ಬೆಳಗಾವಿ, ಜೂನ್.10: ಬೆಳಗಾವಿಯಲ್ಲಿ ಬೃಹತ್ ಮರ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಯುವಕ ಮೃತಪಟ್ಟಿದ್ದಾನೆ (Death). ನಿನ್ನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರ ಬಿದ್ದು ಬೈಕ್ನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೂವರ ಪೈಕಿ ಇಬ್ಬರು ಮೃತಪಟ್ಟಿದ್ದು ಮತ್ತೋರ್ವ ಗಾಯಾಳುವಿಗೆ ಚಿಕಿತ್ಸೆ ಮುಂದುವರೆದಿದೆ.
ನಿನ್ನೆ ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್(21) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ರಾತ್ರಿ ವಿಠ್ಠಲ್ ತಳವಾರ (20) ಕೂಡ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಇನ್ನೋರ್ವ ಯುವಕ ಸ್ವಪ್ನಿಲ್ ದೇಸಾಯಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಮೂವರು ಒಂದೇ ಬೈಕ್ನಲ್ಲಿ ಬರುತ್ತಿದ್ದಾಗ ಇವರ ಮೇಲೆ ಬೃಹತ್ ಮರ ಬಿದ್ದಿತ್ತು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಜುಲೈ ನಗರದಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು ವಸಂತ್ ಪಾಟೀಲ್ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಶೋ ರೂಮ್ ಬೆಂಕಿಗೆ ಆಹುತಿಯಾಗಿದೆ. ಶೋ ರೂಮ್ಗೆ ಬೆಂಕಿ ತಗುಲಿ 5 ಟ್ರ್ಯಾಕ್ಟರ್ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಟ್ರ್ಯಾಕ್ಟರ್ಗಳು ಸುಟ್ಟು ಕರಕಲಾಗಿದ್ದವು. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಪಾಳಮೋಕ್ಷ ಬೆಂಬಲಿಸಿದ ವಿಕೃತ ಮನಸ್ಸುಗಳಿಗೆ ತಿರುಗೇಟು ನೀಡಿದ ಕಂಗನಾ
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಟೋಲ್ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಬ್ಬಳ್ಳಿ-ಗದಗ ರಸ್ತೆಯ ಭದ್ರಾಪುರ ಸಮೀಪದ ಟೋಲ್ ಬಳಿ ಕಾರು ಬರುತ್ತಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಕಾರಿಗೆ ಬೆಂಕಿ ಆವರಿಸಿಕೊಂಡಿದೆ.
ಟೆಂಪೋ ಟ್ರಾವೆಲರ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಸೀತನಾಯಕನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಗಾಯಾಳುಗಳು ಮಾಲೂರು ಸರ್ಕಾರಿ ಆಸ್ಪತ್ರೆ ಹಾಗೂ ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ. ಸೀಮಂತ ಕಾರ್ಯಕ್ರಮ ಮುಗಿಸಿಕೊಡು ಹೋಗುವ ವೇಳೆ ದುರ್ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ