ಬೆಳಗಾವಿ: ಹಿಂದೂ ಪದಕ್ಕೆ ಇರುವ ಅರ್ಥದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಮತ್ತೊಮ್ಮೆ ಸ್ಪಷ್ಟನೆ ನೀಡಲು ಯತ್ನಿಸಿದರು. ತಮ್ಮ ಹೇಳಿಕೆಯು ವ್ಯಾಪಕ ವಿವಾದಕ್ಕೆ ಗ್ರಾಸವಾದ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ವಿವರ ನೀಡಿದ ಅವರು, ನನ್ನ ಹೇಳಿಕೆಯು ತಪ್ಪು ಎಂದಾದರೆ ಕ್ಷಮೆ ಯಾಚಿಸುವುದಷ್ಟೇ ಅಲ್ಲ, ರಾಜೀನಾಮೆಯನ್ನೂ ಕೊಡುತ್ತೇನೆ ಎಂದರು. ‘ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಆಳವಾದ ಅಧ್ಯಯನದ ಅನುಭವದಿಂದಲೇ ನಾನು ಈ ಹೇಳಿಕೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದರು.
‘ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂಬ ಅರ್ಥವಿದೆ. ಶಬ್ದಕೋಶ ಮತ್ತು ವಿಕಿಪೀಡಿಯಾದಲ್ಲಿ ಇರುವುದನ್ನೇ ನಾನು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು, ಸಮರ್ಪಕವಾಗಿ ಪರಿಶೀಲಿಸಲಿ. ಯಾವುದೇ ಧರ್ಮ, ಜಾತಿ, ಸಮಾಜದ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರಿಗೆ ಸೂಕ್ತ ಎನಿಸುವ ಸಂಸ್ಥೆಗಳಿಗೆ ತನಿಖೆ ಮಾಡಿಸಲಿ. ನನ್ನ ಜತೆ ಚರ್ಚೆಗೆ ಬಂದರೆ ನಾನೇ ಅವರಿಗೆ ಮನವರಿಕೆ ಮಾಡಿಕೊಡುವೆ. ಚರ್ಚೆಗೆ ಬಂದವರಿಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧನಿರುವೆ ಎಂದು ಹೇಳಿದರು.
ಹಿಂದೂ ಶಬ್ದಕ್ಕೆ ಅಶ್ಲೀಲ ಎನ್ನುವ ಅರ್ಥವಿದೆ ಎಂದು ನಾನು ಹೇಳಿದ ಬಳಿಕ ನನ್ನ ಹೇಳಿಕೆಯನ್ನು ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆ. ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸುತ್ತಿದ್ದಾರೆ. ಹಿಂದೂ ಶಬ್ದವು ಪರ್ಷಿಯನ್ ಭಾಷೆಯಿಂದ ಬಂದಿದ್ದು ಎಂದು ನಾನು ಹೇಳಿದ್ದೇನೆ. ಅವರು ಕೆಟ್ಟ ಶಬ್ದ ಬಳಸಿದ್ದಾರೆ ಅಂತ ನಾವು ಹೇಳಬೇಕಿತ್ತು. ಆದರೆ ಇವರು ಅಶ್ಲೀಲ ಎಂಬ ಅರ್ಥವಿದೆ ಎಂದು ಹೇಳಿದ್ದನ್ನೇ ದೊಡ್ಡದು ಮಾಡಿಕೊಂಡು ಕುಳಿತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂ ಶಬ್ದದ ಬಗ್ಗೆ ಪ್ರಸ್ತಾಪಿಸಿ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆಯು ವಿವಾದಕ್ಕೀಡಾದ ನಂತರ ಕಾಂಗ್ರೆಸ್ನ ಹಿರಿಯ ನಾಯಕರು ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಜಾಧವ್ ನಗರದಲ್ಲಿರುವ ಕಚೇರಿಯಲ್ಲಿ ಸತೀಶ್ ಜಾರಕಿಹೊಳಿ ಮಾಧ್ಯಮಗೋಷ್ಠಿ ಕರೆದಿದ್ದರು. ಕಳೆದ ಭಾನುವಾರ (ನ 6) ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ‘ಮನೆಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮ’ದಲ್ಲಿ ಹಿಂದೂ ಶಬ್ದದ ಅರ್ಥದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.
Published On - 11:56 am, Tue, 8 November 22