ಬೆಳಗಾವಿ, ನ.3: ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಬೆಳಗಾವಿಯ (Belagavi) ಮಾಧವ ನಗರದ ಯಶ್ ಹಾಸ್ಪಿಟಲ್ ಮೇಲೆ ಬೆಳಗಾವಿ ಉಪವಿಭಾಗಾಧಿಕಾರಿ, ಆರೋಗ್ಯ ಇಲಾಖೆ ಜಂಟಿ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ, ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್ ಪತ್ತೆಯಾಗಿದ್ದು, ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ.
ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆಹಚ್ಚುವ ಕಾಯ್ದೆ ಉಲ್ಲಂಘನೆಯಡಿ ಬೆಳಗಾವಿ ಉಪವಿಭಾಗಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು ಕಾನೂನು ಬಾಹಿರವಾಗಿ ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಯಶ್ ಹಾಸ್ಪಿಟಲ್ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಹೆಣ್ಣು ಭ್ರೂಣ ಪತ್ತೆ ಹಚ್ಚುವುದು ಪತ್ತೆಯಾಗಿದೆ. ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್, ಸರ್ಕಾರದ ಹಲವು ನಿಯಮಾವಳಿಗಳ ಉಲ್ಲಂಘನೆ ನ್ಯೂನತೆಯಡಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್, ಸ್ಕ್ಯಾನಿಂಗ್ ಮಾಡುವ ರೂಮ್ ಜಪ್ತಿ ಮಾಡಿದ್ದಾರೆ.
ನಿಯಮ ಉಲ್ಲಂಘನೆ ಹಿನ್ನೆಲೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಆಸ್ಪತ್ರೆಗೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಬೆಳಗಾವಿ ಎಸಿ ಶ್ರವಣಕುಮಾರ, ಪ್ರೊಬ್ರೆಷನರಿ ಐಎಎಸ್ ಶುಭಂ ಶುಕ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಎಂ.ಭೋವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ