ಬೆಳಗಾವಿ, ಜನವರಿ 18: 50 ಸಾವಿರ ರೂ. ಸಾಲ ಮರಳಿ ನೀಡದಿದ್ದಕ್ಕೆ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ. ಆರೋಪಿ ವಿರುದ್ಧ ಫೋಕ್ಸೋ (Pocso) ಕಾಯ್ದೆಯಡಿ ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆಯನ್ನು ಮದುವೆಯಾದ ಆರೋಪಿ ವಿಶಾಲ್ ಡವಳಿ ಮತ್ತು ಅವಮ ತಾಯಿ ರೇಖಾ ಡವಳಿಯನ್ನು ಪೊಲೀಸರು ಬಂಧಿಸಿದ್ದಾರೆ.
“ಮೂಲತಃ ಸವದತ್ತಿ ತಾಲೂಕ ಯಕ್ಕುಂಡಿ ಗ್ರಾಮದ ಬಾಲಕಿ ಅನಾರೋಗ್ಯದಿಂದ ತನ್ನ ತಾಯಿಯೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದಳು. ಮಗಳ ಆಸ್ಪತ್ರೆ ಖರ್ಚಿನ ಸಂಬಂಧ ಬಾಲಕಿಯ ತಾಯಿ ಬೆಳಗಾವಿ ಮಂಗಾಯಿನಗರ ವಡಗಾಂವ ನಿವಾಸಿಯಾಗಿರುವ ಆರೋಪಿ ರೇಖಾ ಪುಂಡಲೀಕ ಡವಳಿ ಬಳಿ 50 ಸಾವಿರ ಹಣ ಪಡೆದಿದ್ದರು. ಹಣ ವಾಪಸ್ಸು ನೀಡಲು ಸಾಧ್ಯವಾಗದಿದ್ದಾಗ ಬಾಲಕಿ ತಾಯಿ ಬಂಗಾರದ ಕಿವಿಯೊಲೆಯನ್ನು ಆರೋಪಿಗಳ ಬಳಿ ಒತ್ತೆ ಇಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ, “ನನ್ನ ಮಗ ವಿಶಾಲನಿಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ” ಎಂದು ಬಾಲಕಿಯ ತಾಯಿಗೆ ಹೇಳಿದ್ದಾಳೆ. ಇದಕ್ಕೆ ಬಾಲಕಿ ತಾಯಿ ಒಪ್ಪಿಲ್ಲ. ಹಾಗೇ, ಬಾಲಕಿ ಕೂಡ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, “ನಾನು ಶಾಲೆ ಕಲೆಯುತ್ತೇನೆ. ಮದುವೆ ಆಗುವುದಿಲ್ಲ” ಅಂತ ಹೇಳಿದ್ದಾಳೆ.
“ನಂತರ, ವಿಶಾಲ ಡವಳಿ, ರೇಖಾ ಡವಳಿ, ವಿಶಾಲ ಅಣ್ಣ ಶ್ಯಾಮ ಮತ್ತು ಚಿಕ್ಕಮ್ಮ 2024ರ ನವೆಂಬರ್ 17 ರಂದು ಬಾಲಕಿಯ ಮನೆಗೆ ಹೋಗಿದ್ದಾರೆ. ಅಲ್ಲಿ, ಬಾಲಕಿ ಮತ್ತು ಬಾಲಕಿ ಚಿಕ್ಕಪ್ಪನನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕೂರಿಸಿಕೊಂಡು ವಡಗಾಂವ ಮಂಗಾಯಿನಗರದಲ್ಲಿರುವ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ.”
“ಆರೋಪಿಗಳ ಮನೆಯಲ್ಲಿ, ಬಾಲಕಿ ತಾಯಿ “ನಮ್ಮ ಹತ್ತಿರ ಹಣವಿಲ್ಲ ನಮಗೆ ತೊಂದರೆ ಕೊಡಬೇಡಿ. ಹಣ ಇದ್ದಾಗ ಕೊಡುತ್ತೇವೆ. ಇಲ್ಲವೆಂದರೆ ನಾವು ಒತ್ತೆ ಇಟ್ಟ ಬಂಗಾರವನ್ನು ನೀವೆ ಇಟ್ಟುಕೊಳ್ಳಿ. ನಾವು ನಿಮ್ಮ ಮಗನಿಗೆ ನಮ್ಮ ಮಗಳನ್ನು ಕೊಡುವುದಿಲ್ಲ” ಅಂತ ಹೇಳಿದ್ದಾರೆ. ಆಗ, ಆರೋಪಿ ರೇಖಾ “ನನ್ನ ಮಗನ ಜೊತೆ ನಿಮ್ಮ ಮಗಳನ್ನು ಮದುವೆ ಮಾಡಿಸಿಯೇ ಮಾಡಿಸುತ್ತೇನೆ” ಎಂದು ಹೇಳಿದ್ದಾಳೆ.”
ಇದನ್ನೂ ಓದಿ: 2 ಸಾವಿರ ಹಣಕ್ಕಾಗಿ ಕೊಲೆ ಮಾಡಿ ಊರಲ್ಲಿ ಜಾಲಿಯಾಗಿ ಇದ್ದ ಆರೋಪಿಗಳು ಅರೆಸ್ಟ್ ಆಗಿದ್ದೇ ರೋಚಕ
“ಅದೇ ದಿನ ರಾತ್ರಿ 10:30ರ ಸುಮಾರಿಗೆ ಆರೋಪಿ ವಿಶಾಲ, ಈತನ ತಂದೆ-ತಾಯಿ ಮತ್ತು 7-8 ಜನರು ಬಾಲಕಿಯನ್ನು ಅಥಣಿಗೆ ಕರೆದುಕೊಂಡು ಹೋಗಿದ್ದಾರೆ. ಮರದಿನ ನವೆಂಬರ್ 18 ರಂದು ನಸುಕಿನ ಜಾವ 5 ಗಂಟೆ ಆರೋಪಿ ವಿಶಾಲನೊಂದಿಗೆ ಬಲವಂತವಾಗಿ ಬಾಲಕಿಯ ಮದುವೆ ಮಾಡಿಸಿದ್ದಾರೆ. ನಂತರ, ಅಲ್ಲಿಂದ ಬಾಲಕಿಯನ್ನು ಆರೋಪಿ ವಿಶಾಲ ಡವಳಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಂದು, ವಿಶಾಲ ಡವಳಿ ಬಾಲಕಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿದ್ದಾನೆ. ಅಲ್ಲದೇ, ವಿಶಾಲ ಮತ್ತು ಈತನ ತಂದೆ-ತಾಯಿ ಬಾಲಕಿಗೆ ಕಿರುಕುಳ ನೀಡಿದ್ದಾರೆ” ಎಂದು ದೂರಿನಲ್ಲಿ ದಾಖಲಾಗಿದೆ.
ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಸಖಿ ಕೇಂದ್ರದಲ್ಲಿರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Sat, 18 January 25