ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್​ಗಾಗಿ ಫೈಟ್: ಶಕ್ತಿಪ್ರದರ್ಶನಕ್ಕೆ ಮುಂದಾದ ಅಣ್ಣಾಸಾಹೇಬ್ ಜೊಲ್ಲೆ

| Updated By: ಆಯೇಷಾ ಬಾನು

Updated on: Oct 02, 2023 | 3:59 PM

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಫೈಟ್ ಜೋರಾಗಿದೆ. ಹಾಲಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇರುವಾಗಲೇ ತಮಗೆ ಟಿಕೆಟ್ ನೀಡುವಂತೆ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ.

ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್​ಗಾಗಿ ಫೈಟ್: ಶಕ್ತಿಪ್ರದರ್ಶನಕ್ಕೆ ಮುಂದಾದ ಅಣ್ಣಾಸಾಹೇಬ್ ಜೊಲ್ಲೆ
ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್​ಗಾಗಿ ಫೈಟ್: ಶಕ್ತಿಪ್ರದರ್ಶನಕ್ಕೆ ಮುಂದಾದ ಅಣ್ಣಾಸಾಹೇಬ್ ಜೊಲ್ಲೆ
Follow us on

ಚಿಕ್ಕೋಡಿ, ಅ.02: ಲೋಕಸಭೆ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆ ಚಿಕ್ಕೋಡಿ ಬಿಜೆಪಿ ಟಿಕೆಟ್ (Chikkodi BJP Ticket) ​ಗಾಗಿ ತೀವ್ರ ಪೈಪೋಟಿ ಶುರುವಾಗಿದೆ. ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಇರುವಾಗಲೇ ಬಿಜೆಪಿ ಟಿಕೆಟ್​ಗಾಗಿ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ರೆ ರಮೇಶ್ ಕತ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇದೆಲ್ಲದರ ಮಧ್ಯೆ ತಮಗೇ ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಫೈಟ್ ಜೋರಾಗಿದೆ. ಹಾಲಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇರುವಾಗಲೇ ತಮಗೆ ಟಿಕೆಟ್ ನೀಡುವಂತೆ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭೆ ಕ್ಷೇತ್ರದ ಪೈಕಿ ಒಂದು ಕ್ಷೇತ್ರದ ಟಿಕೆಟ್ ಗಾಗಿ ಮಹಾಂತೇಶ ಕವಟಗಿಮಠ ಈಗಾಗಲೇ ಬಹಿರಂಗವಾಗಿ ಮನವಿ ಮಾಡಿದ್ದಾರೆ. ಈ ಮಧ್ಯೆ ಚಿಕ್ಕೋಡಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಸಹ ಕಳೆದ ಬಾರಿ ತಮಗೆ ಅನ್ಯಾಯವಾಗಿದೆ. ರಾಜ್ಯಸಭಾ ಸದಸ್ಯ ಸ್ಥಾನ, ಎಂಎಲ್​ಸಿ ಸ್ಥಾನದಿಂದಲೂ ವಂಚಿತನಾಗಿದ್ದೇನೆ. ಈ ಬಾರಿ ತಮಗೆ ಬಿಜೆಪಿ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ನಿವಾಸಕ್ಕೆ ಭೇಟಿ ನೀಡಿ ನಂದಗಾಂವ ಗ್ರಾಮದಲ್ಲಿ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ರು.

ಲೋಕಸಭೆ ಬಿಜೆಪಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ್ದ ರಮೇಶ್ ಕತ್ತಿ, ರಾಜಕಾರಣ ನಿಂತ ನೀರಲ್ಲ ಅದು ಹರಿಯುತ್ತಿರಬೇಕು ಒಂದೇ ಕಡೆ ನಿಂತರೆ ದುರ್ವಾಸನೆ ಬರುತ್ತೆ ಎಂಬ ಹೇಳಿಕೆ ನೀಡಿದ್ದು ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಸಿಗದಿದ್ರೆ ಕಾಂಗ್ರೆಸ್​ನತ್ತ ಮುಖ ಮಾಡ್ತಾರಾ ಎಂಬ ಚರ್ಚೆ ಹುಟ್ಟು ಹಾಕಿದೆ. ಇನ್ನು ರಮೇಶ್ ಕತ್ತಿ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಲಕ್ಷ್ಮಣ್ ಸವದಿ ಬಿಜೆಪಿ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ಕೊಡುತ್ತೋ, ರಮೇಶ್ ಕತ್ತಿಗೆ ಟಿಕೆಟ್ ಕೊಡುತ್ತೋ ಗೊತ್ತಿಲ್ಲ. ರಮೇಶ್ ಕತ್ತಿ ಕಾಂಗ್ರೆಸ್​ ಸೇರೋದಾದ್ರೆ ಆ ವಿಚಾರವನ್ನು ಕಾಂಗ್ರೆಸ್ ನಾಯಕರಿಗೆ ಕನ್ವೇ ಮಾಡುವ ಕೆಲಸ ಮಾಡ್ತೀನಿ ಎಂದಿದ್ದರು. ಇದೆಲ್ಲದರ ಮಧ್ಯೆ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಚಿಕ್ಕೋಡಿ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದು ಅಕ್ಟೋಬರ್ 8ರಂದು ಅದ್ಧೂರಿ ಜನ್ಮದಿನ ಆಚರಿಸುವ ಮೂಲಕ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ತಲ್ವಾರ್‌, ಚೂರಿ ಝಳಪಿಸಿದ ವಿಡಿಯೋ ಹರಿಬಿಟ್ಟ ಬಿಜೆಪಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ತೀವ್ರ ಪೈಪೋಟಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಥಣಿ, ಕಾಗವಾಡ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ, ಕುಡಚಿ, ಚಿಕ್ಕೋಡಿ, ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಸ್ ಟ್ಯಾಲೆಂಟ್ ಘೋಷವಾಕ್ಯದಡಿ ಜೊಲ್ಲೆ ಗ್ರೂಪ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಂದು ಚಿಕ್ಕೋಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಕ್ಸಂಬಾದಲ್ಲಿ ‘ಚಿಕ್ಕೋಡಿ ಹ್ಯಾಸ್ ಟ್ಯಾಲೆಂಟ್’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಶೈಲ ಜಗದ್ಗುರುಗಳ ಸಾನಿಧ್ಯದಲ್ಲಿ ಇಂದು ಕಾರ್ಯಕ್ರಮ ನಡೆಸಲಾಯಿತು. ನಾಳೆ ಕೊನೆಯದಾಗಿ ಯಮ‌ಕನಮರಡಿ ಕ್ಷೇತ್ರದಲ್ಲಿ ಯಮಕನಮರಡಿ ಹ್ಯಾಸ್ ಟ್ಯಾಲೆಂಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಮಠಾಧೀಶರು, ಗಣ್ಯರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುತ್ತಿದ್ದು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 6 ತಂಡಗಳ ಆಯ್ಕೆ ಮಾಡಿ ಅಕ್ಟೋಬರ್ 7ರಂದು ಚಿಕ್ಕೋಡಿಯ ಆರ್.ಡಿ.ಹೈಸ್ಕೂಲ್ ಮೈದಾನಲ್ಲಿ ಫೈನಲ್ ಸ್ಪರ್ಧೆ ಆಯೋಜಿಸಲು ಪ್ಲ್ಯಾನ್ ಮಾಡಿದ್ದಾರೆ. ಅಕ್ಟೋಬರ್ 8ರಂದು ಅದ್ಧೂರಿ ಕಾರ್ಯಕ್ರಮ ಮೂಲಕ ಜನ್ಮದಿನ ಆಚರಣೆ ವೇಳೆ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸುವ ಮೂಲಕ ಶಕ್ತಿಪ್ರದರ್ಶನಕ್ಕೆ ಅಣ್ಣಾಸಾಹೇಬ್ ಜೊಲ್ಲೆ ಪ್ಲ್ಯಾನ್ ಮಾಡಿದ್ದಾರೆ.

ಟಿಕೆಟ್ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಣ್ಣಾಸಾಹೇಬ್ ಜೊಲ್ಲೆ, ಬಿಜೆಪಿ ಟಿಕೆಟ್​ಗಾಗಿ ಪೈಪೋಟಿ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಿರುತ್ತೇವೆ. ಅದನ್ನ ಕಾದು ನೋಡಬೇಕಾಗುತ್ತೆ. ಯಾರ ಬೇಕಾದರೂ ಟಿಕೆಟ್ ಕೇಳಬಹುದು, ಕಳೆದ ಬಾರಿ ನಾನು ಕೇಳಿದಾಗಲೂ 20 ಜನ ಕೇಳಿದ್ರು. ಆಗ ನನಗೇ ಟಿಕೆಟ್ ಸಿಕ್ಕಿತು, ಈ ಬಾರಿಯೂ ಟಿಕೆಟ್ ಕೇಳೋದು ಎಲ್ಲರಿಗೂ ಹಕ್ಕಿದೆ. ಎಲ್ಲರಿಗೂ ಸ್ಪರ್ಧೆ ಮಾಡುವ ಇಚ್ಛೆ ಇರುತ್ತದೆ, ಯಾರ ಬೇಕಾದರೂ ಕೇಳಬಹುದು, ಅದಕ್ಕೆ ಎಲ್ಲರೂ ಸ್ವತಂತ್ರರು. ಕೊನೆಗೆ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೆ ಅದಕ್ಕೆ ಬದ್ಧರಿರುತ್ತೇವೆ. ಇನ್ನು ಬಿಜೆಪಿ ಟಿಕೆಟ್ ಸಿಗದಿದ್ರೆ ಕಾಂಗ್ರೆಸ್‌ ಸೇರಲು ರಮೇಶ್ ಕತ್ತಿ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿ ಅದು ಅವರ ವೈಯಕ್ತಿಕ ವಿಚಾರ, ನಾನಂತೂ ಅವರೇನು ಹೇಳಿದ್ದಾರೆ ಕೇಳಿಲ್ಲ. ರಮೇಶ್ ಕತ್ತಿ ಬಿಜೆಪಿಯಲ್ಲೇ ಉಳಿತಾರೆ, ಬಿಜೆಪಿಯಲ್ಲೇ ಇರ್ತಾರೆ ಎಂಬ ಆತ್ಮವಿಶ್ವಾಸ ಇದೆ ಎಂದಿದ್ದಾರೆ,. ಬಿಜೆಪಿ ಲೀಡರ್‌ಲೆಸ್ ಪಾರ್ಟಿ ಎಂಬ ಲಕ್ಷ್ಮಣ್ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿ ಯಾರು ಏನು ಬೇಕಾದರೂ ಹೇಳಬಹುದು. ಲೀಡರ್ ಇದಾರೋ ಇಲ್ಲವೋ ಅನ್ನೋದು ನಮಗೆ ಗೊತ್ತಿದೆ ಇಡೀ ರಾಜ್ಯಕ್ಕೆ ಗೊತ್ತಿದೆ. ನಮ್ಮಲ್ಲಿ ಬಲಾಢ್ಯ ಲೀಡರ್‌ಗಳು ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಾರೆಯಾಗಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್​ಗಾಗಿ ಈಗಿಂದಲೇ ತೀವ್ರ ಪೈಪೋಟಿ ಶುರುವಾಗಿದ್ದು ಬಿಜೆಪಿ ಟಿಕೆಟ್ ಸಿಗದಿದ್ರೆ ರಮೇಶ್ ಕತ್ತಿ ನಡೆ ಏನಾಗಿರುತ್ತೆ? ಚಿಕ್ಕೋಡಿ ಬಿಜೆಪಿ ಟಿಕೆಟ್ ಯಾರ ಪಾಲಾಗುತ್ತೆ ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ