ಚಿಕ್ಕೋಡಿ: ಮಾಜಿ ಉಪ-ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಅವರಿದ್ದ ಕಾರು ನಾಲೆಗೆ ಪಲ್ಟಿಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಹೊರಗೆ ತೆಗೆಯಲಾಯಿತು. ಅಪಘಾತದಲ್ಲಿ ಸಚಿವರ ಎದೆಗೆ ಪೆಟ್ಟು ಬಿದ್ದಿದ್ದು, ತಕ್ಷಣ ಅವರನ್ನು ಹಾರೂಗೇರಿ ಪಟ್ಟಣದ ಮಲ್ಲಿಕಾರ್ಜುನ ನಾರಗೊಂಡ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಅಪಘಾತದಲ್ಲಿ ಎದೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಎಕ್ಸ್ರೇ ಪರೀಕ್ಷೆ ಮಾಡಲಾಯಿತು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ಘಟನೆ ನಡೆದಿದ್ದು, ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಲಕ್ಷ್ಮಣ ಸವದಿ ಅವರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ನಾಲೆಗೆ ಪಲ್ಟಿಯಾಗಿತ್ತು.
ಅಪಘಾತ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ, ‘ಲಕ್ಷ್ಮಣ ಸವದಿ ಅವರು ಅಥಣಿಯಿಂದ ಬೆಳಗಾವಿ ಕಡೆಗೆ ಹೋಗುವಾಗ ದಾರಿ ಮಧ್ಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಿಂದ ಲಕ್ಷ್ಮಣ ಸವದಿ, ಚಾಲಕ, ಗನ್‌ಮ್ಯಾನ್ ಮತ್ತು ಆಪ್ತ ಕಾರ್ಯದರ್ಶಿಗೆ ಯಾವುದೇ ತೊಂದರೆ ಆಗಿಲ್ಲ. ದೇವರ ದಯೆಯಿಂದ ಎಲ್ಲರೂ ಆರಾಮಾಗಿದ್ದಾರೆ. ಯಾರು ಗಾಬರಿಪಡುವ ಅವಶ್ಯಕತೆ ಇಲ್ಲ. ಎಲ್ಲರ ಆಶೀರ್ವಾದ ಅಭಿಮಾನದಿಂದ ಸವದಿಯವರು ಹುಷಾರಾಗಿದ್ದಾರೆ. ಇದೊಂದು ಕೆಟ್ಟ ಗಳಿಗೆ. ದೇವರ ದಯೆಯಿಂದ ಆರಾಮಾಗಿದ್ದಾರೆ. ಹಾರುಗೇರಿ ಆಸ್ಪತ್ರೆಯಿಂದ ಮನೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಯಾವ ಕಾರ್ಯಕರ್ತರು ಅಥಣಿಗೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
Published On - 3:36 pm, Wed, 31 August 22