ಮತ್ತೆ ಮುನ್ನೆಲೆ ಬಂದ ಕುರುಬ ಸಮುದಾಯದ ಎಸ್‌ಟಿ ಮೀಸಲಾತಿ ಹೋರಾಟ: ಅ. 3ರಂದು ಮಹಾ ಅಧಿವೇಶನ
ಬೆಳಗಾವಿಯಲ್ಲಿ ಅಕ್ಟೋಬರ್ 3ರಂದು ಅಖಿಲ ಭಾರತ ರಾಷ್ಟ್ರೀಯ ಕುರುಬ ಸಮುದಾಯದ ಮಹಾಅಧಿವೇಶನ ನಡೆಯಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದೆಲ್ಲೆಡೆಯಿಂದ ಕುರುಬ ಸಮುದಾಯದ ನಾಯಕರು ಈ ಮಹಾಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಪ್ಲ್ಯಾನ್ ಮಾಡಲಾಗಿದೆ.
ಚಿಕ್ಕೋಡಿ, ಅಕ್ಟೋಬರ್ 01: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇದೆಲ್ಲದರ ಮಧ್ಯೆ ಬೆಳಗಾವಿಯಲ್ಲಿ ಅಕ್ಟೋಬರ್ 3ರಂದು ಕುರುಬ ಸಮಾಜದ (Kuruba community) ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಕುರುಬ ಸಮುದಾಯದ ಮಹಾಅಧಿವೇಶನ ನಡೆಯಲಿದೆ. ಮಹಾ ಅಧಿವೇಶನ ಮೂಲಕ ಎಸ್‌ಟಿ ಮೀಸಲಾತಿ ಹೋರಾಟ ಮತ್ತೆ ಮುನ್ನಲೆಗೆ ಬಂದಿದ್ದು ಬೆಳಗಾವಿಯ ಕುರುಬ ಸಮುದಾಯದ ನಾಯಕರು ಕಾಂಗ್ರೆಸ್ ಹೈಕಮಾಂಡ್ಗೆ ಆ ಒಂದು ಡಿಮ್ಯಾಂಡ್ ಇಟ್ಟಿದ್ದಾರೆ.
ಬೆಳಗಾವಿಯಲ್ಲಿ ಅಕ್ಟೋಬರ್ 3ರಂದು ಅಖಿಲ ಭಾರತ ರಾಷ್ಟ್ರೀಯ ಕುರುಬ ಸಮುದಾಯದ ಮಹಾಅಧಿವೇಶನ ನಡೆಯಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದೆಲ್ಲೆಡೆಯಿಂದ ಕುರುಬ ಸಮುದಾಯದ ನಾಯಕರು ಈ ಮಹಾಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಮಹಾಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯಗೆ ಅದ್ಧೂರಿ ಸನ್ಮಾನದ ಜೊತೆಗೂ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಸಿಗದಿದ್ರೆ ಕಾಂಗ್ರೆಸ್ ಸೇರ್ತಾರಾ ರಮೇಶ್ ಕತ್ತಿ?
ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರುಬ ಸಮುದಾಯಕ್ಕೆ ನೀಡುವಂತೆ ಒತ್ತಾಯಿಸಲು ಮುಂದಾಗಿದ್ದಾರೆ. ಈ ಕುರಿತು ಚಿಕ್ಕೋಡಿಯಲ್ಲಿ ಟಿವಿ9ಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡುವ ಕುರಿತು ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಪುಟದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಲಾಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಇದನ್ನು ಜಾರಿ ಮಾಡಬೇಕು ಎಂದು ಕುರುಬ ಸಮುದಾಯದ ಮಹಾ ಅಧಿವೇಶನದಲ್ಲಿ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕುರುಬ ಸಮಾಜಕ್ಕೆ ಟಿಕೆಟ್ ನೀಡುವಂತೆ ಬೇಡಿಕೆ ಇಡಲು ಸಹ ಬೆಳಗಾವಿ ಜಿಲ್ಲಾ ಕುರುಬ ಸಮಾಜದ ನಾಯಕರು ನಿರ್ಧರಿಸಿದ್ದಾರೆ. ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಿದ್ದರಾಮಯ್ಯ ಆಪ್ತ ಲಕ್ಷ್ಮಣರಾವ್ ಚಿಂಗಳೆ ಬಹಿರಂಗವಾಗಿಯೇ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಜಗುಣಾನಂದ ಸ್ವಾಮೀಜಿ ಸೇರಿದಂತೆ 3 ಸಚಿವರಿಗೆ ಜೀವ ಬೆದರಿಕೆ; ಪತ್ರದಲ್ಲಿ ಏನಿದೆ? ಇಲ್ಲಿದೆ ಓದಿ
ಬೆಳಗಾವಿ, ಚಿಕ್ಕೋಡಿ ಎರಡು ಕ್ಷೇತ್ರಗಳ ಪೈಕಿ ಒಂದು ಟಿಕೆಟ್ ಕುರುಬ ಸಮುದಾಯಕ್ಕೆ ನೀಡಲಿ. ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ನೋವಿದೆ. 1972ರಿಂದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ವಿಧಾನ ಪರಿಷತ್, ರಾಜ್ಯಸಭಾ ಸ್ಥಾನ ವಿಚಾರಕ್ಕೆ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಬಗ್ಗೆ ನಮಗೆ ನೋವಿದೆ ಎಂದಿದ್ದಾರೆ.
ಕುರುಬ ಸಮುದಾಯದ ನಾಯಕರಲ್ಲೇ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಕೊಡ್ತಾರೋ ಕೊಡಲಿ, ಬೆಳಗಾವಿ, ಚಿಕ್ಕೋಡಿ ಎರಡು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಲಿ ಎಂದು ಲಕ್ಷ್ಮಣರಾವ್ ಚಿಂಗಳೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭೆ ಟಿಕೆಟ್ ವಿಚಾರವಾಗಿ ಈಗಾಗಲೇ ಹಲವು ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಇದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ನೀಡದಿದ್ರೆ ಕಾಂಗ್ರೆಸ್ಗೆ ಕರೆತರಲು ತೆರೆಮರೆಯಲ್ಲಿ ಪ್ಲ್ಯಾನ್ ನಡೀತಿದೆ. ಈ ಮಧ್ಯೆ ಕುರುಬ ನಾಯಕರು ಕಾಂಗ್ರೆಸ್ ಟಿಕೆಟ್‌ಗೆ ಮನವಿ ಮಾಡುತ್ತಿದ್ದು ಟಿಕೆಟ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆ ಏಳುವ ಎಲ್ಲ ಲಕ್ಷಣಗಳು ಈಗಿಂದಲೇ ಗೋಚರವಾಗುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 pm, Sun, 1 October 23