ಬೆಳಗಾವಿ: ಮೂರು ವರ್ಷಕ್ಕೊಮ್ಮೆ ನಡೆಯೋ ಜಾತ್ರೆ ಅದು. ಆದ್ರೆ ಪ್ರತೀ ಸಲಕ್ಕಿಂತ ಈ ಸಲ ಆ ಗ್ರಾಮದಲ್ಲಿ ಹೆಚ್ಚು ಕುತೂಹಲ ಮೂಡಿತ್ತು. ಯಾಕಂದ್ರೆ ಅಲ್ಲೊಂದು ಹೈವೋಲ್ಟೇಜ್ ಸ್ಪರ್ಧೆ ನಡೆದಿತ್ತು. ಮೊದಲ ಬಾರಿಗೆ ನಡೆದ ಆ ಸ್ಪರ್ಧೆ ಅಲ್ಲಿನ ಮಂದಿಗೆ ಸಖತ್ ಖುಷಿ ಕೊಟ್ಟಿತ್ತು.
ಸುನಾಮಿಯಂತೆ ಶರವೇಗ. ಚಿರತೆಯಂತೆ ಮಿಂಚಿನ ಓಟ. ಅರೆಕ್ಷಣದಲ್ಲೇ ಮೈ ಜುಂ ಎನ್ನಿಸೋ ಸಂಚಾರ. ಅಬ್ಬಬ್ಬಾ.. ರಸ್ತೆ ತುಂಬೆಲ್ಲಾ ಜನ ಕಿಕ್ಕಿರಿದಿದ್ರೆ, ಎಲ್ಲರನ್ನೂ ಸೀಳಿ ಎತ್ತು, ಕುದುರೆಗಳು ಓಟ ಕಿತ್ತಿದ್ವು. ಮಿಂಚಿನಂತೆ ಮರೆಯಾಗಿ ಎಲ್ಲರ ಹುಬ್ಬೇರಿಸಿದ್ವು.
ರೇಸ್ ಅಂದ್ರೆನೆ ಹಂಗೆ ಬಿಡಿ. ಅಲ್ಲಿ ಸಾಹಸಿಗರ ಕಮಾಲ್ ಒಂದ್ಕಡೆಯಾದ್ರೆ ನೋಡೋರ ಮೈಮನ ಪುಳಕಗೊಳ್ಳುತ್ತೆ. ಅದ್ರಲ್ಲೂ ಈ ಗ್ರಾಮೀಣ ಕ್ರೀಡೆಗಳು ಅಂದ್ರಂತೂ ಒಂದ್ ಕೈ ಹೆಚ್ಚೇ ಅನ್ಬೋದು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ನಡೆದ ಬಂಡಿ ಓಟದ ದೃಶ್ಯಗಳಿವು. ಮೂರು ವರ್ಷಕ್ಕೊಮ್ಮೆ ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರೆಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ.
ಅದ್ರಲ್ಲೂ ಇದೇ ಮೊದಲ ಸಲ ಜಾತ್ರೆಯಲ್ಲಿ ಕುದುರೆ ಗಾಡಿ, ಜೋಡೆತ್ತಿನ ಗಾಡಿ ಮತ್ತು ಎತ್ತು, ಕುದುರೆ ಜೋಡಿ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಹತ್ತರವಾಟ ಗ್ರಾಮದಿಂದ ಜೈನಾಪುರ ಗೇಟ್ವರೆಗೂ ಒಟ್ಟು ಆರು ಕಿಲೋ ಮೀಟರ್ ಓಟದ ಸ್ಪರ್ಧೆ ಇದಾಗಿತ್ತು. ಸ್ಪರ್ಧೆಯಲ್ಲಿ ದಾನೋಳಿ ಗ್ರಾಮದ ಬಂಡಾ ಕಿಲಾರೆ ಫಸ್ಟ್ ಬಂದು 50 ಸಾವಿರ ಬಹುಮಾನ ಪಡೆದ್ರು.
ಇನ್ನು ಸ್ಪರ್ಧೆಯಲ್ಲಿ ಕುದುರೆ ಗಾಡಿ ಓಟ ಹೆಚ್ಚು ಗಮನ ಸೆಳೆದಿತ್ತು. ಚಿರತೆ ವೇಗದಲ್ಲಿ ಓಡುತ್ತಿದ್ದ ಕುದುರೆಗಳನ್ನ ನೋಡಿ ಜನ ಕೇಕೆ ಹಾಕಿದ್ರು. ಇದಾದ ಬಳಿಕ ಒಂದು ಎತ್ತು ಮತ್ತು ಒಂದು ಕುದುರೆಯನ್ನ ಒಂದೇ ಬಂಡಿಗೆ ಕಟ್ಟಿ ಓಡಿಸಲಾಯಿತು. ಕುದುರೆಯಷ್ಟೇ ಸ್ಪೀಡ್ನಲ್ಲಿ ಎತ್ತುಗಳು ಓಡಿ ಸೈ ಎನಿಸಿಕೊಂಡಿದ್ವು.
ಇನ್ನು ಮೂರು ವಿಭಾಗದ ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್, ಕೊಲ್ಲಾಪುರ, ಹುಕ್ಕೇರಿ, ಸಂಕೇಶ್ವರ, ನಿಪ್ಪಾಣಿ, ರಾಯಬಾಗ, ಗೋಕಾಕ್ ಸೇರಿದಂತೆ ಹಲವು ಕಡೆಗಳಿಂದ ಸ್ಪರ್ಧಿಗಳು ಬಂದಿದ್ರು. ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಬಂಡಿ ಓಟದ ಸ್ಪರ್ಧೆ ಆಯೋಜಿಸಿದ್ರೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.
ಇಷ್ಟು ದಿನ ಜಾತ್ರೆ ಹೆಸ್ರಲ್ಲಿ ದೇವರ ದರ್ಶನ ಪಡೆದು ಪೂಜೆ ಮಾಡಿ ಪ್ರಸಾದ ಸೇವಿಸಿ ಹೋಗ್ತಿದ್ದ ಭಕ್ತರಿಗೆಲ್ಲಾ ಈ ಸಲ ಹೊಸ ಅನುಭವ ಸಿಕ್ಕಿತ್ತು. ಕುದುರೆ ಹಾಗೂ ಎತ್ತಿನ ಬಂಡಿ ಓಟದ ಸ್ಪರ್ಧೆ ಜಾತ್ರೆಯ ಸೊಬಗನ್ನ ಮತ್ತಷ್ಟು ಹೆಚ್ಚಿಸಿತ್ತು.
Published On - 2:30 pm, Tue, 18 February 20