ಮಹಿಳೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ: ಸಾಂತ್ವನ ಹೇಳಲು ಮನೆಗೆ ಹೋಗಿದ್ದ ಗ್ರಾ.ಪಂ. ಸದಸ್ಯೆಯನ್ನೂ ಬಂಧಿಸಿದರಾ ಪೊಲೀಸರು?

ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಏಳು ಮಂದಿ ಪೈಕಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಯುವತಿ ಮನೆಗೆ ಹೋಗಿದ್ದ ಗ್ರಾ.ಪಂ ಸದಸ್ಯೆ ಯುವತಿ ತಾಯಿ ಸಹೋದರಿ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ಬಂಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಹಿಳೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ: ಸಾಂತ್ವನ ಹೇಳಲು ಮನೆಗೆ ಹೋಗಿದ್ದ ಗ್ರಾ.ಪಂ. ಸದಸ್ಯೆಯನ್ನೂ ಬಂಧಿಸಿದರಾ ಪೊಲೀಸರು?
ಓಡಿ ಹೋದ ಯುವಕನ ಮನೆಯ ಸ್ಥಿತಿ
Edited By:

Updated on: Dec 12, 2023 | 1:45 PM

ಬೆಳಗಾವಿ, ಡಿ.12: ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು (Woman) ವಿವಸ್ತ್ರಗೊಳಿಸಿ ಹಲ್ಲೆ (Assault) ಮಾಡಿದ ಪ್ರಕರಣ ಅಧಿವೇಶನದಲ್ಲೂ ಸದ್ದು ಮಾಡಿದೆ. ಮತ್ತೊಂದೆಡೆ ಮಾತನಾಡಿಸಲು ಯುವತಿ ಮನೆಗೆ ಹೋಗಿದ್ದ ಗ್ರಾ.ಪಂ ಸದಸ್ಯೆ ಯುವತಿ ತಾಯಿ ಸಹೋದರಿ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ಬಂಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಕತಿ ಪೊಲೀಸರ ವಿರುದ್ಧ ಗ್ರಾ.ಪಂ ಸದಸ್ಯೆ ಸಂಗೀತಾ ಪತಿ ಆಕ್ರೋಶ ಹೊರ ಹಾಕಿದ್ದಾರೆ.

ಯುವತಿ ತಾಯಿ ಪಾರ್ವತಿ ಹಾಗೂ ಗ್ರಾ.ಪಂ ಸದಸ್ಯೆ ಸಂಗೀತಾ ಇಬ್ಬರು ಸಹೋದರಿಯರು. ಅಕ್ಕನ ಮಗಳು ಓಡಿ ಹೋದ ಸುದ್ದಿ ಕೇಳಿ ಘಟನೆ ನಡೆದ ದಿನ ಬೆಳಗ್ಗೆ 7ಕ್ಕೆ ಯುವತಿ ಮನೆಗೆ ಸಂಗೀತಾ ಹೋಗಿದ್ದರು. ಇದೇ ವೇಳೆ ಮನೆಗೆ ಬಂದ ಪೊಲೀಸರು ನೀವು ದೂರು ಕೊಡಿ ಬನ್ನಿ ಅಂತಾ ಕರೆದುಕೊಂಡು ಹೋಗಿ ಕಾಕತಿ ಠಾಣೆಗೆ ಹೋದ ಬಳಿಕ ಸಂಗೀತಾರನ್ನು ಬಂಧಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಪತಿ ಸದಾಶಿವ ಮತ್ತು ಸಹೋದರ ಕಾಡಪ್ಪ ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಏಳು ಮಂದಿ ಪೈಕಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ತಾವು ಹೆಣ್ಣಾಗಿದ್ದುಕೊಂಡು, ಮತ್ತೊಬ್ಬ ಹೆಣ್ಣಿನ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂಬ ಆರೋಪ ಸಂಬಂಧ ಅರೆಸ್ಟ್ ಮಾಡಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಈಗ ಗ್ರಾ.ಪಂ ಸದಸ್ಯೆ ಸಂಗೀತಾ ಅವರ ಪತಿ, ನನ್ನ ಹೆಂಡತಿ ಯಾವ ತಪ್ಪೂ ಮಾಡಿಲ್ಲ. ಅಕ್ಕನ ಮಗಳು ಓಡಿ ಹೋದ ವಿಷಯ ತಿಳಿಯುತ್ತಿದ್ದಂತೆ ಮಾತನಾಡಿಸಲು ಹೋಗಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್

ಇನ್ನು ಬೆಳಗಾವಿಯಲ್ಲಿ ನಡೆದ ಈ ಅನಾಗರಿಕ ಪ್ರಕರಣ ಇಂದು ಬೆಳಗಾವಿ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಬಿಜೆಪಿ ಶಾಸಕ ಸುನಿಲ್ ಕುಮಾರ್ ವಿಧಾನಸಭೆಯಲ್ಲಿ ಘಟನೆ ಬಗ್ಗೆ ಪ್ರಸ್ತಾಪಿಸಿ, ಮಹಿಳೆ ಮತ್ತು ಮಹಿಳೆಯ ಕುಟುಂಬಕ್ಕೆ ರಕ್ಷಣೆ ಕೊಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಶಶಿಕಲಾ ಜೊಲ್ಲೆ ಸಹ ಧ್ವನಿಗೂಡಿಸಿದ್ರು.

ಇದನ್ನೂ ಓದಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ 4 ಮಹಿಳೆಯರು ಹಿಂಡಲಗಾ ಜೈಲಿಗೆ ಶಿಫ್ಟ್

ಬಿಜೆಪಿ ನಾಯಕರ ಪ್ರಸ್ತಾಪಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಲ್ಲೆಗೊಳಗಾದ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತದೆ ಎಂದ್ರು. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಇಂದು ಬೆಳಗಾವಿ ಬಿಮ್ಸ್​ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಮಹಿಳೆ ಕಮಲವ್ವಳ ಆರೋಗ್ಯ ವಿಚಾರಿಸಿದ್ರು. ಮಹಿಳೆಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಸಹ, ಬಿಮ್ಸ್​ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು. ಅಷ್ಟೇ ಅಲ್ಲ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ರು. ಈ ವೇಳೆ ಸಂತ್ರಸ್ತ ಮಹಿಳೆ ಕಮಲವ್ವ, ನನ್ನ ಮಗನಿಗೂ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತ ಮಹಿಳೆಗೆ ಸಖಿ ಒನ್ ಸ್ಟಾಪ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಒಟ್ಟು ನಾಲ್ವರು ವೈದ್ಯರು ಸೇರಿ 8 ಸಿಬ್ಬಂದಿ ಚಿಕಿತ್ಸೆ ನೀಡ್ತಿದ್ದಾರೆ. ಬಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ಅಧೀಕ್ಷಕ ಎ.ಬಿ.ಪಾಟೀಲ್ ಸಹ ಭೇಟಿ ನೀಡಿ, ಮಹಿಳೆ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಪ್ರಕರಣದ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ. ಗೃಹ ಸಚಿವರ ಸೂಚನೆ ಮೇರೆಗೆ ಎಸಿಪಿ ಗಿರೀಶ್ ನೇತೃತ್ವದ ತಂಡಕ್ಕೆ ತನಿಖೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಆದೇಶಿಸಿದ್ದಾರೆ. ಪ್ರಕರಣ ಸಂಬಂಧ 12 ಆರೋಪಿಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಯುವತಿಯ ತಂದೆ ಬಸಪ್ಪ ನಾಯಕ್, ಚಿಕ್ಕಪ್ಪ ರಾಜು ನಾಯಕ್, ಯಲ್ಲಪ್ಪ ನಾಯಕ್, ಯುವತಿ ಸಹೋದರರಾದ ಕೆಂಪಣ್ಣ, ಲಕ್ಕಪ್ಪ, ಯುವತಿಯ ತಾಯಿ ಪಾರ್ವತಿ, ಇಬ್ಬರು ಅಪ್ರಾಪ್ತರು ಸೇರಿ 12ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ. ತಡರಾತ್ರಿ ನಾಲ್ವರು ಮಹಿಳಾ ಆರೋಪಿಗಳನ್ನ ಜಡ್ಜ್​ ಮುಂದೆ ಹಾಜರು ಪಡಿಸಿ, ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಮೂವರು ಪುರುಷ ಆರೋಪಿಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇಂದು ಸ್ಥಳ ಮಹಜರು ನಡೆಸ್ತಿದ್ದಾರೆ. ಕೋರ್ಟ್​ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ಕಸ್ಟಡಿಗೆ ಕೋರಲಿದ್ದಾರೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ