ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮುನ್ನೆಲೆಗೆ: ಕಾಂಗ್ರೆಸ್​ ಶಾಸಕನಿಂದಲೇ ಸರ್ಕಾರಕ್ಕೆ ಪತ್ರ

ಶಾಸಕ ರಾಜು ಕಾಗೆ ಬರೆದ ಪತ್ರದೊಂದಿಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಜೋರಾಗಿದೆ. 15 ಜಿಲ್ಲೆಗಳಿಗೆ ಅಭಿವೃದ್ಧಿ ಅನ್ಯಾಯ, ಮಲತಾಯಿ ಧೋರಣೆ ಆರೋಪಿಸಿ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಕಾಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಬೆಳಗಾವಿ ಅಧಿವೇಶನದಲ್ಲಿ ಬೇಡಿಕೆ ಈಡೇರದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯ ಧ್ವಜಾರೋಹಣದ ಎಚ್ಚರಿಕೆಯನ್ನೂ ಹೋರಾಟ ಸಮಿತಿ ನೀಡಿದೆ.

ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮುನ್ನೆಲೆಗೆ: ಕಾಂಗ್ರೆಸ್​ ಶಾಸಕನಿಂದಲೇ ಸರ್ಕಾರಕ್ಕೆ ಪತ್ರ
ಶಾಸಕ ರಾಜು ಕಾಗೆ
Updated By: ಪ್ರಸನ್ನ ಹೆಗಡೆ

Updated on: Nov 12, 2025 | 10:59 AM

ಬೆಳಗಾವಿ, ನವೆಂಬರ್​ 12: ಉತ್ತರ ಕರ್ನಾಟಕ ಪ್ರತ್ಯೇಕ ‌ರಾಜ್ಯದ ಕೂಗು ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ಶಾಸಕ ರಾಜು ಕಾಗೆ ಪತ್ರ ಬರೆದಿದ್ದಾರೆ. ರಾಜು ಕಾಗೆ ಪತ್ರದ ಬೆನ್ನಲ್ಲೇ ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಮೂರು ಬೇಡಿಕೆಗಳಿಗೆ ಆಗ್ರಹ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇವನ್ನು ಈಡೇರಿಸದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಎಚ್ಚರಿಕೆ ನೀಡಲಾಗಿದೆ.

ಶಾಸಕ ರಾಜು ಕಾಗೆ ಪತ್ರದಲ್ಲಿ ಏನಿದೆ?

ಉತ್ತರ ಕರ್ನಾಟಕ‌ ರಾಜ್ಯವನ್ನಾಗಿಸಿ ಎಂದು ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಪತ್ರಬರೆದಿರುವ ಶಾಸಕ ರಾಜು ಕಾಗೆ, 15 ಜಿಲ್ಲೆಗಳನ್ನೊಳಗೊಂಡ ಉತ್ತರ ಕರ್ನಾಟಕ‌ ಪ್ರತ್ಯೇಕವಾಗಿಸಲು ಕೋರಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯ ಆಗುತ್ತಿದ್ದು, ಮಲತಾಯಿ ಧೋರಣೆ ತಾರತಮ್ಯ ತೋರಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಹೋರಾಟಕ್ಕೆ ಶಾಸಕ ಕಾಗೆ ಬೆಂಬಲ ನೀಡಿದ್ದು, ಚಳಿಗಾಲದ ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ. ದಿವಂಗತ ಉಮೇಶ್ ಕತ್ತಿ ನಿಧನದ ಬಳಿಕ ಆಪ್ತ‌ ಶಾಸಕ ಕಾಗೆಯಿಂದ ಈಗ ಉತ್ತರ ಕರ್ನಾಟಕ‌ ಪ್ರತ್ಯೇಕ ರಾಜ್ಯದ ಕೂಗು ವ್ಯಕ್ತವಾಗಿದೆ.

ಇದನ್ನೂ ಓದಿ:  ಕೆಎಸ್​ಆರ್​ಟಿಸಿಯ ಈ ಬಸ್​ನಲ್ಲಿ ಇಂದಿನಿಂದ ಸಿಗುತ್ತೆ ನಂದಿನಿ ಸ್ನ್ಯಾಕ್ ಕಿಟ್!

ಚರ್ಚೆಗೆ ಗ್ರಾಸವಾಗಿದ್ದ ಉಮೇಶ್​ ಕತ್ತಿ ಹೇಳಿಕೆ

ರಾಜ್ಯದಲ್ಲಿ 2.5 ಕೋಟಿ ಇದ್ದ ಜನಸಂಖ್ಯೆ 6.5 ಕೋಟಿ ಆಗಿದೆ. ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಭಾಗ ಮಾಡಬೇಕಿದೆ. ಕರ್ನಾಟಕದಲ್ಲಿ ಎರಡು, ಉತ್ತರಪ್ರದೇಶದಲ್ಲಿ ಐದು ರಾಜ್ಯಗಳು, ಮಹಾರಾಷ್ಟ್ರದಲ್ಲಿ ಹೊಸ ಮೂರು ರಾಜ್ಯಗಳು ಉದಯಿಸಲಿವೆ. ಇಡೀ ದೇಶದಲ್ಲಿ ಒಟ್ಟು 50 ರಾಜ್ಯಗಳು ನಿರ್ಮಾಣವಾಗಲಿದೆ. ಈ ಬಗ್ಗೆ ಪ್ರಧಾನಿಗಳು ಚಿಂತನೆ ನಡೆಸಿದ್ದಾರೆಂಬುದು ನನ್ನ ಅನಿಸಿಕೆ. ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ. ಆ ಭಾಗಕ್ಕೆ ಅನ್ಯಾಯವಾದರೆ ಮುಂದೆಯೂ ಧ್ವನಿ ಎತ್ತುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ, ಅಭಿವೃದ್ಧಿಯೂ ಆಗಲಿ ಎಂದು ಈ ಹಿಂದೆ ಉಮೇಶ್​ ಕತ್ತಿ ಹೇಳಿದ್ದರು. ಈ ವಿಷಯ ಆ ವೇಳೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:57 am, Wed, 12 November 25