ಮಾಜಿ ಸೈನಿಕ ಸಿಕ್ಕೇ ಸಿಗುತ್ತಾರೆ. ಮಲಿಕವಾಡ ಗ್ರಾಮ ಯೋಧರ ತವರೂರು ಅಂತಾನೆ ಫೇಮಸ್‌.

ಬಾಳಾಸಾಹೇಬ್ ಕರಜ ಯುವಕರಿಗೆ ಪ್ರೇರಣೆ

ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೃಷ್ಣಾ ಉಪನದಿ ದೂಧ್‌ಗಂಗಾ ದಡದಲ್ಲಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ‌‌ಮಲಿಕವಾಡ ಗ್ರಾಮದಲ್ಲಿ ಈವರೆಗೂ ಐನೂರಕ್ಕೂ ಹೆಚ್ಚು ಜನ ಸೇವೆ ಸಲ್ಲಿಸಿ ಹಲವು ಯುದ್ಧಗಳಲ್ಲಿ ಹೋರಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ‌. ಮಲಿಕವಾಡ ಗ್ರಾಮದ ದಿವಂಗತ ಬಾಳಾಸಾಹೇಬ್ ಕರಜಗೆ ಅವರು 1961ರ ಭಾರತ ಪಾಕಿಸ್ತಾನ ಯುದ್ಧ ಹಾಗೂ 1962ರ ಚೀನಾ ಭಾರತ ಯುದ್ಧದಲ್ಲಿ ಹೋರಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ರು. ಭಾರತೀಯ ಸೇನೆಯಲ್ಲಿ ಜೂನಿಯರ್ ಆಫೀಸರ್ ಆಗಿದ್ದ ಇವರು ಚೀನಾ ಯುದ್ಧದ ಹೋರಾಟದಲ್ಲಿ ಚೀನಾ ಸೈನಿಕರ ಕೈಗೆ ಸಿಕ್ಕು 11 ತಿಂಗಳ ಕಾಲ ಚೀನಾದಲ್ಲಿ ಸೆರೆವಾಸ ಅನುಭವಿಸಿ ವಾಪಸ್ ಆಗಿದ್ರು. ವೀರಯೋಧ ಬಾಳಾಸಾಹೇಬ್ ತಾಯ್ನಾಡಿಗೆ ವಾಪಸ್ ಆದ ಬಳಿಕ ಹಲವು ಯುವಕರಿಗೆ ಪ್ರೇರಣೆಯಾದರು. 1965ರಿಂದ ಈಚೆಗೆ ಸುಮಾರು ಐನೂರಕ್ಕೂ ಹೆಚ್ಚು ಯೋಧರು ಈ ಗ್ರಾಮದಿಂದ ದೇಶಸೇವೆ ಸಲ್ಲಿಸಿ ಬಂದಿದ್ದಾರೆ. ಈಗಲೂ ನೂರಕ್ಕೂ ಹೆಚ್ಚು ಜನ ಭಾರತೀಯ ಸೇನೆಯ ವಿವಿಧ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸೇನೆ ಈಗ ಕರೆ ಮಾಡಿದ್ರು ನಾವು ವಾಪಸ್ ಹೋಗಲು ಎದೆಯುಬ್ಬಿಸಿ ರೆಡಿ ಇರ್ತೀವಿ

ಮಲಿಕವಾಡ ಗ್ರಾಮದ ಕೆಲವೊಂದು ಮನೆಗಳಲ್ಲಂತೂ ನಾಲ್ಕು ಐದು ಜನ ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿದ ಉದಾಹರಣೆ ಇದೆ. ಮಲಿಕವಾಡ ಗ್ರಾಮದ ಶಾಂತಾಬಾಯಿ ಸುತಾರ್‌ರವರ ಇಬ್ಬರು ಗಂಡು ಮಕ್ಕಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದಾರೆ. ಅವರ ಮೊಮ್ಮಗ ಸಹ ಈಗ ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದ್ದ ಇಬ್ಬರು ಗಂಡ ಮಕ್ಕಳನ್ನು ಭಾರತ ಮಾತೆಯ ಸೇವೆಗೆ ಸಲ್ಲಿಸಿ ನೀವು 28 ವರ್ಷಗಳ ಕಾಲ ಹೇಗಿದ್ರಿ ಅಂತಾ ಕೇಳಿದ್ರೆ ದೇಶಸೇವೆಗೆ ಹೋಗಿದ್ರು ನಾವು ಹೊಲ ಮನೆ ನೋಡಿಕೊಳ್ಳುತ್ತಿದ್ವಿ ಅಂತಾ ಹೆಮ್ಮೆಯಿಂದ ಹೇಳುತ್ತಾರೆ. ಶಾಂತಾಬಾಯಿ ಸುತಾರ್‌ರವರ ಕಿರಿಯ ಪುತ್ರ ಶ್ರೀಕಾಂತ್ ಸುತಾರ್ 1983ರಲ್ಲಿ ಬೆಳಗಾವಿಯ ಮರಾಠಾ ಲಘು ಪದಾತಿ ದಳದಲ್ಲಿ ಸೈನಿಕರಾಗಿ ಸೇರ್ಪಡೆಯಾಗಿ ಹಂತಹಂತವಾಗಿ ಉನ್ನತ ಹುದ್ದೆಗೆ ಹೋದಂತವರು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ಹೋರಾಡಿ ವಿಜಯಪತಾಕೆ ಹಾರಿಸಿದವರು‌. ಇವರ ಸಹೋದರ ದತ್ತಾತ್ರೇಯ ಪವಾರ್ ಸಹ 1984ರಲ್ಲಿ ಜನರಲ್ ರಿಸರ್ವ್ ಇಂಡಿಯನ್ ಫೋರ್ಸ್‌ನಲ್ಲಿ ಭರ್ತಿಯಾಗಿ ಸೇನೆಯಲ್ಲಿಯೇ ನರ್ಸಿಂಗ್ ಕಳಿತು ನರ್ಸಿಂಗ್ ವಿಭಾಗದ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುದ್ಧದಲ್ಲಿ ಭಾಗಿಯಾಗಿ ಗಾಯಗೊಂಡ ಸೈನಿಕರಿಗೆ ನಾವು ಉಪಚರಿಸುತ್ತಿದ್ದೇವು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಹೆಮ್ಮೆ ಇದೆ. ಈಗಲೂ ನಮಗೆ ವಾಪಸ್ ಬನ್ನಿ ಅಂತಾ ಭಾರತೀಯ ಸೇನೆ ಒಂದು ಕರೆ ನೀಡಲಿ ನಾವು ವಾಪಸ್ ಹೋಗಲು ಎದೆಯುಬ್ಬಿಸಿ ರೆಡಿ ಇರ್ತೀವಿ ಅಂತಾ ಕಣ್ಣೀರಿಡ್ತಾರೆ ದತ್ತಾತ್ರೇಯ ಸುತಾರ್.

ಇದನ್ನು ಓದಿ: ಕೆಂಪುಕೋಟೆ, ಇಂಡಿಯಾ ಗೇಟ್, ಸಂಸತ್ ಭವನ ಸೇರಿದಂತೆ ದೇಶದೆಲ್ಲೆಡೆ ರಾರಾಜಿಸುವ ತ್ರಿವರ್ಣ ಧ್ವಜ ತಯಾರಾಗುವುದೇ ಕರ್ನಾಟಕದಲ್ಲಿ

ಮಲಿಕವಾಡ ಗ್ರಾಮದ ಭಾರತೀಯ ಭೂಸೇನೆಯ ಮಾಜಿ ಕ್ಯಾಪ್ಟನ್ ಶ್ರೀಕಾಂತ ಸುತಾರ್ ಪುತ್ರ ರಾಜೇಂದ್ರ ಸುತಾರ್ ಭಾರತೀಯ ವಾಯುದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2019ರಲ್ಲಿ ವಾಯುಸೇನೆಯಲ್ಲಿ ಏರ್‌ಮನ್ ಆಗಿದ್ದ ರಾಜೇಂದ್ರ ಸುತಾರ್ ರಜೆ ಮೇಲೆ ಮದುವೆಗೆ ಅಂತಾ ಊರಿಗೆ ಬಂದಿದ್ರು.‌ ಹಸೆಮಣೆ ಏರಿದ ನಾಲ್ಕೇ ದಿನಗಳಲ್ಲಿ ಸೇವೆಗೆ ಮರಳುವಂತೆ ಕರೆ ಬಂದಿತ್ತು. ಆಗ ಹಸೆಮಣೆ ಏರಿದ ನಾಲ್ಕನೇ ದಿನಕ್ಕೆ ರಾಜೇಂದ್ರ ಸುತಾರ್ ಕರ್ತವ್ಯಕ್ಕೆ ಮರಳಿದ್ದರು. ಇದು ಅಲ್ಲವೇ ದೇಶಪ್ರೇಮ. ದೇಶಭಕ್ತಿ ಅಂದ್ರೆ. ಭಾರತೀಯ ಸೇನಾಪಡೆಯಲ್ಲಿ ನಮ್ಮ ಮನೆಯಿಂದ ಮೂವರು ಸೇವೆ ಸಲ್ಲಿಸಿದ್ದೇವೆ ಎಂಬುದಕ್ಕೆ ನಮಗೆ ಹೆಮ್ಮೆ ಅಭಿಮಾನ ಇದೆ‌ ಎಂದು ಎಕ್ಸ್ ಕ್ಯಾಪ್ಟನ್ ಶ್ರೀಕಾಂತ್ ಸುತಾರ್ ಅವರು ಸಂತಸ ಹಂಚಿಕೊಂಡರು.

ಎಕ್ಸ್ ಕ್ಯಾಪ್ಟನ್ ಶ್ರೀಕಾಂತ್ ಸುತಾರ್ ಹೇಳುವಂತೆ ತಾವು ತಮ್ಮ ಊರಿನ ಬಾಳಾಸಾಹೇಬ್ ಕರಜಗೆ ಸೇರಿ ಇತರರು ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿ ವಾಪಸ್ ಆದ ಬಳಿಕ ಅವರ ಶಿಸ್ತು, ಅವರ ಲೈಫ್‌ಸ್ಟೈಲ್, ಊರಲ್ಲಿ ಅವರಿಗೆ ಸಿಗುವ ಗೌರವ ನೋಡಿ ಭಾರತೀಯ ಸೇನೆ ಸೇರಬೇಕು ಎಂದು ಆಸೆಯಾಯಿತಂತೆ. ಅಷ್ಟೇ ಅಲ್ಲದೇ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಮಲಿಕವಾಡ ಗ್ರಾಮದಲ್ಲಿ ತಾವು ಕಲಿಯುವ ವೇಳೆ ಕನ್ನಡ ಶಾಲೆ ಇರಲಿಲ್ವಂತೆ. ಮರಾಠಿ ಮಾಧ್ಯಮದಲ್ಲಿ ಕಲಿತ ಬಳಿಕ ಕರ್ನಾಟಕ ಸರ್ಕಾರದಲ್ಲಿ ಸರ್ಕಾರಿ ಕೆಲಸ ಸಿಗೋದು ಕಷ್ಟವಾಗಿತ್ತಂತೆ. ಈ ಕಾರಣಕ್ಕೂ ಹಲವರು ಆಗ ಎಸ್‌ಎಸ್‌ಎಲ್‌ಸಿ ಮುಗಿದ ತಕ್ಷಣವೇ ಭಾರತೀಯ ಸೇನೆಗೆ ಸೇರ್ಪಡೆಯಾಗುತ್ತಿದ್ದರಂತೆ.

ಸುತಾರ್ ಕುಟುಂಬದಂತೆ ಮಲಿಕವಾಡ ಗ್ರಾಮದಲ್ಲಿ ಹಲವು ಕುಟುಂಬಗಳಿವೆ. ಒಂದೊಂದು ಮನೆಯಲ್ಲಿ ಮೂರ್ನಾಲ್ಕು ಜನ ಯೋಧರು ಇರುವ ಕುಟುಂಬಗಳು ಇಲ್ಲಿ ಸಿಗುತ್ತೆ.‌ ಮಲಿಕವಾಡ ಗ್ರಾಮದ ಲಕ್ಷ್ಮೀ ದೇವಸ್ಥಾನ ಬಳಿ ಇರುವ ಖೋತ್ ಕುಟುಂಬದಲ್ಲಿ ನಾಲ್ಕು ಜನ ವೀರಯೋಧರಿದ್ದಾರೆ. ಎನ್ ಎಸ್‌ಜಿ ಬ್ಲ್ಯಾಕ್‌ಕ್ಯಾಟ್ ಕಮಾಂಡೋದಲ್ಲಿ ಕಮಾಂಡೋ ಆಗಿದ್ದ ವಿಜಯ್ ಖೋತ್ 1999ರಲ್ಲಿ ತಾಲಿಬಾನ್ ಉಗ್ರರು ಕಂದಹಾರ್‌ನಲ್ಲಿ ಇಂಡಿಯನ್ ಏರ್ ಲೈನ್ಸ್‌ಗೆ ಸೇರಿದ ವಿಮಾನ ಹೈಜಾಕ್ ಮಾಡಿದಾಗ ಆ ಆಪರೇಷನ್ ಮಾಡಲು ನಿಯೋಜನೆಗೊಂಡಿದ್ದರು‌‌. ಆದ್ರೆ ಕಾರಣಾಂತರಗಳಿಂದ ಆ ಮಿಷನ್ ಮುಂದುವರಿಯಲಿಲ್ಲ ಅಂತಾರೆ ವಿಜಯ್ ಖೋತ್. ಬಳಿಕ 1987ರಲ್ಲಿ ಶ್ರೀಲಂಕಾ ಶಾಂತಿ ಸೇನಾ ತಂಡದಲ್ಲಿ ತೆರಳಿ ಅಲ್ಲಿ ಸೇವೆ ಮಾಡಿದನ್ನೂ ಮೆಲುಕು ಹಾಕುತ್ತಾರೆ ಮಾಜಿ ಎನ್‌ಎಸ್‌ಜಿ ಕಮಾಂಡೋ ವಿಜಯ್ ಖೋತ್. ಇನ್ನು ವಿಜಯ್ ಖೋತ್ ಸಹೋದರರಾದ ಮಾರುತಿ ಖೋತ್ ಸಿಆರ್​ಪಿಎಫ್​ನಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿ ಬಂದಿದ್ದಾರೆ. ಮತ್ತೋರ್ವ ಸಹೋದರ ಸುಭಾಷ್ ಖೋತ್ ಆರ್ಮಿ ಆರ್ಟಿಲರಿಯಲ್ಲಿ ಸೇವೆ ಸಲ್ಲಿಸಿದವರು. ಸದ್ಯ ಮಾರುತಿ ಖೋತ್ ಪುತ್ರ ಸುಹಾಸ್ ಖೋತ್ ಸಹ ಪುಣೆಯ ಆರ್ಮಿ ಮೆಡಿಕಲ್ ಕಾರ್ಪ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ತಮ್ಮ ಮನೆಯ ನಾಲ್ವರು ಸೇವೆ ಸಲ್ಲಿಸಿದ ಬಗ್ಗೆ ಎಕ್ಸ್ ಎನ್​ಎಸ್​ಜಿ ಕಮಾಂಡೋ ವಿಜಯ್ ಖೋತ್ ಪತ್ನಿ ಹೆಮ್ಮೆಯಿಂದ ಹೇಳುತ್ತಾರೆ. ಅವರು ಸೇವೆ ಸಲ್ಲಿಸುವಾಗ ನಮಗೆ ಯಾವುದೇ ರೀತಿಯ ಭಯ ಇರಲಿಲ್ಲ. ಏಕಂದ್ರೆ ನಮ್ಮ ಊರಿನ ಯೋಧರನ್ನು ಮಸೋಬಾ ಹಾಗೂ ಮಲ್ಲಿಕಾರ್ಜುನ ದೇವರು ಕಾಪಾಡುತ್ತಾರೆ ಅಂತಾ ನಂಬಿಕೆ ಇದೆ ಅಂತಾ ಹೆಮ್ಮೆಯಿಂದ ಹೇಳುತ್ತಾರೆ.

ಗ್ರಾಮದ ಮಸೋಬಾ ಹಾಗೂ ಮಲ್ಲಿಕಾರ್ಜುನ ದೇವರಿಗೆ ಪ್ರತಿ ದಿನ ಪೂಜೆ

ಹೌದು ಮಲಿಕವಾಡ ಗ್ರಾಮದಲ್ಲಿರುವ ಮಸೋಬಾ ಹಾಗೂ ಮಲ್ಲಿಕಾರ್ಜುನ ದೇವರಿಗೆ ಈ ಗ್ರಾಮದ ಪ್ರತಿಯೊಬ್ಬರು ನಿತ್ಯವೂ ನಮಿಸುತ್ತಾರೆ. ಮಲಿಕವಾಡ ಗ್ರಾಮದಲ್ಲಿ ಈವರೆಗೆ ಐನೂರಕ್ಕೂ ಹೆಚ್ಚು ಜನ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಹಲವು ಯುದ್ಧಗಳಲ್ಲಿ ಹೋರಾಡಿ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಯಾರೊಬ್ಬರೂ ಸಹ ಯುದ್ಧದಲ್ಲಿ ಮಡಿದ ಉದಾಹರಣೆ ಇಲ್ಲ. ಅದಕ್ಕೆ ಕಾರಣ ಮಲಿಕವಾಡ ಗ್ರಾಮದಲ್ಲಿ ಇರುವಂತಹ ಮಸೋಬಾ ದೇವರು ಅಂತಾರೆ ಈ ಗ್ರಾಮದ ಮಾಜಿ ಸೈನಿಕರು. ಮಲಿಕವಾಡ ಗ್ರಾಮದಲ್ಲಿ ಯಾರೇ ಸೇನೆಗೆ ಭರ್ತಿ ಆಗಿ ಸೇವೆ ಸಲ್ಲಿಸಲು ಹೋಗುವ ಮುನ್ನ ಮಸೋಬಾ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರಂತೆ. ಅಷ್ಟೇ ಅಲ್ಲದೇ ಪ್ರತಿ ಬಾರಿ ರಜೆಗೆಂದು ಊರಿಗೆ ಬಂದಾಗ ಮೊದಲು ಬರೋದೇ ಈ ಮಸೋಬಾ ಹಾಗೂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ. ಮಲಿಕವಾಡ ಗ್ರಾಮದ ಪ್ರತಿಯೊಬ್ಬ ಯೋಧರಿಗೆ ಮಸೋಬಾ ದೇವರ ಶ್ರೀರಕ್ಷೆ ಇದೆ. ಹೀಗಾಗಿ ಹಲವು ಯುದ್ಧಗಳಲ್ಲಿ ಹೋರಾಡಿದರೂ ಮಸೋಬಾ ಗ್ರಾಮದ ಯಾರೊಬ್ಬರೂ ಹುತಾತ್ಮರಾಗಿಲ್ಲ ವೀರಯೋಧರಾಗಿ ಹೋರಾಡಿ ಸುರಕ್ಷಿತರಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಇದೇ ನಮಗೆ ಧೈರ್ಯ. ಭಾರತೀಯ ಸೇನೆಯವರು ಒಂದೇ ಒಂದು ಕರೆ ನೀಡಲಿ ನಾವು ಮತ್ತೆ ದೇಶ ಸೇವೆಗೆ ಮರಳಲು ಸದಾ ಸಿದ್ಧ ಅಂತಾರೆ ಮಲಿಕವಾಡ ಗ್ರಾಮದ ಮಾಜಿ ಸೈನಿಕರು.

ಇದನ್ನೂ ಓದಿ: Krantiveer Sangolli Rayanna: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದು ಜನಿಸಿದ ಸಂಗೊಳ್ಳಿ ರಾಯಣ್ಣನ ನೆನೆಯೋಣ

ಇನ್ನು ಮಲಿಕವಾಡ ಗ್ರಾಮದಲ್ಲಿ ವಾಸವಿರುವ ಅಂಕಲೆ ಕುಟುಂಬದಲ್ಲಿಯೂ ಸಹ ನಾಲ್ವರು ಯೋಧರಿದ್ದಾರೆ. ಭಾರತೀಯ ಸೇನೆಯಲ್ಲಿ ಸುಬೇದಾರರಾಗಿದ್ದ ದಿವಂಗತ ಗಣಪತಿ ಅಂಕಲೆ ಪುತ್ರ ಸಾಗರ್ ಅಂಕಲೆ ಈಗ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಗರ್ ಅಂಕಲೆ ಅವರ ಸಹೋದರಿಯ ಪುತ್ರರಾದ ಅಂಜೇಶ್ ಪಾಟೀಲ್ ಅಸ್ಸಾಂ ರೈಫಲ್ಸ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಮತ್ತೋರ್ವ ಮಗ ಅಭಯ್ ಪಾಟೀಲ್ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸೈನಿಕ ಸಾಗರ್ ಅಂಕಲೆ ಸಹೋದರಿ ರಾಜಶ್ರೀ ಮನೆಯಲ್ಲಿ ನಾನು ನನ್ನ ಮಗಳು, ತಾಯಿ ಮೂವರೇ ಹೆಣ್ಣುಮಕ್ಕಳು ಇರೋದು. ಗಂಡು ಮಕ್ಕಳೆಲ್ಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ದೇಶಸೇವೆ ಮಾಡುತ್ತಿರೋದಕ್ಕೆ ನಮಗೂ ಹೆಮ್ಮೆ ಇದೆ. ಅವರು ಆಗಾಗ ಫೋನ್ ಮಾಡುತ್ತಿರುತ್ತಾರೆ. ವರ್ಷಕ್ಕೊಮ್ಮೆ ರಜೆಗೆ ಬರ್ತಾರೆ. ಅವರ ಫೋಟೋಗಳನ್ನು ಮೊಬೈಲ್​ನಲ್ಲಿ ನೋಡುತ್ತಾ ಕಾಲ ಕಳೆಯುತ್ತೇವೆ. ನಮ್ಮ ಊರಿನ ಪ್ರತಿಯೊಂದು ಮನೆಯಲ್ಲಿ ದೇಶ ಕಾಯುವ ಯೋಧ ಇದ್ದಾನೆ. ದೇಶ ಕಾಯುವ ಯೋಧರ ರಕ್ಷಣೆಗೆ ನಮ್ಮ ಗ್ರಾಮದ ಮಸೋಬಾ ದೇವರಿದ್ದಾರೆ. ನಮಗೆ ಯಾವುದೇ ಭಯವಿಲ್ಲ ಹೊರತಾಗಿ ಹೆಮ್ಮೆ ಇದೆ ಅಂತಾ ಖುಷಿಯಿಂದ ಹೇಳ್ತಾರೆ ಸೈನಿಕನ ಸೋದರಿ ರಾಜಶ್ರೀ.

ಸೈನಿಕ್ ಟಾಕಳಿ ಎಂಬಂತೆ ಸೈನಿಕ್ ಮಲಿಕವಾಡ್​ ಕೂಗು

ಇನ್ನು ಮಹಾರಾಷ್ಟ್ರದಲ್ಲಿರುವ ಟಾಕಳಿ ಅನ್ನೋ ಗ್ರಾಮದಲ್ಲಿ ಪ್ರತಿ ಗ್ರಾಮದಲ್ಲಿ ಸೈನಿಕರಿದ್ದು ಆ ಗ್ರಾಮಕ್ಕೆ ಅಲ್ಲಿಯ ಸರ್ಕಾರ ಸೈನಿಕ್ ಟಾಕಳಿ ಅಂತಾ ಮರುನಾಮಕರಣ ಮಾಡಿದೆ. ಅದೇ ರೀತಿ ಮಲಿಕವಾಡ ಗ್ರಾಮವನ್ನು ಸಹ ಸೈನಿಕ್ ಮಲಿಕವಾಡ್ ಅಂತಾ ಮರುನಾಮಕರಣ ಮಾಡಬೇಕು ಎಂಬುದು ಈ ಗ್ರಾಮದ ಪ್ರತಿಯೊಬ್ಬರ ಆಗ್ರಹ. ಇಲ್ಲಿ ನಾವು ನಿಮಗೆ ತೋರಿಸಿದ್ದು ಕೆಲವೇ ಕೆಲವು ಕುಟುಂಬಗಳ ಸ್ಟೋರಿಯನ್ನು ಈ ಗ್ರಾಮದ ಪ್ರತಿಯೊಂದು ಕುಟುಂಬದಲ್ಲಿಯೂ ದೇಶಸೇವೆ ಸಲ್ಲಿಸುವ ಯೋಧರಿದ್ದು ಒಬ್ಬೊಬ್ಬರದ್ದು ಒಂದೊಂದು ಕಥೆಯಿದೆ. ಮಲಿಕವಾಡ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ದೇಶ ಕಾಯುವ ವೀರಯೋಧ ಇರುವುದು ನಿಜಕ್ಕೂ ಕರುನಾಡ ಪಾಲಿಗೆ ಬೆಳಗಾವಿ ಪಾಲಿಗೆ ಹೆಮ್ಮೆಯ ವಿಷಯ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ