ಬೆಳಗಾವಿ: ಖಾನಾಪುರ ಸುಳೆಗಾಳಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು, ರೈತನ ಬಂಧನ

ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಿಂದ ಹೆಚ್ಚು ಹೆಚ್ಚು ವರದಿಯಾಗುತ್ತಿದ್ದ ಮಾನವ-ವನ್ಯಜೀವಿ ಸಂಘರ್ಷ ಈಗ ಬೆಳಗಾವಿ ಜಿಲ್ಲೆಗೂ ಕಾಲಿಟ್ಟಿದೆ. ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಮೃತಪಟ್ಟಿದ್ದು, ಜಮೀನಿನ ಬೇಲಿಗೆ ವಿದ್ಯುತ್ ಸಂಪರ್ಕ ಕೊಟ್ಟ ಆರೋಪದಲ್ಲಿ ರೈತರೊಬ್ಬರ ಬಂಧನವಾಗಿದೆ.

ಬೆಳಗಾವಿ: ಖಾನಾಪುರ ಸುಳೆಗಾಳಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು, ರೈತನ ಬಂಧನ
ಘಟನಾ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು.
Updated By: Ganapathi Sharma

Updated on: Nov 03, 2025 | 11:41 AM

ಬೆಳಗಾವಿ, ನವೆಂಬರ್ 3: ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ರೈತರ ಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ ಕನೆಕ್ಷನ್ ನೀಡಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟಿದ್ದು ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಆನೆಯಾಗಿದ್ದು, ಭಾನುವಾರ ಮಧ್ಯಾಹ್ನ ಘಟನೆ ನಡೆದಿತ್ತು. ಜಮೀನಿನ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದಲ್ಲಿ ರೈತ ಗಣಪತಿ ಸಾತೇರಿ ಗುರವ್ ಅವರನ್ನು ಅರಣ್ಯ ಇಲಾಖೆ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಪ್ರಕರಣದಲ್ಲಿ ಗಣಪತಿಯ ಮಗ ಶಿವಾಜಿ ಗುರವ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ತನಿಖೆಗೆ ಆದೇಶಿಸಿದ್ದಾರೆ. ಜತೆಗೆ, ಐದು ದಿನಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆರ್‌ಎಫ್‌ಓ ಶಿವಾನಂದ ಅವರ ನೇತೃತ್ವದ ತಂಡ ಸ್ಥಳದಲ್ಲಿ ಮಾಹಿತಿ ಕಲೆ ಹಾಕಿದ್ದು, ತನಿಖೆ ನಡೆಸುತ್ತಿದೆ.

ಆನೆಗಳ ಮರಣೋತ್ತರ ಪರೀಕ್ಷೆ ಇಂದು ಬೆಳಿಗ್ಗೆ ನೆರವೇರಿಸಲಾಯಿತು. ಬಳಿಕ ಅರಣ್ಯ ಇಲಾಖೆಯ ವತಿಯಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ವಿದ್ಯುತ್ ಸಂಪರ್ಕ ವಿಚಾರವಾಗಿ, ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಅವರಿಗೂ ಅರಣ್ಯ ಇಲಾಖೆ ನೋಟಿಸ್ ನೀಡಿದೆ.

ಇದನ್ನೂ ಓದಿ: ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ: ಏಕಲವ್ಯ ತಂಡದಿಂದ ಕಾರ್ಯಾಚರಣೆ ಯಶಸ್ವಿ

ಈ ಘಟನೆ ಕರ್ನಾಟಕದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷದ ಬಗ್ಗೆ ಮತ್ತೆ ಚರ್ಚೆಹುಟ್ಟುಹಾಕಿದೆ. ವನ್ಯಜೀವಿ ಸುರಕ್ಷತೆ ಹಾಗೂ ಜನರ ರಕ್ಷಣೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ