
ಬೆಳಗಾವಿ, ನವೆಂಬರ್ 16: ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದ್ದು, ಮತ್ತೊಂದು ಕೃಷ್ಣಮೃಗ ಇಂದು ಸಾವನ್ನಪ್ಪಿದೆ. ಆ ಪೈಕಿ ಮೃಪಟ್ಟ ಒಟ್ಟು ಕೃಷ್ಣಮೃಗಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ನ.13ರಂದು ಕಿರು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳು ಮೃತಪಟ್ಟಿದ್ದರೆ, ನಿನ್ನೆ ಒಂದೇ ದಿನ 20 ಸಾವನ್ನಪ್ಪಿದ್ದವು.
ಕೃಷ್ಣಮೃಗಗಳ ಸಾವಿನ ಸಂಬಂಧ ವೈದ್ಯ ಡಾ.ಚಂದ್ರಶೇಖರ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ಮೃತ ಕೃಷ್ಣ ಮೃಗಗಳ ಕಿಡ್ನಿ, ಹಾರ್ಟ್, ಲಿವರ್, ರಕ್ತ ಎಲ್ಲವನ್ನೂ ಸ್ಯಾಂಪಲ್ ಪಡೆದಿದ್ದೇವೆ. ಅವು ಲ್ಯಾಬ್ಗೆ ರವಾನೆಯಾಗಲಿದ್ದು, ಮಂಗಳವಾರದ ಹೊತ್ತಿಗೆ ಕೃಷ್ಣಮೃಗಗಳ ಸಾವಿನ ಕುರಿತ ವರದಿ ಬರಲಿದೆ. ಬಳಿಕ ಅದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಅವರಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷ್ಣಮೃಗಗಳ ಸಾವಿನ ಕೇಸ್, ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ
ಇನ್ನು, ಗಳಲೆ ರೋಗದಿಂದ ಕೃಷ್ಣ ಮೃಗಗಳು ಮೃತಪಟ್ಟಿರುವ ಶಂಕೆ ಇದೆ ಎಂದು ಟಿವಿ9ಗೆ ಮೃಗಾಲಯಗಳ ಸದಸ್ಯ ಕಾರ್ಯದರ್ಶಿ ಸುನೀಲ್ ತಿಳಿಸಿದ್ದಾರೆ. ಇಂದು ಬೆಳಗ್ಗೆ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃಗಾಲಯ ಕೂಡ ಪರಿಶೀಲನೆ ಆಗಿದೆ. ಘಟನೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಕಂಡು ಬಂದಿಲ್ಲ. 8 ಕೃಷ್ಣಮೃಗಗಳು ಮೃತಪಟ್ಟ ಸಂದರ್ಭದಲ್ಲಿಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಅದಾಗಿಯೂ ಎಲ್ಲಿಯಾದರೂ ಸಿಬ್ಬಂದಿ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ಕೃಷ್ಣಮೃಗಗಳು ಮೃತಪಟ್ಟ ಪ್ರಕರಣ ವಿಚಾರವಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ದಿಕ್ಕನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಿದ್ರಾ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಆಹಾರದಿಂದ ಉಂಟಾದ ಸಮಸ್ಯೆಯಲ್ಲಿ ಕೃಷ್ಣ ಮೃಗಗಳ ಸಾವಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಬ್ಯಾಕ್ಟೀರಿಯಾ ಇನ್ಫೆಕ್ಷನ್ನಿಂದ ಅವು ಮೃತಪಟ್ಟಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಎಫ್ಎಸ್ಎಲ್ಗೂ ಸ್ಯಾಂಪಲ್ ಕಳುಹಿಸಿದ್ದೇವೆ ಎಂದು ಹೇಳುತ್ತಿದ್ದು, ಪ್ರಯೋಗಾಲಯದ ವರದಿ ಬರುವ ಮುನ್ನವೇ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಎಂದು ಅಧಿಕಾರಿಗಳು ಹೇಳಿದ್ದೇಗೆ ಎನ್ನುವ ಪ್ರಶ್ನೆ ಉದ್ಭವಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:46 pm, Sun, 16 November 25